ಬುಧವಾರ, ಏಪ್ರಿಲ್ 21, 2021
25 °C
ಅಮರಾವತಿ ಭೂ ಹಗರಣ

ಭೂ ಹಗರಣ| ಎಫ್‌ಐಆರ್‌ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಹೈಕೋರ್ಟ್‌ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಅಮರಾವತಿ ಭೂ ಹಗರಣ ಪ್ರಕರಣದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ರದ್ದುಪಡಿಸುವಂತೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೀಡಿರುವ ನೋಟಿಸ್‌ ಪ್ರಶ್ನಿಸಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಶುಕ್ರವಾರ ಕೈಗೆತ್ತಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾಯ್ಡು ಅವರಿಗೆ ಮಾರ್ಚ್‌ 23ರಂದು ವಿಜಯವಾಡದಲ್ಲಿನ ಸಿಐಡಿ ಕಚೇರಿಯಲ್ಲಿ ತನಿಖಾಧಿಕಾರಿ ಎದುರು ಖುದ್ದು ಹಾಜರಾಗುವಂತೆ ಆಂಧ್ರಪ್ರದೇಶದ ಸಿಐಡಿ ಮಂಗಳವಾರ ನೋಟಿಸ್‌ ನೀಡಿತ್ತು.

ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಪ್ರದೇಶದಲ್ಲಿ ಎಸ್‌ಸಿ, ಎಸ್‌ಟಿಗೆ ಮೀಸಲಾದ ಭೂಮಿಯನ್ನು ಅಂದಿನ ಟಿಡಿಪಿ ಸರ್ಕಾರಕ್ಕೆ ಹತ್ತಿರದ ವ್ಯಕ್ತಿಗಳು ವಂಚನೆಯಿಂದ ಖರೀದಿಸಿದ್ದಾರೆ ಎಂದು ಆರೋಪಿಸಿ ದಾಖಲಿಸಿರುವ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಾಯ್ದು ಅವರಿಗೆ ಈ ಸಮನ್ಸ್ ನೀಡಲಾಗಿದೆ.

ಮಾರ್ಚ್‌ 12ರಂದು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಾಯ್ಡು ಅವರನ್ನು ‘ಆರೋಪಿ ನಂಬರ್‌ 1’ ಎಂದು ಉಲ್ಲೇಖಿಸಿದ್ದು, ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಪಿ.ನಾರಾಯಣ ಅವರನ್ನು ಎರಡನೇ ಆರೋಪಿಯಾಗಿ ಹೆಸರಿಸಲಾಗಿದೆ. ನಾಯ್ಡು ಅವರಿಗಿಂತ ಒಂದು ದಿನ ಮೊದಲು ಸಿಐಡಿ ಮುಂದೆ ಹಾಜರಾಗುವಂತೆ ನಾರಾಯಣ ಅವರಿಗೂ ಇದೇ ರೀತಿಯ ನೋಟಿಸ್ ನೀಡಲಾಗಿದೆ.

‘ನೊಟೀಸ್‌ನಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸುವಲ್ಲಿ ವಿಫಲವಾದರೆ ಅಥವಾ ವಿಚಾರಣೆಗೆ ಹಾಜರಾಗದಿದ್ದರೆ, ಸಿಆರ್‌ಪಿಸಿಯ ಸೆಕ್ಷನ್ 41 (3) ಮತ್ತು (4)ರ ಅಡಿಯಲ್ಲಿ ಬಂಧಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ.

ವಿಚಾರಣೆಗೆ ಇಬ್ಬರೂ ಸಹಕರಿಸಬೇಕು. ತನಿಖಾ ಪ್ರಕ್ರಿಯೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಹಸ್ತಕ್ಷೇಪ ಮಾಡಬಾರದು. ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಬಾರದು ಎಂದು ಸಿಐಡಿ ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು