ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ 10 ವರ್ಷಗಳಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ 631 ಕಾರ್ಮಿಕರು ಸಾವು

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ
Last Updated 20 ಸೆಪ್ಟೆಂಬರ್ 2020, 10:35 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ದೇಶದಾದ್ಯಂತ ಒಳಚರಂಡಿ ಮತ್ತು ಸೆಪ್ಟಿಕ್‌ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ 631 ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ತಿಳಿಸಿದೆ.

ಮಾಹಿತಿ ಹಕ್ಕಿನ ಅಡಿ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ರಾಷ್ಟ್ರೀಯ ಕರ್ಮಚಾರಿ ಆಯೋಗ 2010 ರಿಂದ 2020ರವರೆಗೆ ಮೃತಪಟ್ಟವರ ಸಂಖ್ಯೆಗಳನ್ನು ನೀಡಿದೆ.ಈ ಅವಧಿಯಲ್ಲಿ 2019ರಲ್ಲಿ ಅತಿ ಹೆಚ್ಚು ಮಂದಿ ಅಂದರೆ 115 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ.

ಈ ಹತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿ 122 ಮಂದಿ ಸಾವನ್ನಪ್ಪಿದ್ದಾರೆ. ಇದು ಈ ದಶಕದಲ್ಲಿ ಅತಿ ಹೆಚ್ಚು ಸಫಾಯಿ ಕರ್ಮಚಾರಿಗಳು ಸಾವಿಗೀಡಾಗಿರುವರಾಜ್ಯವಾಗಿದೆ. ಉಳಿದಂತೆ ಉತ್ತರ ಪ್ರದೇಶದಲ್ಲಿ 85, ದೆಹಲಿ ಮತ್ತು ಕರ್ನಾಟಕದಲ್ಲಿ ತಲಾ 63 ಮತ್ತು ಗುಜರಾತ್‌ನಲ್ಲಿ 61 ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದಲ್ಲಿ 50 ಸಾವಿನ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ವರ್ಷ, ಮಾರ್ಚ್ 31ರವರೆಗಿನ ಮಾಹಿತಿ ಪ್ರಕಾರ ಇಬ್ಬರು ಸಾವನ್ನಪ್ಪಿದ್ದಾರೆ. ಅಂಕಿ ಅಂಶಗಳ ಪ್ರಕಾರ, ಪ್ರತಿ ವರ್ಷ ಒಳಚರಂಡಿ ಹಾಗೂ ಶೌಚಗುಂಡಿಸ್ವಚ್ಛ ಮಾಡುವ ಕರ್ಮಚಾರಿಗಳ ಸಾವಿನ ಸಂಖ್ಯೆ ಏರುತ್ತಿರುವುದು ಕಂಡು ಬಂದಿದೆ.

‘ಬೇರೆ ಬೇರೆ ಮೂಲಗಳಿಂದ ಅಂಕಿ ಅಂಶಗಳನ್ನು ಆಧರಿಸಿ, ಮಾಹಿತಿ ನೀಡಲಾಗಿದ್ದು, ಈ ಅಂಕಿ–ಅಂಶಗಳಿಗೂ, ವಾಸ್ತವದ ಮಾಹಿತಿಗೂ ವ್ಯತ್ಯಾಸವಿದೆ‘ ಎಂದು ರಾಷ್ಟ್ರೀಯ ಕರ್ಮಚಾರಿಗಳ ಆಯೋಗ ತಿಳಿಸಿದೆ.

‘ಆಯೋಗ ಸೇರಿದಂತೆ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನು ಸೇರಿಸುವ ಕಾರಣ, ಈ ದತ್ತಾಂಶ ಆಗಾಗ್ಗೆ ಅಪ್‌ಡೇಟ್ ಆಗುತ್ತಿರುತ್ತದೆ‘ ಎಂದು ಮಾಹಿತಿ ಹಕ್ಕುದಾರರಿಗೆ ತಿಳಿಸಿದೆ.

‘ಒಳಚರಂಡಿ ಸ್ವಚ್ಛತೆ ವಿಚಾರ ಆಯಾ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದಾಗಿದ್ದು, ರಾಷ್ಟ್ರೀಯ ಕರ್ಮಚಾರಿ ಆಯೋಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಮಾಹಿತಿಯನ್ನು ನಿರ್ವಹಣೆ ಮಾಡುತ್ತದೆ‘ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಠಾನ ಮಾಡದಿರುವುದರಿಂದ ಪೌರಕಾರ್ಮಿಕರು ಇಂಥ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ‘ ಎಂದು ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಸಂಚಾಲಕ ಬೆಜವಾಡ ವಿಲ್ಸನ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕಾಯ್ದೆ ಅನುಷ್ಠಾನವಾದಾಗಿನಿಂದ ಇಲ್ಲಿವರೆಗೆ ಕಾಯ್ದೆ ಉಲ್ಲಂಘಿಸಿದ ಒಬ್ಬ ವ್ಯಕ್ತಿಗೂ ಶಿಕ್ಷೆಯಾದ ಉದಾಹರಣೆ ಇಲ್ಲ. ಒಂದು ಕಾಯ್ದೆ ಅನುಷ್ಠಾನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡುವಂತಹ ಸುಳ್ಳು ಆಶ್ವಾಸನೆಯಾಗಬಾರದು. ಇಂಥ ಕಾಯ್ದೆಗಳು ಅಸಮಾನ ಸಮಾಜದಲ್ಲಿ ಕಡ್ಡಾಯವಾಗಿ ಅನುಷ್ಠಾನವಾಗಬೇಕುಎಂದು ಬೆಜವಾಡ ಹೇಳಿದ್ದಾರೆ.

‘ಈ ಕಾಯ್ದೆ ಸರಿಯಾಗಿ ಅನುಷ್ಠಾನವಾಗದಿರುವುದೇ ಇಷ್ಟೆಲ್ಲ ಸಮಸ್ಯೆಗೆ ಕಾರಣ‘ ಎಂದುದಲಿತ ಆದಿವಾಸಿ ಶಕ್ತಿ ಅಧಿಕಾರ್ ಮಂಚ್‌ನ ಕಾರ್ಯದರ್ಶಿ ಸಂಜೀವ್ ಕುಮಾರ್, ಬೆಜವಾಡ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT