ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೋದಿ- ಅಮಿತ್‌ ಶಾ ಅವರದ್ದಲ್ಲ, ದ್ರಾವಿಡರು ಮತ್ತು ಆದಿವಾಸಿಗಳದ್ದು: ಒವೈಸಿ

ಅಕ್ಷರ ಗಾತ್ರ

ಭಿವಂಡಿ (ಮಹಾರಾಷ್ಟ್ರ): ‘ದೇಶದಲ್ಲಿ ಮೊಘಲರ ನಂತರವೇ ಬಿಜೆಪಿ -ಆರ್‌ಎಸ್‌ಎಸ್’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ಭಿವಂಡಿಯಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ‘ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ- ಅಮಿತ್‌ ಶಾ ಅವರದ್ದಲ್ಲ, ಭಾರತವು ಯಾರದ್ದು ಎಂದರೆ ಅದು ದ್ರಾವಿಡರು ಮತ್ತು ಆದಿವಾಸಿಗಳದ್ದು. ಆಫ್ರಿಕಾ, ಇರಾನ್, ಮಧ್ಯ ಏಷ್ಯಾ, ಪೂರ್ವ ಏಷ್ಯಾ ಭಾಗದಿಂದ ಜನರು ವಲಸೆ ಬಂದ ನಂತರ ಭಾರತ ರಚನೆಯಾಗಿದೆ. ಆದರೆ, ದೇಶದಲ್ಲಿ ಮೊಘಲರ ನಂತರವೇ ಬಿಜೆಪಿ –ಆರ್‌ಎಸ್‌ಎಸ್‌ನವರು’ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಎನ್‌ಸಿಪಿ ನಾಯಕ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ‘ನವಾಬ್ ಮಲಿಕ್ ಬಂಧನದ ಬಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕೆ ಭೇಟಿ ಮಾಡಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಬಿಜೆಪಿ, ಎನ್‌ಸಿಪಿ, ಕಾಂಗ್ರೆಸ್ ಸೇರಿದಂತೆ ಇತರೆ ಜಾತ್ಯಾತೀತ ಪಕ್ಷಗಳ ನಾಯಕರು ಜೈಲಿಗೆ ಹೋಗಬಾರದು ಎಂದು ಭಾವಿಸುತ್ತಾರೆ. ಆದರೆ, ಯಾರಾದರೂ ಮುಸ್ಲಿಮರು ನಾಯಕರು ಜೈಲಿಗೆ ಹೋದರೂ ಪರವಾಗಿಲ್ಲ’ ಎಂದು ಹೇಳುವ ಮೂಲಕ ಓವೈಸಿ, ಎನ್‌ಸಿಪಿ, ಶಿವಸೇನೆ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಶರದ್ ಪವಾರ್ ಅವರು ಸಂಜಯ್ ರಾವತ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಾಯಿಸಲು ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಹೋಗಿದ್ದಾರೆ. ಆದರೆ, ನವಾಬ್ ಮಲಿಕ್‌ ಪರವಾಗಿ ಪವಾರ್ ಅವರು ಅದೇ ಕೆಲಸವನ್ನು ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ನವಾಬ್ ಮಲಿಕ್ ಸಂಜಯ್ ರಾವತ್ ಅವರಿಗಿಂತ ಕಡಿಮೆಯೇ? ನೀವು ನವಾಬ್ ಮಲಿಕ್ ಪರವಾಗಿ ಏಕೆ ಮಾತನಾಡಲಿಲ್ಲ? ನವಾಬ್ ಮಲಿಕ್ ಅವರು ಮುಸ್ಲಿಂ ಎಂಬ ಕಾರಣಕ್ಕಾಗಿಯೇ? ಸಂಜಯ್ ಮತ್ತು ನವಾಬ್ ಸಮಾನರಲ್ಲವೇ ಎಂದು ನಾನು ಶರದ್ ಪವಾರ್ ಅವರನ್ನು ಕೇಳಲು ಬಯಸುತ್ತೇನೆ’ ಎಂದಿದ್ದಾರೆ.

‘ಮಹಾರಾಷ್ಟ್ರವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಶಿವಸೇನೆಯನ್ನು ಸೋಲಿಸಲು ಒವೈಸಿಗೆ ಮತ ನೀಡುವಂತೆ ಎನ್‌ಸಿಪಿ ನಾಯಕರು ಕೇಳುತ್ತಿದ್ದರು. ಚುನಾವಣೆಮುಗಿದ ನಂತರ ಎನ್‌ಸಿಪಿ ಶಿವಸೇನೆಯೊಂದಿಗೆ ವಿವಾಹವಾಯಿತು. ಮೂರು ಪಕ್ಷಗಳಲ್ಲಿ ವಧು ಯಾರು ಎಂಬುದು ನನಗೆ ಗೊತ್ತಾಗುತ್ತಿಲ್ಲ’ ಎಂದು ಒವೈಸಿ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT