ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9.27 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ: ಮಕ್ಕಳ ಅಭಿವೃದ್ಧಿ ಸಚಿವಾಲಯ

ಕಳೆದ ವರ್ಷ ನವೆಂಬರ್‌ವರೆಗೆ ಸಮೀಕ್ಷೆ
Last Updated 6 ಜೂನ್ 2021, 8:53 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿಕಳೆದ ವರ್ಷ ನವೆಂಬರ್‌ವರೆಗೆ ಸಮೀಕ್ಷೆ ನಡೆಸಲಾಗಿದ್ದು, ‘ತೀವ್ರ ಸ್ವರೂಪದ ಅಪೌಷ್ಟಿಕತೆ’ ಹೊಂದಿರುವ6 ತಿಂಗಳಿಂದ 6 ವರ್ಷ ವಯೋಮಾನದ 9,27,606 ಮಕ್ಕಳನ್ನು ಗುರುತಿಸಲಾಗಿದೆ.

‘ತೀವ್ರ ಸ್ವರೂಪದ ಅಪೌಷ್ಟಿಕತೆ’ಯಿಂದ ಬಳಲುವ ಮಕ್ಕಳ ಸಂಖ್ಯೆ ಉತ್ತರ ಪ್ರದೇಶದಲ್ಲಿ ಅಧಿಕವಾಗಿದ್ದರೆ, ನಂತರದ ಸ್ಥಾನದಲ್ಲಿ ಬಿಹಾರ ಇದೆ.

ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.

‘ಬಡತನದಿಂದ ತತ್ತರಿಸಿರುವ ಜನರು ಕೋವಿಡ್‌–19 ಪಿಡುಗಿನಿಂದ ಮತ್ತಷ್ಟು ಸಂಕಷ್ಟಕ್ಕೀಡಾಗುವರು. ಇದು, ಈ ವರ್ಗದ ಜನರಲ್ಲಿ ಪೌಷ್ಟಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಲಿದೆ’ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.

ಉತ್ತರ ಪ್ರದೇಶದಲ್ಲಿ 3,98,359, ಬಿಹಾರದಲ್ಲಿ 2,79,427 ಮಕ್ಕಳು ತೀವ್ರ ಸ್ವರೂಪದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಲಡಾಖ್‌, ಲಕ್ಷದ್ವೀಪ, ನಾಗಾಲ್ಯಾಂಡ್‌, ಮಣಿಪುರ ಹಾಗೂ ಮಧ್ಯಪ್ರದೇಶಗಳ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ ಕಂಡು ಬಂದಿಲ್ಲ ಎಂದು ಸಚಿವಾಲಯ ತಿಳಿಸಿದೆ.

‘ಕೋವಿಡ್‌–19 ಪಿಡುಗಿನ ಮೂರನೇ ಅಲೆ ಕಾಣಿಸಿಕೊಂಡರೆ, ಆಗ ಮಕ್ಕಳ ಪೌಷ್ಟಿಕತೆ ಮೇಲೆ ಹೆಚ್ಚು ಪರಿಣಾಮ ಉಂಟಾಗುವುದು. ನಿರುದ್ಯೋಗ ಹೆಚ್ಚಾಗುವುದು. ಕುಟುಂಬಗಳ ಆರ್ಥಿಕತೆಯೂ ಕುಸಿಯುವುದರಿಂದ ಅದರ ನೇರ ಪರಿಣಾಮ ಹಸಿವಿನ ಮೇಲಾಗುತ್ತದೆ. ಹಸಿವು ತಣಿಯದಿದ್ದರೆ ಅದು ಅಪೌಷ್ಟಿಕತೆಗೆ ಕಾರಣವಾಗುತ್ತದೆ’ ಎಂದೂ ಸಚಿವಾಲಯ ಅಭಿಪ್ರಾಯಪಟ್ಟಿದೆ.

‘ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವಲ್ಲಿ ಅಂಗನವಾಡಿಗಳು ಹೆಚ್ಚು ಕ್ರಿಯಾಶೀಲವಾಗಬೇಕು’ ಎಂದು ಎಚ್‌ಎಕ್ಯೂ ಸೆಂಟರ್‌ ಫಾರ್‌ ಚೈಲ್ಡ್‌ ರೈಟ್ಸ್‌ನ ಸಹ ಸಂಸ್ಥಾಪಕಿ ಈನಾಕ್ಷಿ ಗಂಗೂಲಿ ಹೇಳುತ್ತಾರೆ.

‘ಲಾಕ್‌ಡೌನ್‌ನಿಂದಾಗಿ ಮಕ್ಕಳು ಅಂಗನವಾಡಿಗಳಿಗೆ ಹೋಗಲು ಸಾಧ್ಯವಾಗದಿದ್ದರೆ, ಅಂಗನವಾಡಿಗಳೇ ಸಂಕಷ್ಟದಲ್ಲಿರುವ ಮಕ್ಕಳ ಮನೆಗೆ ಆಹಾರವನ್ನು ತಲುಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನು ಸಿದ್ಧತೆ ಮಾಡಿಕೊಂಡಿದೆ’ ಎಂದೂ ಅವರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT