ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ಸಲಹೆ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಕಾರ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತರಕ್ಷಣೆಗೆ ಕ್ರಮ
Last Updated 17 ಫೆಬ್ರವರಿ 2023, 14:35 IST
ಅಕ್ಷರ ಗಾತ್ರ

ನವದೆಹಲಿ: ಷೇರು ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ತಜ್ಞರ ಸಮಿತಿ ರಚಿಸುವ ಸಲಹೆಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು, ತಜ್ಞರ ಸಮಿತಿ ರಚಿಸುವ ಕುರಿತು ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಮಂಡಿಸಿದ ವಾದ ಆಲಿಸಿದ ಬಳಿಕ ಈ ನಿಲುವನ್ನು ಪ್ರಕಟಿಸಿತು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪಾರ್ದೀವಾಲಾ ಈ ಪೀಠದಲ್ಲಿದ್ದಾರೆ.

‘ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತರಕ್ಷಣೆ ಮುಖ್ಯ. ಹೀಗಾಗಿ ಈ ವಿಷಯದಲ್ಲಿ ಸಂಪೂರ್ಣ ಪಾರದರ್ಶಕತೆ ಅಗತ್ಯ’ ಎಂದು ನ್ಯಾಯಪೀಠ ಹೇಳಿತು.

ಅಲ್ಲದೇ, ಹಾಲಿ ನ್ಯಾಯಮೂರ್ತಿಯೊಬ್ಬರಿಂದ ಉದ್ದೇಶಿತ ತಜ್ಞರ ಸಮಿತಿಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕಿತು.

‘ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ಆಗ, ನ್ಯಾಯಾಲಯದ ಬಗ್ಗೆ ಎಲ್ಲರಲ್ಲೂ ವಿಶ್ವಾಸ ಮೂಡುತ್ತದೆ. ಈ ವಿಷಯ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನಡೆಸುವರು, ಆದರೆ ಅವರು ಸಮಿತಿಯ ಭಾಗವಾಗಿರುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಚಂದ್ರಚೂಡ್‌ ಹೇಳಿದರು.

ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ನಂತರ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಸುಮಾರು ₹10 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಇದರಿಂದ ದೇಶದ ಹೂಡಿಕೆದಾರರಿಗೆ ನಷ್ಟವಾಗಿದೆ. ಇಂತಹ ನಷ್ಟವನ್ನು ತಪ್ಪಿಸಲು ಅಗತ್ಯ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ವಿಚಾರಣೆಗೆ ಎತ್ತಿಕೊಂಡಿತ್ತು.

ಆಗ, ‘ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಕಠಿಣವಾದ ನಿಯಂತ್ರಣ ವ್ಯವಸ್ಥೆ ಬೇಕು. ಈಗ ಇರುವ ನಿಯಂತ್ರಣ ವ್ಯವಸ್ಥೆಯ ಮೌಲ್ಯಮಾಪನವೂ ಆಗಬೇಕು. ಈಗಿನ ಸ್ಥಿತಿಯ ಪರಿಶೀಲನೆಗೆ ಸಮಿತಿ ರಚನೆಯಾಗಬೇಕು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠವು ಹೇಳಿತ್ತು. ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT