ಉದ್ಯಮಿ ಅಂಬಾನಿ ಮನೆ ಬಳಿ ಸ್ಫೋಟಕ ವಾಹನ ಪತ್ತೆ ಪ್ರಕರಣ: ಪೊಲೀಸ್ ಅಧಿಕಾರಿ ಸೆರೆ

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಪೊಲೀಸ್ ಅಧಿಕಾರಿ ರಿಯಾಜ್ ಕಾಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಬಂಧಿಸಿದೆ.
ಸದ್ಯ ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಕಾಜಿ ಆಪ್ತರಾಗಿದ್ದರು. ವಾಜೆ ಜತೆ ಕಾಜಿ ಕಾರ್ಯನಿರ್ವಹಿಸಿದ್ದರು.
ಈ ಪ್ರಕರಣದ ಬಗ್ಗೆ ವಿಚಾರಣೆಗಾಗಿ ಭಾನುವಾರ ಕಾಜಿ ಅವರನ್ನು ಕರೆಸಲಾಗಿತ್ತು. ವಿಚಾರಣೆ ಬಳಿಕ ಕಾಜಿ ಅವರನ್ನು ಬಂಧಿಸಲಾಗಿದೆ.
ಈ ಹಿಂದೆಯೂ ಕಾಜಿ ವಿಚಾರಣೆ ನಡೆಸಲಾಗಿತ್ತು. ಕಳೆದ ತಿಂಗಳು ಮುಂಬೈ ಕ್ರೈಂ ಬ್ರ್ಯಾಂಚ್‌ನಿಂದ ಕಾಜಿ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಫೋಟಕಗಳಿದ್ದ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಪಡೆಯಲು ಸಚಿನ್ ವಾಜೆ ಅವರಿಗೆ ಕಾಜಿ ನೆರವಾಗಿರಬಹುದು ಎಂದು ಎನ್‌ಐಎ ಅನುಮಾನ ವ್ಯಕ್ತಪಡಿಸಿತ್ತು.
ವಿಖ್ರೊಲಿ ಪ್ರದೇಶದಲ್ಲಿ ನಂಬರ್ ಪ್ಲೇಟ್ ಅಂಗಡಿಗೆ ತೆರಳಿ ಮಾಲೀಕನ ಜತೆ ಕಾಜಿ ಮಾತುಕತೆ ನಡೆಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಜತೆಗೆ, ಠಾಣೆಯಲ್ಲಿನ ವಾಜೆ ಅವರ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು ಸಹ ಗೊತ್ತಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 13ರಂದು ವಾಜೆ ಅವರನ್ನು ಎನ್‌ಐಎ ಬಂಧಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.