ಚಂಡೀಪುರ: ಆಕಾಶ್ ಕ್ಷಿಪಣಿಯ ಹೊಸ ಮಾದರಿ 'ಆಕಾಶ್ ಪ್ರೈಮ್' ನಿರ್ದಿಷ್ಟ ಗುರಿಯನ್ನು ಹೊಡೆದುರುಳಿಸಿದ್ದು, ಭಾರತೀಯ ವಾಯುಪಡೆಯ ಕ್ಷಿಪಣಿ ವಲಯದ ಶಕ್ತಿ ಮತ್ತಷ್ಟು ಹೆಚ್ಚಿದೆ.
ಒಡಿಶಾದ ಚಂಡೀಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯ(ಐಎನ್‌ಟಿ)ಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಸೋಮವಾರ ಆಕಾಶ್ ಪ್ರೈಮ್ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿತು.
ಶತ್ರು ಪಡೆಯ ಮಾನವ ರಹಿತ ವೈಮಾನಿಕ ಗುರಿಯನ್ನು ಭೇದಿಸುವ ಪರೀಕ್ಷೆಯಲ್ಲಿ ಆಕಾಶ್ ಪ್ರೈಮ್ ಕ್ಷಿಪಣಿ ಯಶಸ್ವಿಯಾಗಿದೆ ಎಂದು ಡಿಆರ್‌ಡಿಒ ಪ್ರಕಟಣೆಯಲ್ಲಿ ತಿಳಿಸಿದೆ. ಚೊಚ್ಚಲ ಪರೀಕ್ಷೆಯಲ್ಲಿ ಯಶಸ್ವಿಯಾದ ಸಂತಸವನ್ನು ಪರೀಕ್ಷೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಆಕಾಶ್ ಕ್ಷಿಪಣಿ ವ್ಯವಸ್ಥೆಗೆ ಇದು ಹೊಸ ಸೇರ್ಪಡೆಯಾಗಿದ್ದು, ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಸುಧಾರಿತ ರೇಡಿಯೋ ಫ್ರೀಕ್ವೆನ್ಸಿಯನ್ನು ಅಳವಡಿಸಲಾಗಿದೆ. ಪರೀಕ್ಷೆಯಿಂದ ಕ್ಷಿಪಣಿಯು ಅತ್ಯಂತ ಎತ್ತರದ ಪ್ರದೇಶದಲ್ಲಿ, ಕಡಿಮೆ ಉಷ್ಣಾಂಶವಿರುವ ವಾತಾವರಣದಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವುದು ಖಾತರಿಯಾಗಿದೆ.
ಭಾರತೀಯ ಸೇನೆ, ಭಾರತೀಯ ವಾಯುಪಡೆ, ಡಿಪಿಎಸ್‌ಯು ಆಕಾಶ್ ಪ್ರೈಮ್ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ಶ್ಲಾಘಿಸಿವೆ. ಡಿಆರ್‌ಡಿಒ ತನ್ನ ಸಮಾರ್ಥ್ಯವನ್ನು ಸಾಬೀತುಪಡಿಸಿದೆ. ವಿನ್ಯಾಸದಲ್ಲಿ ಮತ್ತು ಕಾರ್ಯಕ್ಷಮತೆಯಲ್ಲಿ ವಿಶ್ವಮಟ್ಟದ ಕ್ಷಿಪಣಿ ವ್ಯವಸ್ಥೆಯಂದು ಹೊಂದಿದಂತಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈಗಾಗಲೇ ಆಕಾಶ್ ಕ್ಷಿಪಣಿಯನ್ನು ಬಳಕೆ ಮಾಡುತ್ತಿರುವ ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಹೆಚ್ಚು ಬಲ ಸಿಕ್ಕಂತಾಗಿದೆ. ಶತ್ರು ಪಡೆಯ ಮೇಲೆ ಹೆಚ್ಚು ಘಾತಕವನ್ನುಂಟು ಮಾಡಬಲ್ಲ ಸಾಮರ್ಥ್ಯವಿದೆ ಎಂದು ಡಿಆರ್‌ಡಿಒ ಮುಖ್ಯಸ್ಥ ಜಿ. ಸತೀಶ್ ರೆಡ್ಡಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.