ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುಕೋಟೆ ಮೇಲೆ ಅನ್ಯ ಧ್ವಜ ಹಾರಿಸಿದ್ದು ಇವರೇನಾ? ಘಟನೆ ನಂತರದ ಪ್ರಮುಖಾಂಶ

Last Updated 28 ಜನವರಿ 2021, 7:30 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರಕ್ಕೆ ಈತನೇ ಕಾರಣ ಎಂದು ರೈತ ಮುಖಂಡರು ಆರೋಪ ಮಾಡಿರುವ ನಟ ಮತ್ತು ಹೋರಾಟಗಾರ ದೀಪ್ ಸಿಧು ಹೆಸರನ್ನು ದೆಹಲಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಮಂಗಳವಾರ ಸಂಜೆಯಿಂದ ಪೊಲೀಸರು ದಾಖಲಿಸಿರುವ 25 ಕ್ಕೂ ಅಧಿಕ ಎಫ್ಐಆರ್‌ಗಳಲ್ಲಿ ಕೆಲ ರೈತ ಮುಖಂಡರ ಹೆಸರುಗಳೂ ಇವೆ. ಟ್ರಾಕ್ಟರ್ ರ‍್ಯಾಲಿಯ ಒಪ್ಪಿದ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ರೈತರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ಆದರೆ, ರೈತರು ತಮ್ಮ ಶಾಂತಿಯುತ ಪ್ರತಿಭಟನೆಯನ್ನು ಹಾಳುಮಾಡಲು ಮತ್ತು ಕೆಟ್ಟ ಹೆಸರು ತರಲು ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಬಜೆಟ್ ದಿನದಂದು ಸಂಸತ್ತಿಗೆ ಪಾದಯಾತ್ರೆ ನಡೆಸುವ ಯೋಜನೆಯನ್ನು ರೈತರು ಕೈಬಿಟ್ಟಿದ್ದಾರೆ.

ದೆಹಲಿ ಹಿಂಸಾಚಾರದ ಬಳಿಕ ನಡೆದ ಬೆಳವಣಿಗೆಗಳ ಪ್ರಮುಖಾಂಶ ಇಲ್ಲಿವೆ

1. ಗಣರಾಜ್ಯೋತ್ಸವದ ದಿನ ಪಂಜಾಬಿ ನಟ ಮತ್ತು ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಘರ್ಷಣೆಯನ್ನು ಪ್ರಚೋದಿಸಿದರು ಮತ್ತು ಕೆಂಪು ಕೋಟೆಯಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಿದರು ಎಂದು ರೈತ ಮುಖಂಡರ ಒಂದು ಗುಂಪು ಆರೋಪಿಸಿದೆ. "ದೀಪ್ ಸಿಧು ಅವರಿಗೆ ಪ್ರತ್ಯೇಕತಾವಾದಿ ಒಲವಿದ್ದ ಹಿನ್ನೆಲೆಯಲ್ಲಿ ತಿಂಗಳ ಹಿಂದೆ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬಹಿಷ್ಕರಿಲಾಗಿತ್ತು. ರಾಷ್ಟ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಧ್ವಜವನ್ನು ಕೆಂಪು ಕೋಟೆಯಲ್ಲಿ ಹಾರಿಸುವುದನ್ನು ನಾನು ಖಂಡಿಸುತ್ತೇನೆ" ಎಂದು ಚಳವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಸ್ವರಾಜ್ ಭಾರತದ ಮುಖ್ಯಸ್ಥ ಯೋಗೇಂದ್ರ ಯಾದವ್ ಹೇಳಿದ್ದಾರೆ. . " ಸಿದ್ಧು ಸರ್ಕಾರದ ವ್ಯಕ್ತಿ. ಈ ಪಿತೂರಿಯನ್ನು ನಾವು ಅರ್ಥಮಾಡಿಕೊಳ್ಳಬೇಕು" ಎಂದು ರೈತ ಮುಖಂಡರೊಬ್ಬರು ಹೇಳಿದ್ದಾರೆ.

2. ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಆಯೋಜಿಸಿದ್ದ ಟ್ರಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರದ ತನಿಖೆಯ ಭಾಗವಾಗಿ ದೆಹಲಿ ಪೊಲೀಸರು ರೈತ ಮುಖಂಡರನ್ನು ತನಿಖೆ ನಡೆಸುತ್ತಿದ್ದಾರೆ. ರ‍್ಯಾಲಿಯ ಮಾರ್ಗ ಮತ್ತು ಸಮಯಕ್ಕೆ ಸಂಬಂಧಿಸಿದಂತೆ ಪೊಲೀಸರೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಂಯುಕ್ತ ಕಿಸಾನ್ ಮೋರ್ಚಾದ ರೈತ ನಾಯಕ ದರ್ಶನ್ ಪಾಲ್ ಅವರಿಗೆ ನೋಟಿಸ್ ಕಳುಹಿಸಲಾಗಿದೆ.

3. ಈ ಮಧ್ಯೆ ನಮ್ಮ ಹೋರಾಟವನ್ನು ಹಾಳು ಮಾಡುವ "ಪಿತೂರಿ" ನಡೆದಿದೆ ಎಂದು ಕಿಸಾನ್ ಮೋರ್ಚಾ ಪುನರುಚ್ಚರಿಸಿದೆ. "ಸರ್ಕಾರವು ಚಳುವಳಿಯನ್ನು ಮುರಿಯಲು ಪ್ರಯತ್ನಿಸುತ್ತಿದೆ. ಶೀಘ್ರದಲ್ಲೇ ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಮಾತುಕತೆಗಳನ್ನು ನಾನು ನಿರೀಕ್ಷಿಸುವುದಿಲ್ಲ" ಎಂದು ದರ್ಶನ್ ಪಾಲ್ ಬುಧವಾರ ಹೇಳಿದ್ದಾರೆ. ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯಟ್ ಮಾತನಾಡಿ, ದುಷ್ಕರ್ಮಿಗಳಿಗೆ ಕೆಂಪು ಕೋಟೆಗೆ ಪ್ರವೇಶಿಸಲು ಪೊಲೀಸರು ಸಹಾಯ ಮಾಡಿದ್ದಾರೆ. "ಇದು ರೈತರ ಪ್ರತಿಭಟನೆಯನ್ನು ಕೆಡಿಸುವ ಪ್ರಯತ್ನವಾಗಿದೆ" ಎಂದು ಅವರು ಹೇಳಿದ್ದಾರೆ.

4. ದೆಹಲಿ ಹಿಂಸಾಚಾರವನ್ನು ಸರ್ಕಾರ ತೀವ್ರವಾಗಿ ಖಂಡಿಸಿದೆ. "ಇತರರನ್ನು ಪ್ರಚೋದಿಸಿದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಿದ್ದನು ಭಾರತ ಸಹಿಸುವುದಿಲ್ಲ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ ಅವರು, "ದೇಶದಲ್ಲಿ ಅಶಾಂತಿಯ ಪರಿಸ್ಥಿತಿಯನ್ನು ಸೃಷ್ಟಿಸಲು ಕಾಂಗ್ರೆಸ್ ಬಯಸಿದೆ" ಎಂದು ಹೇಳಿದ್ದಾರೆ.

5. ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಆರೋಪಿಸಿರುವ ಕಾಂಗ್ರೆಸ್ ಅವರನ್ನು ತಕ್ಷಣವೇ ವಜಾ ಮಾಡಬೇಕು. "ಮೋದಿ ಸರ್ಕಾರದ ನೆರವು ಮತ್ತು ಬೆಂಬಲದೊಂದಿಗೆ ರೈತರ ಹೋರಾಟವನ್ನು ಹಾಳುಮಾಡಲು ಒಂದು ಏಕೀಕೃತ ಪಿತೂರಿ ನಡೆದಿದೆ. ಮೂರು ಕೃಷಿ ವಿರೋಧಿ ಕಾನೂನುಗಳ ಹೋರಾಟವನ್ನು ಹೂತು ಹಾಕಲು ರೈತರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಪಕ್ಷದ ಹಿರಿಯ ಮುಖಂಡ ರಂದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

6. ನಿಗದಿತ ಮಾರ್ಗದಲ್ಲಿ ಮಧ್ಯಾಹ್ನದಿಂದ ಸಂಜೆ 5 ಗಂಟೆವರೆಗೆ ನಡೆಸಬೇಕಿದ್ದ ಟ್ರ್ಯಾಕ್ಟರ್ ರ‍್ಯಾಲಿ ನಿಯಮವನ್ನು ರೈತರು ಪಾಲಿಸಿಲ್ಲ ಎಂದು ದೆಹಲಿ ಪೊಲಿಸ್ ಕಮೀಷನರ್ ಎಸ್..ಎನ್. ಶ್ರೀವಾಸ್ತವ ಹೇಳಿದ್ದಾರೆ. "ನಾವು ಮುಖ ಗುರುತಿಸುವ ವ್ಯವಸ್ಥೆಯನ್ನು ಬಳಸುತ್ತಿದ್ದೇವೆ ಮತ್ತು ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ಮತ್ತು ವಿಡಿಯೋ ತುಣುಕಿನ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಗುರುತಿಸಲ್ಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ" ಎಂದು ಅವರು ಹೇಳಿದ್ದಾರೆ.
ದರು.

7. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 19ಜನರನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಒಟ್ಟು 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಐವತ್ತು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರದಿಂದ 300 ಟ್ವಿಟರ್ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. "ಗುಪ್ತಚರ ಮಾಹಿತಿಯ" ಆಧಾರ ಮೇಲೆ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

8. ಹಿಂಸಾಚಾರದ ಬಳಿಕ ಮೊಘಲರ ಕಾಲದ ಅಪ್ರತಿಮ ಕೆಂಪು ಕೋಟೆಯನ್ನು ಜನವರಿ 31 ರವರೆಗೆ ಮುಚ್ಚಲಾಗುವುದು ಎಂದು ಭಾರತೀಯ ಪುರಾತತ್ವ ಸಮೀಕ್ಷೆ ತಿಳಿಸಿದೆ. ಮಂಗಳವಾರ ನೂರಾರು ಪ್ರತಿಭಟನಾಕಾರರು ಪ್ರವೇಶಿಸಿದ ನಂತರ ಕೋಟೆಯೊಳಗಿನ ಕೆಲವು ರಚನೆಗಳಿಗೆ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ.

9. ದೆಹಲಿಯಲ್ಲಿ ಮೃತಪಟ್ಟ ರೈತನೊಬ್ಬನ ಮರಣೋತ್ತರ ವರದಿಯಲ್ಲಿ ಆತ ಗುಂಡೇಟಿನಿಂದ ಸಾವನ್ನಪ್ಪಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. "ತನ್ನ ಟ್ರಾಕ್ಟರ್ ತಿರುಗಿಸುವ ವೇಳೆ ತೀವ್ರವಾಗಿ ಗಾಯಗೊಂಡಿದ್ದನು" ಎಂದು ಬರೇಲಿ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಚಂದ್ರ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT