ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಟಿಕೆಟ್‌ ರದ್ದು: ಪ್ರಯಾಣಿಕರು, ಏಜೆಂಟರಿಗೆ ಹಣ ಮರುಪಾವತಿ ಕ್ರಮ ತಿಳಿಸಿ

ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ
Last Updated 23 ಸೆಪ್ಟೆಂಬರ್ 2020, 12:19 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್‌–19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ವಿಧಿಸಿದ್ದ ಕಾರಣ ಪ್ರಯಾಣಿಕರು ವಿಮಾನ ಟಿಕೆಟ್‌ಗಳನ್ನು ರದ್ದು ಮಾಡಿದ್ದರು. ಇಂಥ ಗ್ರಾಹಕರು ಹಾಗೂ ಟ್ರಾವೆಲ್‌ ಏಜೆಂಟರಿಗೆ ಹಣ ಮರುಪಾವತಿ ಮಾಡಲುಅನುಸರಿಸುವ ಕ್ರಮಗಳ ಬಗ್ಗೆ ಸೆ. 25ರ ಒಳಗಾಗಿ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ ಭೂಷಣ್‌, ಆರ್‌. ಸುಭಾಷ್‌ ರೆಡ್ಡಿ ಹಾಗೂ ಎಂ.ಆರ್‌. ಶಾ ಅವರಿರುವ ನ್ಯಾಯಪೀಠ, ಹಣ ಮರುಪಾವತಿಗೆ ಸಂಬಂಧಿಸಿದ ಮಾರ್ಗಸೂಚಿಗಳ ಬಗ್ಗೆ ಸೆ. 25ರ ಒಳಗಾಗಿ ಹೊಸ ಅಫಿಡವಿಟ್‌ ಸಲ್ಲಿಸುವಂತೆಯೂ ಸೂಚಿಸಿತು.

ಹಣ ಮರುಪಾವತಿ ಕೋರಿ ಅರ್ಜಿ ಸಲ್ಲಿಸಿದ್ದ‘ಪ್ರವಾಸಿ ಲೀಗಲ್‌ ಸೆಲ್‌’ ಎಂಬ ಎನ್‌ಜಿಒ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್‌ ಹೆಗ್ಡೆ, ‘ಪ್ರಯಾಣಿಕರೊಬ್ಬರು ಏರ್ ಇಂಡಿಯಾ, ಇಂಡಿಗೊ ಮತ್ತಿತರ ಸಂಸ್ಥೆಗಳಲ್ಲಿ ಟಿಕೆಟ್‌ ಬುಕ್‌ ಮಾಡಿ, ಬೇರೆ ದೇಶಕ್ಕೆ ಪ್ರಯಾಣಿಸುತ್ತಾರೆ. ಇಂತಹ ಪ್ರಯಾಣಿಕರಿಗೆ ಮಾತ್ರ ಡಿಜಿಸಿಎ ಸಲ್ಲಿಸಿರುವ ಅಫಿಡವಿಟ್‌ನಲ್ಲಿನ ಕ್ರಮಗಳು ಅನ್ವಯವಾಗುತ್ತವೆ’ ಎಂದರು.

‘ಆದರೆ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಬೇರೆ ದೇಶಗಳಿಂದ ಭಾರತಕ್ಕೆ ಬರುವ ಸಲುವಾಗಿ ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೂ ಹಣಪಾವತಿ ಸೌಲಭ್ಯ ಸಿಗಬೇಕು’ ಎಂದೂ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ, ‘ಎಲ್ಲ ಹಿತವನ್ನು ಪರಿಗಣಿಸಿಯೇ ಕೇಂದ್ರ ಸರ್ಕಾರ ಹಣವನ್ನು ಮರುಪಾವತಿಸುವ ನಿರ್ಧಾರ ತೆಗೆದುಕೊಂಡಿದೆ. ಇದನ್ನು ಕಾರ್ಯಗತಗೊಳಿಸಲು ಸೂಕ್ತ ಕ್ರಮ ಅನುಸರಿಸಬೇಕಾಗಿದೆ. ಸಮಗ್ರ ವಿವರಗಳನ್ನು ಒಳಗೊಂಡ ಅಫಿಡವಿಟ್‌ಅನ್ನು ಸಲ್ಲಿಸುವುದಾಗಿ‘ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT