ಬುಧವಾರ, ಆಗಸ್ಟ್ 4, 2021
20 °C
10 ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಂಬಂಧಿಸಿ ಸಲ್ಲಿಸಿದ್ದ ಮನವಿ

ವಾಯುಮಾಲಿನ್ಯ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ದೆಹಲಿ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಹಾನಿಕಾರಕ ಹೊಗೆ ಹೊರಸೂಸುವಿಕೆ ತಗ್ಗಿಸುವ ತಂತ್ರಜ್ಞಾನ ಅಳವಡಿಸುವವರೆಗೆ ಸ್ಥಾವರಗಳ ಕಾರ್ಯಾಚರಣೆ ನಿಲ್ಲಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ಶುಕ್ರವಾರ ಹಿಂಪಡೆದಿದೆ.

ಉತ್ತರಪ್ರದೇಶ, ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳಲ್ಲಿರುವ ಕಲ್ಲಿದ್ದಲಿನ 10 ಉಷ್ಣ ವಿದ್ಯುತ್‌ ಸ್ಥಾವರಗಳಿಂದ ದೇಶದ ರಾಜಧಾನಿ ದೆಹಲಿಯಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಈ ಸ್ಥಾವರಗಳು ‘ಫ್ಲೂ ಗ್ಯಾಸ್ ಡೆಸಲ್ಫುರೈಸೇಷನ್’ ತಂತ್ರಜ್ಞಾನ ಅಳವಡಿಸಿಕೊಳ್ಳುವವರೆಗೆ ಸ್ಥಾವರಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ದೆಹಲಿ ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ನವೀನ್ ಸಿನ್ಹಾ ಮತ್ತು ಆರ್. ಸುಭಾಷ್ ರೆಡ್ಡಿ ಅವರಿದ್ದ ನ್ಯಾಯಪೀಠವು ‘ಭಾರತ ಒಕ್ಕೂಟದ ವಿರುದ್ಧ ರಾಜ್ಯವು ಪಿಐಎಲ್‌ನೊಂದಿಗೆ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಬಂದಿರುವುದು ನಮಗೆ ಬಹಳ ಅಚ್ಚರಿ ನೀಡಿತು’ ಎಂದು ಹೇಳಿತು.

ದೆಹಲಿ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, ಸಲ್ಫರ್ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಡೈ ಆಕ್ಸೈಡ್ ‘ಕೊಲೆಗಡುಕ ಅನಿಲಗಳು’ ಮತ್ತು ಈ ವಿಷಯವು ಮಾಲಿನ್ಯದಿಂದ ಬಳಲುತ್ತಿರುವ ನಾಗರಿಕರ ಆರೋಗ್ಯಕ್ಕೆ ಸಂಬಂಧಿಸಿದೆ ಎಂದು ಪೀಠದ ಗಮನಕ್ಕೆ ತಂದರು.

‘ನಮಗೆ ಕೇಳಲು ಹಲವು ಪ್ರಶ್ನೆಗಳಿವೆ’ ಎಂದ ಪೀಠವು, ‘ನೀವು ರಿಟ್ ಅರ್ಜಿ ಸಲ್ಲಿಸಿದ್ದೀರಿ. ಈ ರಿಟ್ ಅರ್ಜಿಯನ್ನು ನಾವು ಪರಿಗಣಿಸಬೇಕೆ ಅಥವಾ ಬೇಡವೇ ಎನ್ನುವ ಜಿಜ್ಞಾಸೆಯಲ್ಲೇ ನಾವು ಈ ಅರ್ಜಿಯನ್ನು ಪರಿಗಣಿಸುತ್ತಿದ್ದೇವೆ. ನಿಮ್ಮ ಪ್ರಕರಣಕ್ಕೆ ಸಂಬಂಧಿಸಿದ ಕೇಂದ್ರ ಸರ್ಕಾರ ಈ ಹಿಂದೆ ಕೆಲವು ಹೇಳಿಕೆಗಳನ್ನು ಸಲ್ಲಿಸಿದೆ. ಅದಕ್ಕೆ ವಿರುದ್ಧವಾಗಿ ಈಗ ಕೇಂದ್ರ ನಡೆದುಕೊಂಡಿದ್ದರೆ ನೀವು ಅದನ್ನು ನ್ಯಾಯಾಲಯದ ಗಮನಕ್ಕೆ ತನ್ನಿ’ ಎಂದು ಅರ್ಜಿದಾರರಿಗೆ ತಿಳಿಸಿತು.

‘ಈ ಅರ್ಜಿಯ ಬಗ್ಗೆ ಪೀಠ ನೋಟಿಸ್ ಜಾರಿಗೊಳಿಸಬಹುದು ಮತ್ತು ಬಾಕಿ ಇರುವ ಪ್ರಕರಣಗಳೊಂದಿಗೆ ಈ ಅರ್ಜಿಯನ್ನು ಸೇರಿಸಿಕೊಳ್ಳಬಹುದು’ ಎಂದು ವಾದಿಸಿದ ಗೊನ್ಸಾಲ್ವೆಸ್, ‘ಮಾಲಿನ್ಯ ಉಲ್ಬಣಕ್ಕೆ ಕಾರಣವಾಗಿರುವ ಹಾನಿಕಾರಕ ಹೊಗೆ ಹೊರಸೂಸುವಿಕೆ ತಗ್ಗಿಸಲು ತಂತ್ರಜ್ಞಾನದ ಮಾನದಂಡ ಅಳವಡಿಸಿಕೊಳ್ಳುವ ಗಡುವು ಹತ್ತಿರಗೊಳಿಸಿ ನಿರ್ದೇಶನ ನೀಡಬೇಕು. ಜತೆಗೆ ಮಾಲಿನ್ಯ ವಿಷಯದಲ್ಲಿ ಕೋರ್ಟ್‌ ಮಧ್ಯಪ್ರವೇಶಿಸುವುದಾದರೆ ಅರ್ಜಿ ಹಿಂತೆಗೆದುಕೊಳ್ಳಲಿದ್ದೇವೆ’ ಎಂದು ಪೀಠಕ್ಕೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು