ಭಾನುವಾರ, ಅಕ್ಟೋಬರ್ 24, 2021
25 °C

ಕಷ್ಟಪಟ್ಟು ಗಳಿಸಿದ ಶಾಂತಿಗೆ ಹಾನಿಯಾಗಲ್ಲ: ಸೋನಿಯಾಗೆ ಅಮರಿಂದರ್‌ ಭರವಸೆಯ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪಂಜಾಬ್‌ನಲ್ಲಿ ತಮ್ಮ ನಾಯಕತ್ವದಲ್ಲಿ ಬಹಳ ಕಷ್ಟಪಟ್ಟು ಸ್ಥಾಪಿಸಲಾಗಿರುವ ಶಾಂತಿಯುತ ಪರಿಸ್ಥಿತಿ ಮತ್ತು ಅಭಿವೃದ್ಧಿಗೆ ಕಾಂಗ್ರೆಸ್‌ ಪಕ್ಷದಲ್ಲಿನ ಬೆಳವಣಿಗೆಗಳು ಧಕ್ಕೆ ಉಂಟು ಮಾಡಲಿಕ್ಕಿಲ್ಲ ಎಂಬ ಭರವಸೆ ಇದೆ ಎಂದು ಅಮರಿಂದರ್‌ ಸಿಂಗ್‌ ಅವರು ಹೇಳಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡುವ ಮುನ್ನ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಈ ವಿಚಾರವನ್ನು ಅವರು ಉಲ್ಲೇಖಿಸಿದ್ದಾರೆ. 

ಐದು ತಿಂಗಳಿಂದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕಿತ್ತಾಟದ ಬಗ್ಗೆ ಅಮರಿಂದರ್‌ ಅವರು ಗಾಢ ಕಳವಳ ವ್ಯಕ್ತಪಡಿಸಿದ್ದಾರೆ. 

‘ನನಗೆ ವೈಯಕ್ತಿಕವಾಗಿ ಆಗಿರುವ ವೇದನೆ ಏನೇ ಇರಲಿ, ರಾಜ್ಯದ ಶಾಂತಿಗೆ, ಅಭಿವೃದ್ಧಿಗೆ ಧಕ್ಕೆ ಆಗಬಾರದು. ರಾಜ್ಯದ ಎಲ್ಲರಿಗೂ ನ್ಯಾಯ ದೊರೆಯಬೇಕು’ ಎಂದು ಪತ್ರದಲ್ಲಿ ಅವರು ಕೋರಿದ್ದಾರೆ. 

ಕಾಂಗ್ರೆಸ್‌ ಪಕ್ಷದ ಒಳಗಿನ ಬೆಳವಣಿಗೆಗಳು ರಾಜ್ಯದಲ್ಲಿ ಅಸ್ಥಿರತೆಗೆ ಕಾರಣ ಆಗಬಹುದು ಎಂಬ ಕಳವಳವನ್ನು ಪರೋಕ್ಷವಾಗಿ ಅಮರಿಂದರ್‌ ಅವರು ವ್ಯಕ್ತಪಡಿಸಿದ್ದಾರೆ. ಅಮರಿಂದರ್‌ ಅವರ ಕಚೇರಿಯೇ ಪತ್ರದ ಆಯ್ದ ಅಂಶಗಳನ್ನು ಮಾಧ್ಯಮಕ್ಕೆ ಒದಗಿಸಿದೆ. 

ಪಂಜಾಬ್‌ನ ಬೆಳವಣಿಗೆಗಳು ರಾಷ್ಟ್ರ ಮಟ್ಟದ ಪರಿಣಾಮಗಳನ್ನು ಉಂಟು ಮಾಡುತ್ತವೆ. ಆದರೆ, ಈ ಬೆಳವಣಿಗೆಗಳಿಗೆ ಕಾರಣರಾದವರು ಈ ಬಗ್ಗೆ ಗಮನ ಹರಿಸಿಲ್ಲ. ಪಂಜಾಬ್‌ ರಾಜ್ಯದ ಹಿತಾಸಕ್ತಿಯನ್ನೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಮರಿಂದರ್‌ ಹೇಳಿದ್ದಾರೆ. ಪಂಜಾಬ್‌ ಗಡಿ ರಾಜ್ಯ ಎಂಬುದನ್ನೂ ಅವರು ನೆನಪಿಸಿದ್ದಾರೆ. 

ಪ್ರೌಢ ಮತ್ತು ಪರಿಣಾಮಕಾರಿಯಾದ ಸಾರ್ವಜನಿಕ ನೀತಿಗಳಿಗಾಗಿ ಪಂಜಾಬ್‌ನ ಜನರು ಕಾಂಗ್ರೆಸ್‌ನತ್ತ ನೋಡುತ್ತಿದ್ದಾರೆ. ಇದು ಉತ್ತಮ ರಾಜಕಾರಣ ಮಾತ್ರವಲ್ಲದೆ, ಸಾಮಾನ್ಯ ಜನರ ಕಾಳಜಿಗಳ ಬಗ್ಗೆಯೂ ಗಮನ ಹರಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

ಅಮರಿಂದರ್‌ ಪಕ್ಷಕ್ಕೆ ಹಾನಿ ಮಾಡದೇ ಇರಲಿ: ಗೆಹಲೋತ್‌
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕ್ಯಾ. ಅಮರಿಂದರ್‌ ಸಿಂಗ್‌ ಅವರು ತಮ್ಮ ರಾಜಕೀಯ ಆಯ್ಕೆ ತೆರೆದೇ ಇದೆ ಎಂದು ಸುಳಿವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ಪಕ್ಷಕ್ಕೆ ಹಾನಿಯಾಗುವಂಥ ಯಾವುದೇ ಕ್ರಮಗಳನ್ನು ಅಮರಿಂದರ್‌ ಸಿಂಗ್‌ ತೆಗೆದುಕೊಳ್ಳದೇ ಇರಲಿ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಮುಖ್ಯಮಂತ್ರಿ ಬದಲಾವಣೆ ಆದ ವೇಳೆ ಸ್ಥಾನದಿಂದ ಕೆಳಗಿಳಿದವರು ಅಸಮಾಧಾನಕ್ಕೆ ಒಳಗಾಗುತ್ತಾರೆ ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂಥ ಸಂದರ್ಭಗಳಲ್ಲಿ ಅವರು ತಮ್ಮ ಒಳದನಿಯನ್ನು ಕೇಳಬೇಕು’ ಎಂದಿದ್ದಾರೆ.

ದಲಿತ ನಾಯಕ ಚನ್ನಿ
ಚಂಡೀಗಡ: ಪಂಜಾಬ್‌ ಮುಖ್ಯಮಂತ್ರಿ ಹುದ್ದೆಗಾಗಿ ಹಲವು ಹೆಸರುಗಳು ಕೇಳಿ ಬಂದಿದ್ದವು. ಆದರೆ, ಅದರಲ್ಲಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಹೆಸರು ಇರಲಿಲ್ಲ. ದಲಿತ ಸಮುದಾಯದ ಪ್ರಭಾವಿ ನಾಯಕ ಎಂಬುದು ಅವರ ಆಯ್ಕೆಗೆ ಮುಖ್ಯ ಕಾರಣ.

ಪಂಜಾಬ್‌ನ ಮಾಲ್ವಾ ವಿಭಾಗದ ಚಮಕೌರ್‌ ಸಾಹಿಬ್‌ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಚನ್ನಿ ಆಯ್ಕೆಯಾಗಿದ್ದಾರೆ. ಅವರು ರಾಮದಾಸಿಯಾ ಸಿಖ್‌ ಸಮುದಾಯಕ್ಕೆ ಸೇರಿದವರು. ‌

ಅಮರಿಂದರ್‌ ಸಿಂಗ್‌ ನೇತೃತ್ವದ ಸಚಿವ ಸಂಪುಟದಲ್ಲಿ ಅವರು ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ಶಿಕ್ಷಣ ಖಾತೆಯ ಸಚಿವರಾಗಿದ್ದರು. 2015ರ ಡಿಸೆಂಬರ್‌ನಿಂದ 2016ರ ನವೆಂಬರ್‌ವರೆಗೆ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಸತಲೆಜ್‌– ಯಮುನಾ ಕಾಲುವೆ ವಿವಾದದಲ್ಲಿ ವಿರೋಧ ಪಕ್ಷದ ಎಲ್ಲರೂ ರಾಜೀನಾಮೆ ನೀಡಿದ್ದರಿಂದ ಚನ್ನಿ ಅವರಿಗೆ ಅವಕಾಶ ಒದಗಿ ಬಂದಿತ್ತು. ಚನ್ನಿ ಅವರ ಆಯ್ಕೆಯ ಮೂಲಕ ದಲಿತರ ಪರವಾದ ಪಕ್ಷ ಎಂದು ತನ್ನನ್ನು ಬಿಂಬಿಸಲು ಕಾಂಗ್ರೆಸ್‌ ಯತ್ನಿಸಿದೆ.

***

ಗಡಿ ರಾಜ್ಯವು ಭೌಗೋಳಿಕ ಮತ್ತು ಆಂತರಿಕ ಭದ್ರತೆಯ ಅಂಶಗಳನ್ನು ಹೊಂದಿದೆ. ರಾಜಿ ಇಲ್ಲದೆ ಎಲ್ಲವನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲು ಯತ್ನಿಸಿದ್ದೇನೆ.
-ಅಮರಿಂದರ್‌ ಸಿಂಗ್‌, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು