ಮುಂಬೈ: ಹವಾಮಾನ ಬದಲಾವಣೆಯ ಎಂಟು ಅಪಾಯಗಳಿಂದ ಪರಿಸರದ ಮೇಲಿನ ಭೌತಿಕ ಹಾನಿಯ ವಿಚಾರಕ್ಕೆ ಸಂಬಂಧಿಸಿ ಗುರುತಿಸಲಾದ ಅತೀ ಹೆಚ್ಚಿನ ಅಪಾಯದ ಜಗತ್ತಿನ ಅಗ್ರ 50 ಪ್ರದೇಶಗಳ ಪಟ್ಟಿಯಲ್ಲಿ ಭಾರತದ ಒಂಬತ್ತು ರಾಜ್ಯಗಳು ಸೇರಿವೆ ಎಂದು ಹೊಸ ವರದಿ ಹೇಳಿದೆ.
2050ರ ವೇಳೆಗೆ ಜಗತ್ತಿನ 2,600ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯ ಅಪಾಯವು ಪರಿಸರದ ಮೇಲೆ ಉಂಟು ಮಾಡಲಿರುವ ಭೌತಿಕ ಹಾನಿ ಲೆಕ್ಕಹಾಕಿ ಸಿದ್ಧಪಡಿಸಲಾದ ಈ ವಿಶ್ಲೇಷಣಾ ವರದಿಯನ್ನು ಕ್ರಾಸ್ ಡಿಪೆಂಡೆನ್ಸಿ ಇನಿಶಿಯೇಟಿವ್ (ಎಕ್ಸ್‌ಡಿಐ) ಬಿಡುಗಡೆ ಮಾಡಿದೆ.
ಇದರ ಮೊದಲ ವಿಶ್ಲೇಷಣಾ ವರದಿಯಲ್ಲಿ ಒಟ್ಟು ದೇಶೀಯ ಹವಾಮಾನ ಅಪಾಯ (ಜಿಡಿಸಿಆರ್) ಭಾಗದ ಪಟ್ಟಿಯಲ್ಲಿ ದೇಶದ ಒಂಬತ್ತು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಅಸ್ಸಾಂ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಪಂಜಾಬ್ ಮತ್ತು ಕೇರಳ ಸೇರಿವೆ.
ಈ ವಿಶ್ಲೇಷಣಾ ವರದಿ ಪ್ರಕಾರ, 2050ರ ವೇಳೆಗೆ ಅಗ್ರ 50ರಷ್ಟು ಅಪಾಯದ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ಶೇ 80ರಷ್ಟು ಚೀನಾ, ಅಮೆರಿಕ ಮತ್ತು ಭಾರತದ್ದಾಗಿರಲಿವೆ. ಚೀನಾ ನಂತರ ಭಾರತವು ಅಗ್ರ 50ರಲ್ಲಿ ಅತಿ ಹೆಚ್ಚು ರಾಜ್ಯಗಳನ್ನು ಹೊಂದಿದ ರಾಷ್ಟ್ರವೆನಿಸಿದೆ.
ಹಾನಿ ಅಪಾಯದ ಅಗ್ರ 100ರ ಪಟ್ಟಿಯಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿದ ಮತ್ತು ಜಾಗತಿಕ ಮಹತ್ವ ಪಡೆದಿರುವ ಏಷ್ಯಾದ ಆರ್ಥಿಕ ಕೇಂದ್ರಗಳಾದ ಬೀಜಿಂಗ್, ಜಕಾರ್ತಾ, ಹೋ ಚಿ ಮಿನ್ಹ್ ಸಿಟಿ, ತೈವಾನ್ ಮತ್ತು ಮುಂಬೈ ಕೂಡ ಸೇರಿವೆ. ಅಗ್ರ 200 ಪ್ರದೇಶಗಳಲ್ಲಿ ಏಷ್ಯಾವೇ ಮುಂಚೂಣಿಯಲ್ಲಿದೆ. ಇದರಲ್ಲಿ 114 ಪ್ರದೇಶಗಳು ಚೀನಾ ಮತ್ತು ಭಾರತದವು ಆಗಿವೆ.
‘ಒಟ್ಟಾರೆ ಹಾನಿಯ ಅಪಾಯದ ಪ್ರಮಾಣ, ಅಪಾಯದ ಉಲ್ಬಣ, ಹವಾಮಾನ ಬದಲಾವಣೆ ತೀವ್ರ ಹೆಚ್ಚಾದಂತೆ ಏಷ್ಯಾವು ಹೆಚ್ಚು ಪ್ರಮಾಣದಲ್ಲಿ ಪಾರಿಸಾರಿಕ ನಷ್ಟ ಹೊಂದಲಿದೆ. ಹದಗೆಡುತ್ತಿರುವ ಹವಾಮಾನ ಬದಲಾವಣೆ ತಡೆಗೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಹೂಡಿಕೆ ತ್ವರಿತಗೊಳಿಸುವುದು ಹೆಚ್ಚು ಲಾಭದಾಯಕ’ ಎಂದು ಎಕ್ಸ್‌ಡಿಐ ಸಿಇಒ ರೋಹನ್ ಹಮ್ದೆನ್ ಹೇಳಿದರು.
ನದಿ ಮತ್ತು ಮೇಲ್ಮೈ ಪ್ರವಾಹ, ಕರಾವಳಿ ಮುಳುಗಡೆ, ತೀವ್ರ ಉಷ್ಣಾಂಶ, ಕಾಡ್ಗಿಚ್ಚು, ಮಣ್ಣಿನ ಚಲನೆ (ಬರ-ಸಂಬಂಧಿತ ), ವಿಪರೀತ ಗಾಳಿ ಮತ್ತು ಹಿಮಗಡ್ಡೆ ಕರಗುವಿಕೆಯಂತಹ ಹವಾಮಾನ ಬದಲಾವಣೆಯ ಎಂಟು ಅಪಾಯಗಳಿಂದ ನಿರ್ಮಿತ ಪರಿಸರಕ್ಕೆ ಆಗುವ ಭೌತಿಕ ಅಪಾಯವನ್ನು ಎಕ್ಸ್‌ಡಿಐನ ಒಟ್ಟು ದೇಶೀಯ ಹವಾಮಾನ ಅಪಾಯದ ಶ್ರೇಯಾಂಕವು ಪ್ರತಿಬಿಂಬಿಸುತ್ತದೆ.
ವಿಶ್ವದ ಪ್ರತಿ ರಾಜ್ಯ, ಪ್ರಾಂತ್ಯ ಮತ್ತು ಪ್ರದೇಶ ಹೋಲಿಸಿ, ನಿರ್ಮಿತ ಪರಿಸರದ ಮೇಲೆ ಪ್ರತ್ಯೇಕವಾಗಿ ಕೇಂದ್ರೀಕರಿಸಿದ, ಹವಾಮಾನ ಬದಲಾವಣೆಯ ಭೌತಿಕ ಅಪಾಯದ ವಿಶ್ಲೇಷಣೆಯನ್ನು ನಡೆಸಿರುವುದು ಇದೇ ಮೊದಲು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.