ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿನ ಲೋಕಸಭಾ ಹಾಗೂ ವಿಧಾನಸಭಾ ವಿಂಗಡಣೆ: ಇನ್ನೂ ಸಲ್ಲಿಕೆಯಾಗದ ಕರಡು

ಆಯೋಗದ ಅಧ್ಯಕ್ಷರ ಅಧಿಕಾರಾವಧಿ ಮಾರ್ಚ್‌ 5ಕ್ಕೆ ಅಂತ್ಯ
Last Updated 30 ಜನವರಿ 2021, 11:44 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಗಾಗಿ ರಚಿಸಲಾಗಿರುವ ಆಯೋಗವು ಇನ್ನೂ ತನ್ನ ಕರಡನ್ನು ಸಲ್ಲಿಸಿಲ್ಲ.

ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ಮಾರ್ಚ್‌ 5ರಂದು ಕ್ಷೇತ್ರ ವಿಂಗಡಣಾ ಆಯೋಗವನ್ನು ರಚಿಸಲಾಗಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ನಿಯಮಗಳ ಪ್ರಕಾರ ಆಯೋಗದ ಅಧ್ಯಕ್ಷರ ಅಧಿಕಾರಾವಧಿ ಒಂದು ವರ್ಷ.

ಆಯೋಗವು ಕರಡನ್ನು ಪ್ರಕಟಿಸಿ ಜನರಿಂದ ಸಲಹೆ–ಆಕ್ಷೇಪಣೆಗಳನ್ನು ಆಹ್ವಾನಿಸಬೇಕಿದೆ. ನಂತರ, ಅಂತಿಮ ವರದಿಯನ್ನು ಸಿದ್ಧಪಡಿಸಬೇಕು. ಆದರೆ, ಕ್ಷೇತ್ರಗಳ ವಿಂಗಡಣೆಯ ಕರಡನ್ನು ಪ್ರಕಟಿಸುವ ಮುನ್ನ ಆಯೋಗವು ತನ್ನ ಸದಸ್ಯರೊಂದಿಗೆ ಈ ವರೆಗೆ ಸಭೆಯನ್ನೇ ನಡೆಸಿಲ್ಲ ಎಂದು ಮೂಲಗಳು ಹೇಳಿವೆ.

ನ್ಯಾಷನಲ್‌ ಕಾನ್ಫರೆನ್ಸ್‌ನ ಸಂಸದರಾದ ಫಾರೂಕ್‌ ಅಬ್ದುಲ್ಲಾ, ನಿವೃತ್ತ ನ್ಯಾಯಮೂರ್ತಿ ಹನ್‌ಸೇನ್‌ ಮಸೂದಿ ಹಾಗೂ ಮೊಹಮ್ಮದ್‌ ಅಕ್ಬರ್‌ ಲೋನ್‌, ಬಿಜೆಪಿಯ ಜುಗಲ್‌ ಕಿಶೋರ್‌ ಶರ್ಮಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರನ್ನು ಈ ಆಯೋಗದ ಸದಸ್ಯರನ್ನಾಗಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ನೇಮಕ ಮಾಡಿದ್ದಾರೆ.

‘ಯಾವುದೇ ಕಾರಣಕ್ಕೂ ಕ್ಷೇತ್ರ ವಿಂಗಡಣೆ ಆಯೋಗದ ಸದಸ್ಯರ ಹುದ್ದೆಯನ್ನು ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ಆಯೊಗದ ಸದಸ್ಯತ್ವವನ್ನು ಒಪ್ಪಿಕೊಂಡರೆ, ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ಸ್ಥಾನಮಾನವನ್ನು ರದ್ದುಪಡಿಸಿದ್ದನ್ನು ಒಪ್ಪಿಕೊಂಡಂತಾಗುತ್ತದೆ’ ಎಂದು ನ್ಯಾಷನಲ್‌ ಕಾಂಗ್ರೆಸ್‌ ಹೇಳಿದೆ.

ಈ ಬೆಳವಣಿಗೆ ನಡುವೆಯೇ, ಅಂಕಿ–ಅಂಶಗಳ ಸಂಗ್ರಹ ಕಾರ್ಯವನ್ನು ಆಯೋಗ ಕಳೆದ ಸೆಪ್ಟಂಬರ್‌ನಲ್ಲಿಯೇ ಪೂರ್ಣಗೊಳಿಸಿದೆ. 2011ರ ಜನಗಣತಿ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಗೆ ಚಾಲನೆ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಕಣಿವೆ ರಾಜ್ಯದಲ್ಲಿ 87 ವಿಧಾನಸಭಾ ಕ್ಷೇತ್ರಗಳು, 6 ಲೋಕಸಭಾ ಕ್ಷೇತ್ರಗಳಿದ್ದವು. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ, ಲಡಾಖ್‌ಗೆ ಕೇಂದ್ರಾಡಳಿತ ಸ್ಥಾನಮಾನ ನೀಡಲಾಯಿತು. ಆಗ, ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕ್ರಮವಾಗಿ 83 ಹಾಗೂ 5ಕ್ಕೆ ಇಳಿದವು.

ಜಮ್ಮು ಭಾಗದಲ್ಲಿ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದು. ಆ ಮೂಲಕ ಕಾಶ್ಮೀರ ಹೊಂದಿದ್ದ ಪ್ರಭಾವ, ರಾಜಕೀಯ ಬಲವನ್ನು ಕುಗ್ಗಿಸುವ ಪ್ರಯತ್ನ ಇದಾಗಿದೆ ಎಂಬುದು ಕಾಶ್ಮೀರ ಭಾಗದ ರಾಜಕಾರಣಿಗಳ ಅಭಿಪ್ರಾಯವಾಗಿದೆ.

ಇದನ್ನು ಒಪ್ಪದ ಜಮ್ಮು ಪ್ರದೇಶ ರಾಜಕೀಯ ಮುಖಂಡರು, ‘ನಮ್ಮ ಭಾಗದ ಮೇಲೆ ಕಾಶ್ಮೀರದವರು ಅನೇಕ ವರ್ಷಗಳಿಂದ ಹೊಂದಿದ್ದ ಅಧಿಪತ್ಯವನ್ನು ಕೊನೆಗಾಣಿಸುವ ಪ್ರಯತ್ನ ಇದಾಗಿದೆ’ ಎಂದು ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT