ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬೆ ಹೈಕೋರ್ಟ್‌ ತೀರ್ಪು ಅನೂರ್ಜಿತಗೊಳಿಸಲು ಅಟಾರ್ನಿ ಜನರಲ್‌ ಮನವಿ

‘ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕ ಇರದಿದ್ದರೆ ಲೈಂಗಿಕ ದೌರ್ಜನ್ಯ ಅಲ್ಲ’ ಎಂದಿದ್ದ ನಾಗಪುರ ಪೀಠ
Last Updated 24 ಆಗಸ್ಟ್ 2021, 15:51 IST
ಅಕ್ಷರ ಗಾತ್ರ

ನವದೆಹಲಿ: ‘ಬಾಲಕಿ ಮತ್ತು ಆರೋಪಿ ನಡುವೆ ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕ ಇರದಿದ್ದಾಗ ಪೋಕ್ಸೊ ಕಾಯ್ದೆಯಡಿ ಅದನ್ನು ಲೈಂಗಿಕ ದೌರ್ಜನ್ಯ ಎನ್ನಲಾಗದು’ ಎಂಬ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಅನೂರ್ಜಿತಗೊಳಿಸುವಂತೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಸುಪ್ರೀಂಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದರು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಹಾಗೂ ಅಜಯ್‌ ರಸ್ತೋಗಿ ಅವರಿರುವ ನ್ಯಾಯಪೀಠಕ್ಕೆ ಈ ಮನವಿ ಮಾಡಿದ ಅವರು, ‘ಬಾಂಬೆ ಹೈಕೋರ್ಟ್‌ನ ಈ ತೀರ್ಪು ಅತಿರೇಕದ ಹಾಗೂ ಅಪಾಯಕಾರಿಯಾದ ಪೂರ್ವನಿದರ್ಶನವೆನಿಸುವುದು’ ಎಂದು ಪ್ರತಿಪಾದಿಸಿದರು.

‘ಒಬ್ಬ ವ್ಯಕ್ತಿ ಸರ್ಜಿಕಲ್‌ ಗ್ಲೌಸ್‌ಗಳನ್ನು ಹಾಕಿಕೊಂಡು, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೂ, ಈ ತೀರ್ಪಿನ ಪ್ರಕಾರ ಆತ ಖುಲಾಸೆಯಾಗುತ್ತಾನೆ’ ಎಂದೂ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್‌ 14ಕ್ಕೆ ಮುಂದೂಡಿತು.

ಬಾಲಕಿಯೊಬ್ಬಳ ಮೇಲೆ ಒಬ್ಬ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸೆಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲಾ ನಡೆಸಿದ್ದರು.

‘ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಬೇಕಾದರೆ, ಚರ್ಮದಿಂದ ಚರ್ಮಕ್ಕೆ ನೇರ ಸಂಪರ್ಕ ಇರಬೇಕು’ ಎಂದು ಅಭಿಪ್ರಾಯಪಟ್ಟಿದ್ದ ಅವರು, ಆರೋಪಿಯನ್ನು ದೋಷಮುಕ್ತಗೊಳಿಸಿದ್ದರು. ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT