ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ನೀರು ತರಲು ಹೋಗಿದ್ದ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ

Last Updated 7 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಜೋಧಪುರ, ರಾಜಸ್ಥಾನ: ‘ಗ್ರಾಮದಲ್ಲಿರುವ ಕೊಳವೆ ಬಾವಿಗೆ ನೀರು ತರಲು ಹೋಗಿದ್ದ ದಲಿತ ಸಮುದಾಯದ ಕಿಶನ್‌ಲಾಲ್‌ ಭೀಲ್‌ (46) ಎಂಬುವರ ಮೇಲೆ ಗುಂ‍ಪೊಂದು ಹಲ್ಲೆ ನಡೆಸಿ ಕೊಲೆ ಮಾಡಿದೆ. ರಾಜಸ್ಥಾನದ ಸೂರ್‌ಸಾಗರದ ಭೋಮಿಯಾಜಿ ಕಿ ಘಾಟಿಯಲ್ಲಿ ಘಟನೆ ನಡೆದಿದೆ’ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

‘ಗಂಭೀರವಾಗಿ ಗಾಯಗೊಂಡಿದ್ದ ಭೀಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲು ಆರೋಪಿಗಳು ನಮಗೆ ಅವಕಾಶ ನೀಡಲಿಲ್ಲ. ಪೊಲೀಸರು ಬಂದ ನಂತರ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು’ ಎಂದು ಭೀಲ್‌ ಅವರ ಸಹೋದರ ಅಶೋಕ್‌ ಆರೋಪಿಸಿದ್ದಾರೆ.

‘ಘಟನೆ ಸಂಬಂಧ ಶಕೀಲ್‌, ನಾಸೀರ್‌ ಮತ್ತು ಬಬ್ಲು ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ, ಐಪಿಸಿ ಸೆಕ್ಷನ್‌ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ಸೂರ್‌ಸಾಗರ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಗೌತಮ್‌ ದೊತಾಸರಾ ಹೇಳಿದ್ದಾರೆ.

ಘಟನೆ ಖಂಡಿಸಿ ಭೀಲ್‌ ಅವರ ಕುಟುಂಬದ ಸದಸ್ಯರು ಹಾಗೂ ಸಮುದಾಯದವರು ಪ್ರತಿಭಟನೆ ನಡೆಸಿದರು. ಆರೋಪಿಗಳನ್ನೆಲ್ಲಾ ಕೂಡಲೇ ಬಂಧಿಸಬೇಕು. ಮೃತರ ಕುಟುಂಬದವರಿಗೆ ಹಣಕಾಸಿನ ನೆರವು ಹಾಗೂ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರುವವರೆಗೂ ಮೃತರ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

‘ಮರಣೋತ್ತರ ಪರೀಕ್ಷೆ ನಡೆಸಲು ಅನುವು ಮಾಡಿಕೊಡುವಂತೆ ಕುಟುಂಬದ ಸದಸ್ಯರಿಗೆ ಮನವಿ ಮಾಡಿದ್ದೇವೆ. ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಿದ್ದೇವೆ’ ಎಂದು ಗೌತಮ್‌ ದೊತಾಸರಾ ತಿಳಿಸಿದ್ದಾರೆ.

‘ಬಂಧಿತರ ಜೊತೆ ಇನ್ನಷ್ಟು ಮಂದಿ ಕೊಳವೆ ಬಾವಿ ಮೇಲೆ ನಿಯಂತ್ರಣ ಹೊಂದಿದ್ದಾರೆ. ಅದಕ್ಕೆ ಪಂಪ್‌ಸೆಟ್‌ ಕೂಡ ಅಳವಡಿಸಿದ್ದಾರೆ. ಗ್ರಾಮದ ಇತರ ನಿವಾಸಿಗಳಿಗೆ ಬಾವಿಯ ನೀರು ಬಳಸಲು ಅವಕಾಶ ನೀಡುತ್ತಿಲ್ಲ. ಆರೋಪಿಗಳು ಮನೆಗೆ ನುಗ್ಗಿ ಭೀಲ್‌ ಹಾಗೂ ಅವರ ಮಗನ ಮೇಲೆ ಕಟ್ಟಿಗೆ ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿದ್ದಾರೆ’ ಎಂದೂ ಅಶೋಕ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT