ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೇನೆಯ ತಾರುಣ್ಯಕ್ಕೆ ‘ಅಗ್ನಿಪಥ’ ಯೋಜನೆಗೆ ಕೇಂದ್ರ ಒಪ್ಪಿಗೆ

ಸೇನಾ ನೇಮಕಾತಿ ನೀತಿ ಬದಲು; 4 ವರ್ಷಕ್ಕೆ ಗುತ್ತಿಗೆ ನೇಮಕ
Last Updated 14 ಜೂನ್ 2022, 19:52 IST
ಅಕ್ಷರ ಗಾತ್ರ

ನವದೆಹಲಿ: ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಸೈನಿಕರ ನೇಮಕಕ್ಕಾಗಿ ‘ಅಗ್ನಿಪಥ’ ಎಂಬ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ. ಇದರೊಂದಿಗೆ ಸೈನಿಕರ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ಉಂಟಾಗಲಿದೆ. ಸೈನಿಕರ ಸಂಬಳ ಮತ್ತು ಪಿಂಚಣಿಯಿಂದಾಗಿ ಸರ್ಕಾರದ ಮೇಲೆ ಬಿದ್ದಿರುವ ಹೊರೆ ಕಡಿಮೆ ಮಾಡಿಕೊಳ್ಳುವುದು ಹಾಗೂ ಸಶಸ್ತ್ರ ಪಡೆಗಳು ಹೆಚ್ಚು ತಾರುಣ್ಯಯುತವಾಗಿ ಇರುವಂತೆ ನೋಡಿಕೊಳ್ಳುವುದು ಹೊಸ ಯೋಜನೆಯ ಉದ್ದೇಶ ಎಂದು ಹೇಳಲಾಗಿದೆ.

ಪ್ರಧಾನಿ ನೇತೃತ್ವದ ಸಂಪುಟದ ಭದ್ರತಾ ಸಮಿತಿಯು ‘ಅಗ್ನಿಪಥ’ ಯೋಜನೆಗೆ ಮಂಗಳವಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ಈ ಸಮಿತಿಯ ಸಭೆಯ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡಿದರು. ದೇಶದಲ್ಲಿರುವ ‘ದೇಶಭಕ್ತ ಮತ್ತು ಸ್ಫೂರ್ತಿದಾಯಕ’ ಯುವ ಜನರಿಗೆ ದೇಶಕ್ಕಾಗಿ ನಾಲ್ಕು ವರ್ಷ ಸೇವೆ ಸಲ್ಲಿಸುವ ಅವಕಾಶವನ್ನು ಈ ಯೋಜನೆಯು ಒದಗಿಸಲಿದೆ ಎಂದು ರಾಜನಾಥ್‌ ಹೇಳಿದರು.

ಸೈನಿಕರ ನೇಮಕಾತಿಗೆ ಈ ವರೆಗೆ ಅನುಸರಿಸಿಕೊಂಡು ಬಂದ ವಿಧಾನವು ಇನ್ನು ಮುಂದೆ ಇರುವುದಿಲ್ಲ. ಹೊಸ ನೀತಿಯು 90 ದಿನಗಳೊಳಗೆ ಜಾರಿಗೆ ಬರಲಿದೆ. ಮೊದಲ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳಲಾಗುವುದು. 2023ರ ಜುಲೈ ಹೊತ್ತಿಗೆ ಮೊದಲ ತಂಡವು ಕರ್ತವ್ಯಕ್ಕೆ ಸೇರ್ಪಡೆಯಾಗಲಿದೆ.

ಅಗ್ನಿಪಥ ಯೋಜನೆ ಅಡಿಯಲ್ಲಿ ಸೇನೆಗೆ ಸೇರುವವರನ್ನು ‘ಅಗ್ನಿವೀರ’ ಎಂದು ಕರೆಯಲಾಗುವುದು. ನಾಲ್ಕು ವರ್ಷಗಳ ಸೇವೆಯ ಬಳಿಕ ಶಿಸ್ತುಬದ್ಧ, ಸ್ಫೂರ್ತಿದಾಯಕ ಮತ್ತು ಕುಶಲ ‘ಅಗ್ನಿವೀರ’ರನ್ನು ಮರಳಿ ಸಮಾಜಕ್ಕೆ ಕಳುಹಿಸಲಾಗುವುದು. ಇವರು ಸಮಾಜದ ಆಸ್ತಿಯಾಗಿ ರೂಪುಗೊಳ್ಳಲಿದ್ದಾರೆ ಎಂದು ರಾಜನಾಥ್ ಹೇಳಿದ್ದಾರೆ.

ಮೂರೂ ಸೇನೆಯ ಮುಖ್ಯಸ್ಥರು ಮಾಧ್ಯಮಗೋಷ್ಠಿಯಲ್ಲಿ ಇದ್ದರು.

ನಾಲ್ಕು ವರ್ಷಗಳ ಕರ್ತವ್ಯದ ಬಳಿಕ, ಸೇನೆಯ ಅಗತ್ಯ ಮತ್ತು ಆಯಾ ಕಾಲಕ್ಕೆ ರೂಪಿಸಿಕೊಂಡ ನೀತಿಗಳಿಗೆ ಅನುಗುಣವಾಗಿ ಕಾಯಂ ನೇಮಕಾತಿಯಲ್ಲಿ ಭಾಗವಹಿಸುವ ಅವಕಾಶವನ್ನು ‘ಅಗ್ನಿವೀರ’ರಿಗೆ ನೀಡಲಾಗುವುದು.ನಾಲ್ಕು ವರ್ಷಗಳ ಕರ್ತವ್ಯ ನಿರ್ವಹಿಸಿದ ‘ಅಗ್ನಿವೀರ’ರಿಗೆ ವಿವಿಧ ರಾಜ್ಯಗಳ ಇಲಾಖೆಗಳು ಮತ್ತು ಖಾಸಗಿ ಕ್ಷೇತ್ರದಲ್ಲಿ ಅತ್ಯುತ್ತಮ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ರಾಜನಾಥ್‌ ಹೇಳಿದ್ದಾರೆ.

ಅರ್ಹತೆ ಏನು?

*ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ಅರ್ಹರು

*ಸೈನಿಕರ ನೇಮಕಾತಿಗೆ ಇದ್ದ ದೈಹಿಕ, ವೈದ್ಯಕೀಯ ಮತ್ತು ವೃತ್ತಿಪರ ಮಾನದಂಡಗಳು ಅಗ್ನಿಪಥ ಯೋಜನೆಗೂ ಅನ್ವಯ

ವೇತನ

*ಮೊದಲ ವರ್ಷದಲ್ಲಿ ಪ್ರತೀ ತಿಂಗಳು ₹30 ಸಾವಿರ ವೇತನ. ಇದರಲ್ಲಿ ₹21 ಸಾವಿರ ಅಗ್ನಿವೀರರಿಗೆ ದೊರೆಯಲಿದೆ. ಉಳಿದ ₹9 ಸಾವಿರ ಸಂಚಿತ ನಿಧಿಗೆ ಹೋಗಲಿದೆ. ಇಷ್ಟೇ ಮೊತ್ತವನ್ನು ಸರ್ಕಾರವು ಸಂಚಿತ ನಿಧಿಗೆ ಸೇರಿಸಲಿದೆ

*ಎರಡನೇ ವರ್ಷ ₹33 ಸಾವಿರ, ಮೂರನೇ ವರ್ಷ ₹36,500 ಮತ್ತು ನಾಲ್ಕನೇ ವರ್ಷ ₹40 ಸಾವಿರ ವೇತನ

*ನಾಲ್ಕು ವರ್ಷಗಳ ಕರ್ತವ್ಯದ ಬಳಿಕ ₹11.71 ಲಕ್ಷದ ನಿಧಿಯು ಪ್ರತಿ ಅಗ್ನಿವೀರನಿಗೆ ದೊರೆಯಲಿದೆ. ಇದಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ

*ಗ್ರಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯಗಳು ಇಲ್ಲ

*ಸೇನೆಯಲ್ಲಿ ಇರುವ ಅವಧಿಗೆ ₹48 ಲಕ್ಷದ ವಿಮೆ ನೀಡಲಾಗುವುದು

10 ಲಕ್ಷ ಉದ್ಯೋಗ

ದೇಶದಲ್ಲಿ ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ಜನರಿಗೆ ತ್ವರಿತವಾಗಿ ಉದ್ಯೋಗ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಿಗೆ ಸೂಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ಉನ್ನತ ಶಿಕ್ಷಣ ಸಂಸ್ಥೆಗಳು, ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮುಂದಿನ ಒಂದೂವರೆ ವರ್ಷಗಳಲ್ಲಿಭರ್ತಿ ಮಾಡುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಕೂಡ ಮುಂದಿನ ಒಂದು ವರ್ಷದಲ್ಲಿ 1,48,463 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ. ಎಂಟು ವರ್ಷಗಳಲ್ಲಿ ವಾರ್ಷಿಕ ಸರಾಸರಿ 43,678 ಜನರ ನೇಮಕ ಆಗಿದೆ. ಪ್ರಧಾನಿ ಸೂಚನೆಯಂತೆ ಹೆಚ್ಚಿನ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT