ಶನಿವಾರ, ನವೆಂಬರ್ 28, 2020
17 °C
ಲೈಂಗಿಕ ದೌರ್ಜನ್ಯ

ನ್ಯಾಯಮೂರ್ತಿಗಳಿಗೆ ಲಿಂಗ ಸಂವೇದನೆ ಅಗತ್ಯ: ಅಟಾರ್ನಿ ಜನರಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ‘ರಾಖಿ’ ಕಟ್ಟುವಂತೆ ಆರೋಪಿಗಳಿಗೆ ಷರತ್ತು ವಿಧಿಸುವುದು ‘ನಾಟಕ’ ಎನಿಸುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್‌ ಅಭಿಪ್ರಾಯಪಟ್ಟಿದ್ದಾರೆ.

ದೌರ್ಜನ್ಯ ಪ್ರಕರಣಗಳಲ್ಲಿ ಮುಖ್ಯವಾಗಿ ಜಾಮೀನು ನೀಡುವಾಗ ವಾಸ್ತವಾಂಶ ಗಮನಿಸಬೇಕು ಹಾಗೂ ಲಿಂಗಸಂವೇದನೆ ಇರಬೇಕು ಎಂಬ ಬಗ್ಗೆ ನ್ಯಾಯಮೂರ್ತಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದೂ ಅವರು ಹೇಳಿದರು.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ.ಖನ್‌ವಿಲ್ಕರ್ ನೇತೃತ್ವದ ಪೀಠದ ಎದುರು ಈ ಅಭಿಪ್ರಾಯ ಮಂಡಿಸಿದರು.

‘ರಾಖಿ’ ಕಟ್ಟುವಂತೆ ನೊಂದ ಯುವತಿಗೆ ಆರೋಪಿ ಮನವಿ ಮಾಡಬೇಕು’ ಎಂಬ ಷರತ್ತಿಗೆ ಅನುಗುಣವಾಗಿ ಜಾಮೀನು ನೀಡಲಾಗಿತ್ತು. ಈ ಆದೇಶಕ್ಕೆ ತಡೆ ಕೋರಿದ್ದ ಒಂಭತ್ತು ಮಂದಿ ಮಹಿಳಾ ವಕೀಲರು, ‘ಇಂಥ ಷರತ್ತು ವಿಧಿಸದಂತೆ ಕೋರ್ಟ್‌ಗಳಿಗೆ ನಿರ್ಬಂಧ ಹೇರಬೇಕು. ಇಂಥ ಕ್ರಮ ಕಾನೂನು ನೀತಿಗಳಿಗೆ ವಿರುದ್ಧವಾದುದು’ ಎಂದು ಕೋರಿದ್ದರು.

ಆರೋಪಿ ತನ್ನ ಪತ್ನಿ ಜತೆಗೂಡಿ ನೊಂದ ಯುವತಿಯ ಮನೆಗೆ ಹೋಗಿ ‘ರಾಖಿ’ ಕಟ್ಟುವಂತೆ ಕೋರಬೇಕು. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ರಕ್ಷಣೆ ನೀಡುತ್ತೇನೆ ಎಂದು ಆಕೆಗೆ ವಾಗ್ದಾನ ಮಾಡಬೇಕು ಎಂದು ಹೈಕೋರ್ಟ್ ಷರತ್ತು ಹೇರಿತ್ತು.

ವೇಣುಗೋಪಾಲ್ ಅವರು, ‘ಲಿಂಗ ಸಂವೇದನೆ ಇರಬೇಕು’ ಎಂಬ ಮಾತು ಬಳಸಿದಾಗ, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಸಂಜೀವ್‌ ಖನ್ನಾ ಅವರಿದ್ದ ಪೀಠವು, ‘ಲಿಂಗ ಸಂವೇದನೆ ನಮ್ಮ ತೀರ್ಪಿನ ಭಾಗವಾಗಿರುತ್ತದೆ’ ಎಂದು ಹೇಳಿತು.

ಈ ಬಗ್ಗೆ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತತ್ತು ರಾಜ್ಯ ಅಕಾಡೆಮಿಗಳು ಜಾಗೃತಿ ಮೂಡಿಸಬೇಕು. ಲಿಂಗ ಸಂವೇದನೆ ವಿಷಯವು ನ್ಯಾಯಮೂರ್ತಿಗಳ ನೇಮಕಾತಿ ಪರೀಕ್ಷೆಯ ಭಾಗವಾಗಿರಬೇಕು ಎಂದು ವೇಣುಗೋಪಾಲ್ ಹೇಳಿದರು.

‘ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ಅಟಾರ್ನಿ ಜನರಲ್, ಅರ್ಜಿದಾರರು, ಸಂಬಂಧಿತ ಭಾಗಿದಾರರು ಹೇಳಿಕೆ ದಾಖಲಿಸಬಹುದು’ ಎಂದು ಹೇಳಿದ ಪೀಠ ಪ್ರಕರಣದ ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು