ಗುರುವಾರ , ಅಕ್ಟೋಬರ್ 29, 2020
28 °C
ಇಂಜೆಕ್ಷನ್‌ ನೀಡಿ ಅತ್ಯಾಚಾರ’: ಸಂತ್ರಸ್ತೆ ತಾಯಿ ಹೇಳಿಕೆ

ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ, ಯುವತಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಲರಾಂಪುರ: ಉತ್ತರಪ್ರದೇಶದ ಬಲರಾಂಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ  22 ವರ್ಷದ ಯುವತಿಯೊಬ್ಬರು ಸಾವಿಗೀಡಾಗಿದ್ದಾರೆ.

ಹತ್ರಾಸ್‌ ಅತ್ಯಾಚಾರ ಪ್ರಕರಣ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿರುವ ನಡುವೆಯೇ ಈ ಘಟನೆ ನಡೆದಿದೆ.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿ ಮಂಗಳವಾರ  ಮನೆಗೆ ಮರಳುವಾಗ ಇಬ್ಬರು ಪುರುಷರು ದಲಿತ ಜನಾಂಗಕ್ಕೆ ಸೇರಿದ ಯುವತಿಯ ಮೇಲೆ ಎರಗಿದ್ದು ಗಂಭೀರ ಸ್ಥಿತಿಯಲ್ಲಿ ಈಕೆ ಮನೆ ಸೇರಿದ್ದಳು ಎಂದು ಕುಟುಂಬದವರು ತಿಳಿಸಿರುವುದಾಗಿ ಪೊಲೀಸ್‌ ವರಿಷ್ಠಾಧಿಕಾರಿ ದೇವ್‌ ರಂಜನ್‌ ವರ್ಮ ಹೇಳಿದ್ದಾರೆ.

ಸಮೀಪದ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಯುವತಿ ಮೃತಪಟ್ಟಳು ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಯವರು ಪೊಲೀಸರಿಗೆ ವಿಷಯ ವರದಿ ಮಾಡಿದಾಗ ಯುವತಿಯ ಕುಟುಂಬದವರು ಆಕೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು ಎಂದು ತಿಳಿಸಿದರು. ಆರೋಪಿಗಳಾದ ಶಾಹಿದ್‌ ಮತ್ತು ಸಾಹಿಲ್‌ ಎಂಬುವರನ್ನು ಬಂಧಿಸಲಾಗಿದೆ ಎಂದು ವರ್ಮ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌, ಹತ್ರಾಸ್‌ ಘಟನೆ ಬಳಿಕ ಮತ್ತೊಬ್ಬ ಮಗಳು ಬಲರಾಂಪುರದಲ್ಲಿ ಸಾಮೂಹಿಕ ಅತ್ಯಾಚಾರದಿಂದ ಸಾವಿಗೀಡಾಗಿದ್ದಾಳೆ. ಶ್ರದ್ಧಾಂಜಲಿ! ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇಂಜೆಕ್ಷನ್‌ ನೀಡಿ ಅತ್ಯಾಚಾರ’: ಸಂತ್ರಸ್ತೆ ತಾಯಿ ಹೇಳಿಕೆ

ಬುಧವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಸಂತ್ರಸ್ತೆ ತಾಯಿ, ‘ಅತ್ಯಾಚಾರಿಗಳು ಮಗಳ ಕಾಲು ಮತ್ತು ಬೆನ್ನನ್ನು ಮುರಿದಿದ್ದಾರೆ’ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಶವ ಪರೀಕ್ಷೆಯಲ್ಲಿ ಇದು ದೃಢಪಟ್ಟಿಲ್ಲ ಎಂದಿದ್ದಾರೆ.

‘ಕಾಲೇಜಿಗೆ ಸೇರಲು ನನ್ನ ಮಗಳು  ಹೋಗಿದ್ದಳು. ಬರುವಾಗ ಮೂವರು ಅವಳನ್ನು ಅಪಹರಿಸಿ ತಮ್ಮ ಕೊಠಡಿಗೆ ಒಯ್ದಿದ್ದಾರೆ. ಅಲ್ಲಿ ಅವಳಿಗೆ ಇಂಜೆಕ್ಷನ್‌ ನೀಡಿ ಅತ್ಯಾಚಾರ ಮಾಡಿದ್ದಾರೆ. ನಂತರ ಅವಳನ್ನು ಇ– ರಿಕ್ಷಾದಲ್ಲಿ ಮನೆಗೆ ಕಳುಹಿಸಿದ್ದಾರೆ. ಅವಳನ್ನು ಮನೆಯ ಹತ್ತಿರ ಬಿಟ್ಟು ರಿಕ್ಷಾ ತೆರಳಿದೆ. ನನ್ನ ಮಗಳು ನಿಂತುಕೊಳ್ಳುವ ಮತ್ತು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ‘ ಎಂದು ತಾಯಿ ವಿವರಿಸಿದ್ದಾರೆ.

ಶವಪರೀಕ್ಷೆ ಬಳಿಕ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬುಧವಾರ  ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸ್ಥಳೀಯ ಮುಖಂಡರು ಸಂತ್ರಸ್ತೆ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ₹ 6 ಲಕ್ಷ ಆರ್ಥಿಕ ನೆರವು ಒದಗಿಸುವ ಪತ್ರವನ್ನು ನೀಡಿ, ತಾಯಿಯ ಹೆಸರಿಗೆ ಹಣವನ್ನು ಮಧ್ಯಾಹ್ನದ ವೇಳೆಗೆ ವರ್ಗಾಯಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು