ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛೆಯ ಸಂಗಾತಿಯ ಆಯ್ಕೆ ಮೂಲಭೂತ ಹಕ್ಕು: ಅಲಹಾಬಾದ್‌ ಹೈಕೋರ್ಟ್

ಅಂತರ್‌ಧರ್ಮೀಯ ಜೋಡಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು
Last Updated 24 ನವೆಂಬರ್ 2020, 15:19 IST
ಅಕ್ಷರ ಗಾತ್ರ

ಲಖನೌ:ಅಂತರ್‌ಧರ್ಮೀಯ ಜೋಡಿಯೊಂದರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸಿರುವ ಅಲಹಾಬಾದ್‌ ಹೈಕೋರ್ಟ್‌, ‘ತಾವು ಆಯ್ಕೆ ಮಾಡಿದ ವ್ಯಕ್ತಿಯ ಜೊತೆ ಜೀವಿಸುವ ಹಕ್ಕು ಎನ್ನುವುದು ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರದ ಮೂಲವಾಗಿದ್ದು, ಸಂವಿಧಾನದ 21ನೇ ವಿಧಿಯಡಿ ಇದನ್ನು ಕೊಡಲಾಗಿದೆ’ ಎಂದು ಉಲ್ಲೇಖಿಸಿದೆ.

ದೇಶದೆಲ್ಲೆಡೆ ‘ಲವ್‌ ಜಿಹಾದ್‌’ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹಾಗೂ ಲವ್‌ ಜಿಹಾದ್‌ಗೆ ಕಡಿವಾಣ ಹಾಕಲು ಕಠಿಣ ಕಾಯ್ದೆಗಳನ್ನು ಕೆಲ ರಾಜ್ಯ ಸರ್ಕಾರಗಳು ತರಲು ನಿರ್ಧರಿಸಿರುವ ವೇಳೆಯಲ್ಲೇ ಹೈಕೋರ್ಟ್‌ ಈ ತೀರ್ಪು ನೀಡಿದೆ. ‘ವೈಯಕ್ತಿಕ ಸಂಬಂಧಗಳ ನಡುವೆ ಮಧ್ಯಪ್ರವೇಶಿಸುವುದು, ಇಬ್ಬರು ವ್ಯಕ್ತಿಗಳ ನಡುವಿನ ಆಯ್ಕೆಯ ಸ್ವಾತಂತ್ರ್ಯದ ಮೇಲೆ ಗಂಭೀರವಾದ ಅತಿಕ್ರಮಣ’ ಎಂದು 14 ಪುಟಗಳ ಆದೇಶದಲ್ಲಿ ನ್ಯಾಯಮೂರ್ತಿಗಳಾದ ವಿವೇಕ್‌ ಅಗರ್ವಾಲ್‌ ಹಾಗೂ ಪಂಕಜ್‌ ನಖ್ವಿ ಅವರಿದ್ದ ವಿಭಾಗೀಯ ಪೀಠವು ಉಲ್ಲೇಖಿಸಿದೆ.

ಉತ್ತರ ಪ್ರದೇಶದ ಖುಷಿನಗರ್‌ ಜಿಲ್ಲೆಯ ಪ್ರಿಯಾಂಕಾ ಖಾರ್‌ವಾರ್‌ ಹಾಗೂ ಸಲಾಮತ್‌ ಅಲಿ ಅನ್ಸಾರಿ ಕಳೆದ ವರ್ಷ ಮದುವೆಯಾಗಿದ್ದರು. ಪ್ರಿಯಾಂಕಾ ನಂತರದಲ್ಲಿ ಇಸ್ಲಾಂಗೆ ಮತಾಂತರವಾಗಿದ್ದರು. ಮದುವೆಯ ನಂತರದಲ್ಲಿ ಪ್ರಿಯಾಂಕ ಅವರ ಪಾಲಕರು ಅನ್ಸಾರಿ ವಿರುದ್ಧ ಅಪಹರಣದ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸಲು ಕೋರಿ ಅನ್ಸಾರಿ ಹಾಗೂ ಪ್ರಿಯಾಂಕಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಕೆಲ ದಿನಗಳ ಹಿಂದೆ ಈ ಅರ್ಜಿ ವಿಚಾರಣೆ ವೇಳೆ, ‘ಅನ್ಸಾರಿ ಯಾವುದೇ ತಪ್ಪು ಮಾಡಿಲ್ಲ. ನಮ್ಮ ಮುಂದೆಯೇ ಕಳೆದೊಂದು ವರ್ಷದಿಂದ ಜೊತೆಯಾಗಿ ಬದುಕಿದ ಇಬ್ಬರು ಇದ್ದಾರೆ’ ಎಂದು ಉಲ್ಲೇಖಿಸಿದ ಪೀಠವು, ಎಫ್‌ಐಆರ್‌ ರದ್ದುಗೊಳಿಸಿತು.

‘ಪ್ರಿಯಾಂಕಾ ಖಾರ್‌ವಾರ್‌ ಹಾಗೂ ಸಲಾಮತ್‌ ಅವರನ್ನು ನಾವು ಹಿಂದೂ ಹಾಗೂ ಮುಸ್ಲಿಂ ಎಂದು ನೋಡುವುದಿಲ್ಲ. ಬದಲಾಗಿ ತಮ್ಮಿಚ್ಛೆಯಂತೆ ಕಳೆದೊಂದು ವರ್ಷದಿಂದ ಸುಖವಾಗಿ, ಶಾಂತಿಯುತವಾಗಿ ಬದುಕುತ್ತಿರುವ ಇಬ್ಬರು ವಯಸ್ಕರನ್ನಾಗಿ ನೋಡುತ್ತೇವೆ. ಸಂವಿಧಾನದ 21ನೇ ವಿಧಿಯಡಿ ವ್ಯಕ್ತಿಗೆ ನೀಡಲಾಗಿರುವ ಹಕ್ಕನ್ನು ಎತ್ತಿಹಿಡಿಯಲು ಸಾಂವಿಧಾನಿಕ ನ್ಯಾಯಾಲಯಗಳಿಗೆ ನಿರ್ದೇಶಿಸುತ್ತದೆ’ ಎಂದು ಪೀಠವು ಹೇಳಿತು.

‘ಒಂದೇ ಲಿಂಗದ ಇಬ್ಬರು ಶಾಂತಿಯುತವಾಗಿ ಜೀವಿಸುವ ಹಕ್ಕನ್ನು ಕಾನೂನು ನೀಡುತ್ತದೆ ಎಂದಾದರೆ, ಯಾವುದೇ ವ್ಯಕ್ತಿ, ಕುಟುಂಬ, ರಾಜ್ಯವೂ ತಮ್ಮಿಚ್ಛೆಯಂತೆ ಜೊತೆಯಾಗಿ ಜೀವಿಸುತ್ತಿರುವ ಇಬ್ಬರು ವಯಸ್ಕರ ಸಂಬಂಧಕ್ಕೆ ಪ್ರತಿರೋಧ ವ್ಯಕ್ತಪಡಿಸುವಂತಿಲ್ಲ’ ಎಂದು ಪೀಠವು ಉಲ್ಲೇಖಿಸಿದೆ.

‘ಅಂತರ್‌ಜಾತಿ ಅಥವಾ ಅಂತರ್‌ಧರ್ಮೀಯ ವಿವಾಹವನ್ನು ಹುಡುಗನ ಅಥವಾ ಹುಡುಗಿಯ ಪಾಲಕರು ಒಪ್ಪದೇ ಇದ್ದಲ್ಲಿ, ಅವರೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಬಹುದಷ್ಟೇ. ಬದಲಾಗಿ ಅವರಿಗೆ ಬೆದರಿಕೆ ಒಡ್ಡುವುದು, ಹಿಂಸೆ ಮಾಡುವುದು, ದೌರ್ಜನ್ಯ ಎಸಗುವಂತಿಲ್ಲ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT