ಬುಧವಾರ, ಜೂನ್ 29, 2022
24 °C

ಜಮ್ಮು–ಕಾಶ್ಮೀರಕ್ಕೆ ಯುಎಇ ನಿಯೋಗ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: 57 ಮುಸ್ಲಿಂ ಸದಸ್ಯ ರಾಷ್ಟ್ರಗಳ ‘ಇಸ್ಲಾಮಿಕ್‌ ಸಹಕಾರ ಒಕ್ಕೂಟ’ವು (ಒಐಸಿ) ಪಾಕಿಸ್ತಾನದಲ್ಲಿ ಶೃಂಗಸಭೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ (ಯುಎಇ) ಉದ್ಯಮಿಗಳ ಉನ್ನತ ಮಟ್ಟದ ನಿಯೋಗವು ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆ ಅವಕಾಶಗಳನ್ನು ಪರಿಶೀಲಿಸಲು ಮತ್ತು ಬಾಂಧವ್ಯ ವೃದ್ಧಿಗೆ ಶ್ರೀನಗರಕ್ಕೆ ಭೇಟಿ ನೀಡಿದೆ.

57 ಮುಸ್ಲಿಂ ರಾಷ್ಟ್ರಗಳ ಒಐಸಿಯಲ್ಲಿ ಯುಎಇ ಸೇರಿದ್ದು, ಈ ಹಿಂದಿನ ಒಐಸಿ ಸಭೆಗಳಲ್ಲಿ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಪದೇ ಪದೇ ಪ್ರಸ್ತಾಪಿಸಿದೆ.

ಕಣಿವೆ ರಾಜ್ಯದ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ನಿಯೋಗದಲ್ಲಿ ಯುಎಇ ಮೂಲದ ಭಾರತದ ಉದ್ಯಮಿಗಳು, ಅಬುಧಾಬಿಯ ಆಡಳಿತಗಾರರ ಕಚೇರಿಯ ಪ್ರತಿನಿಧಿ ಸೇರಿ 40 ಮಂದಿ ಇದ್ದಾರೆ.

ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಜನವರಿಯಲ್ಲಿ ದುಬೈಗೆ ಭೇಟಿ ನೀಡಿದ ನಂತರ ಈ ಉದ್ಯಮಿಗಳ ನಿಯೋಗವು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದೆ. ಉದ್ಯಮಶೀಲತೆ, ಪ್ರವಾಸೋದ್ಯಮ ಮತ್ತು ಆರೋಗ್ಯ ಸೇವೆ ವಲಯದಲ್ಲಿ ಇರುವ ಬಂಡವಳ ಹೂಡಿಕೆ ಅವಕಾಶಗಳ ಕುರಿತು ಜಮ್ಮು ಮತ್ತು ಕಾಶ್ಮೀರ ಆಡಳಿತವು ನಿಯೋಗಕ್ಕೆ ಮಾಹಿತಿ ನೀಡಲಿದೆ.

ಔತಣಕೂಟ: ಲೆಫ್ಟಿನೆಂಟ್‌ ಗವರ್ನರ್‌ ಹಾಗೂ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ನಿಯೋಗಕ್ಕೆ ಭೋಜನಕೂಟ ಆಯೋಜಿಸಿದ್ದಾರೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಡವಾಳ ಹೂಡಿಕೆಗೆ ಇರುವ ಪ್ರಮುಖ ಅವಕಾಶಗಳು ಮತ್ತು ಬೆಳವಣಿಗೆಗೆ ಇರುವ ಕ್ಷೇತ್ರಗಳ ಬಗ್ಗೆ ನಿಯೋಗಕ್ಕೆ ಹೆಚ್ಚು ಮನವರಿಕೆ ಮಾಡಿಕೊಡಲಾಗುವುದು.

ಪ್ರವಾಸೋದ್ಯಮ ಹಾಗೂ ಆರೋಗ್ಯ ವಲಯದಲ್ಲಿನ ಬಂಡವಾಳ ಹೂಡಿಕೆ ಅವಕಾಶಗಳ ಕುರಿತು ಪರಿಚಯಿಸಲು ಉತ್ತರ ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಗುಲ್‌ಮಾರ್ಗ್‌ ಹಾಗೂ ದಕ್ಷಿಣ ಕಾಶ್ಮೀರದ ಪಹಲ್ಗಾಂವ್‌ ಬೆಟ್ಟಕ್ಕೆ ನಿಯೋಗವನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ ಎಂದೂ ತಿಳಿಸಲಾಗಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು