ಬುಧವಾರ, ಮಾರ್ಚ್ 29, 2023
28 °C

ಭಾರತದೊಂದಿಗೆ ಕೋವಿಡ್ ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಅನುಮತಿಗೆ 96 ದೇಶಗಳ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದೊಂದಿಗೆ ಕೋವಿಡ್–19 ಲಸಿಕೆ ಪ್ರಮಾಣಪತ್ರಗಳಿಗೆ ಪರಸ್ಪರ ಅನುಮತಿ ನೀಡಲು 96 ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಮಂಗಳವಾರ ತಿಳಿಸಿದ್ದಾರೆ.

ಸರ್ಕಾರವು ವಿಶ್ವದ ಇತರ ರಾಷ್ಟ್ರಗಳೊಂದಿಗೆ ಮಾತುಕತೆ ಮುಂದುವರಿಸಿದೆ. ಇದರಿಂದಾಗಿ ವಿಶ್ವದ ಅತಿದೊಡ್ಡ ಕೋವಿಡ್–19 ಲಸಿಕೆ ಅಭಿಯಾನಕ್ಕೆ ಮನ್ನಣೆ ದೊರೆಯುತ್ತಿದ್ದು, ಶಿಕ್ಷಣ, ಉದ್ಯಮ ಮತ್ತು ಪ್ರವಾಸದ ಕಾರಣಕ್ಕೆ ‍ಪ್ರಯಾಣ ಕೈಗೊಳ್ಳುವವರಿಗೆ ‌ನೆರವಾಗಲಿದೆ ಎಂದೂ ಹೇಳಿದ್ದಾರೆ.

'ಸದ್ಯ ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಅನುಮತಿಗೆ 96 ದೇಶಗಳು ಒಪ್ಪಿಕೊಂಡಿವೆ. ಕೋವಿಶೀಲ್ಡ್ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ದೇಶದಲ್ಲಿ ಅನುಮೋದನೆ ಪಡೆದ ಯಾವುದೇ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರುವವರು ಪ್ರಯಾಣಿಸಲು ಅನುಮತಿ ನೀಡಲಿವೆ' ಎಂದು ಮಾಂಡವಿಯಾ ತಿಳಿಸಿದ್ದಾರೆ.

ಕೆನಡಾ, ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಐರ್ಲೆಂಡ್, ಸ್ಪೇನ್, ಬಾಂಗ್ಲಾದೇಶ, ಗ್ರೀಸ್, ಫಿನ್‌ಲ್ಯಾಂಡ್, ಆಸ್ಟ್ರಿಯಾ, ರಷ್ಯಾ, ಯುಎಇ, ಶ್ರೀಲಂಕಾ, ಪೆರು, ಬ್ರೆಜಿಲ್ ಸೇರಿದಂತೆ ಇನ್ನಿತರ ದೇಶಗಳು 96 ರಾಷ್ಟ್ರಗಳ ಪಟ್ಟಿಯಲ್ಲಿವೆ. ಈ ದೇಶಗಳ ಪ್ರಯಾಣಿಕರಿಗೆ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ವಿನಾಯಿತಿ ಸಿಗಲಿದೆ.

ವಿದೇಶಗಳಿಗೆ ಪ್ರಯಾಣಿಸಲು ಬಯಸುವವರು CoWIN ವೆಬ್‌ಸೈಟ್‌ನಲ್ಲಿ ಲಸಿಕೆ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

'ಪರಸ್ಪರ ಲಸಿಕೆ ಪ್ರಮಾಣಪತ್ರಗಳಿಗೆ ಅನುಮೋದನೆ ಪಡೆಯುವ ಹಾಗೂ ಮುಕ್ತ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆಗೆ ಆರೋಗ್ಯ ಸಚಿವಾಲಯವು ವಿಶ್ವದ ಇತರೆ ದೇಶಗಳೊಂದಿಗೆ ಮಾತುಕತೆ ಮುಂದುವರಿಸಿದೆ' ಎಂದಿದ್ದಾರೆ.

'ದೇಶದಾದ್ಯಂತ ಕೋವಿಡ್–19 ಲಸಿಕೆ ಅಭಿಯಾನದ ವೇಗ ಹೆಚ್ಚಿಸುವ ಮತ್ತು ವಿಸ್ತರಿಸುವ ಬದ್ದತೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರ ಫಲವಾಗಿ 2021ರ ಅಕ್ಟೋಬರ್ 21ರ ವೇಳೆಗೆ 100 ಕೋಟಿ ಡೋಸ್ ಲಸಿಕೆ ವಿತರಣೆಯ ಮೈಲುಗಲ್ಲನ್ನು ತಲುಪಿದ್ದೇವೆ' ಎಂದೂ ತಿಳಿಸಿದ್ದಾರೆ.

ದೇಶದಾದ್ಯಂತ ಇದುವರೆಗೆ 109.08 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು