ಕೋಲ್ಕತ್ತ: ಕೇಂದ್ರ ಯಾವುದೇ ತನಿಖಾ ಸಂಸ್ಥೆಯು ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುವೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಕಲ್ಲಿದ್ದಲು ಹಗರಣದ ಆರೋಪಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ಅಭಿಷೇಕ್ ಅವರಿಗೆ ಇತ್ತೀಚೆಗೆ ಸಮನ್ಸ್ ನೀಡಿತ್ತು. ವಿಚಾರಣೆಗಾಗಿ ದೆಹಲಿಗೆ ತೆರಳಿದ ಅವರು ಅದಕ್ಕೂ ಮುನ್ನ ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಕಲ್ಲಿದ್ದಲು ಹಗರಣದ ಹೆಸರಿನಲ್ಲಿ ಬಿಜೆಪಿಯು ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂದು ಬ್ಯಾನರ್ಜಿ ಸಹ ದೂರಿದ್ದಾರೆ.
‘ಕಳೆದ ನವೆಂಬರ್‌ನಲ್ಲಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಏನು ಹೇಳಿದ್ದೆನೋ ಅದನ್ನೇ ಈಗಲೂ ಹೇಳುತ್ತಿದ್ದೇನೆ. ನಾನು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದನ್ನು, ಅದು ಕೇವಲ 10 ಪೈಸೆಯಷ್ಟಾದರೂ ಸರಿ, ಕೇಂದ್ರ ಯಾವುದೇ ತನಿಖಾ ಸಂಸ್ಥೆ ಸಾಬೀತುಪಡಿಸಿದರೆ ಮತ್ತೆ ಸಿಬಿಐ, ಇ.ಡಿ ಯಾವುದರ ತನಿಖೆಯೂ ಅಗತ್ಯವಿಲ್ಲ. ನಾನೇ ಹೋಗಿ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೆಪ್ಟೆಂಬರ್ 6ರಂದು ವಿಚಾರಣೆಗೆ ಹಾಜರಾಗುವಂತೆ ಅಭಿಷೇಕ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.
‘ಚುನಾವಣೆಯಲ್ಲಿ ಸೋಲು ಮತ್ತು ಟಿಎಂಸಿಯನ್ನು ರಾಜಕೀಯವಾಗಿ ಎದುರಿಸಲಾಗದೆ ಅವರು (ಬಿಜೆಪಿ) ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗುತ್ತಿದ್ದಾರೆ’ ಎಂದು ಬ್ಯಾನರ್ಜಿ ದೂರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.