ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಬಿಜೆಪಿ ಕಚೇರಿಗೆ ನುಗ್ಗಿ ದಾಂಧಲೆ– ಎಎಪಿಯ 20 ಕಾರ್ಯಕರ್ತರು ವಶಕ್ಕೆ

Last Updated 20 ಡಿಸೆಂಬರ್ 2021, 14:38 IST
ಅಕ್ಷರ ಗಾತ್ರ

ಅಹಮದಾಬಾದ್: ಇತ್ತೀಚಿನ ಸರ್ಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಪ್ರತಿಭಟನಾರ್ಥವಾಗಿ ಗುಜರಾತ್‌ನ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಗುಂಪು ಗಾಂಧಿ ನಗರದ ಬಿಜೆಪಿ ಕೇಂದ್ರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದು, ಬಿಜೆಪಿ ಕಾರ್ಯಕರ್ತರ ಜೊತೆ ಘರ್ಷಣೆ ನಡೆದಿದೆ.

ಬಿಜೆಪಿ ಕೇಂದ್ರ ಕಚೇರಿ‘ಕಮಲಂ’ನಲ್ಲಿ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದು, ಎಎಪಿಸ್ಥಳೀಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಸೇರಿ ಆಮ್ ಆದ್ಮಿ ಪಕ್ಷದ 20 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಸಹ ನಡೆಸಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಬರುವುದಕ್ಕೂ ಮುನ್ನ ಬಿಜೆಪಿ ಮತ್ತು ಆಮ್ ಆದ್ಮಿ ಕಾರ್ಯಕರ್ತರು ಹಿಂಸಾತ್ಮಕ ಘರ್ಷಣೆಯಲ್ಲಿ ತೊಡಗಿದ್ದು, ತಲೆಗೆ ಗಾಯದಂತಹ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ರಾಣಾ ಹೇಳಿದ್ದಾರೆ.

ಪ್ರತಿಭಟನಾಕಾರರಲ್ಲಿ ಒಬ್ಬರಾದ ಆಮ್ ಆದ್ಮಿ ನಾಯಕ ಇಸುದನ್ ಗಧ್ವಿ ಅವರು, ತಮ್ಮ ಬಳಿ ಅನುಚಿತ ವರ್ತನೆ ತೋರಿದ್ದಾರೆಂದು ಬಿಜೆಪಿಯ ಮಹಿಳಾ ಕಾರ್ಯಕರ್ತರು ಆರೋಪಿಸಿದ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆಮ್ ಆದ್ಮಿ ಕಾರ್ಯಕರ್ತರು ಗೇಟ್ ಮುರಿದು ಒತ್ತಾಯಪೂರ್ವಕವಾಗಿ ಬಿಜೆಪಿ ಕಚೇರಿಗೆ ನುಗ್ಗಿದ್ದಾರೆ. ಈ ಸಂದರ್ಭ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿದ ನಾವು ಮಹಿಳೆಯರು ಸೇರಿ 20 ಮಂದಿ ಆಮ್ ಆದ್ಮಿ ಕಾರ್ಯಕರ್ತರನ್ನು ಬಂಧಿಸಿದ್ದೇವೆ. ನಮ್ಮ ಲಾಠಿ ಚಾರ್ಜ್‌ನಿಂದ ಯಾರೊಬ್ಬರು ಗಾಯಗೊಂಡಿಲ್ಲ’ಎಂದು ರಾಣಾ ಹೇಳಿದ್ದಾರೆ.

ಆಮ್ ಆದ್ಮಿ ಕಾರ್ಯಕರ್ತರಾದ ಇಟಾಲಿಯಾ, ಗಧ್ವಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ಧರಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗುಜರಾತ್‌ನ ಎಎಪಿ ಘಟಕವು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಗುಜರಾತ್ ಅಧೀನ ಸೇವಾ ಆಯ್ಕೆ ಮಂಡಳಿ(ಜಿಎಸ್ಎಸ್‌ಎಸ್‌ಬಿ) ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT