ಶನಿವಾರ, ಜೂನ್ 25, 2022
24 °C

ಜಮ್ಮು–ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಸಕ್ರಿಯವಾಗಿ ಆರಂಭಿಸಿ: ಅಮಿತ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಸಮನ್ವಯದಿಂದ ಹಾಗೂ ಸಕ್ರಿಯವಾಗಿ ಆರಂಭಿಸುವಂತೆ ಭದ್ರತಾ ಪಡೆಗಳಿಗೆ ಹಾಗೂ ಪೊಲೀಸರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಸಮೃದ್ಧ ಹಾಗೂ ಶಾಂತಿಯುತ ಕಾಶ್ಮೀರದ ಆಶಯವನ್ನು ಪೂರ್ಣಗೊಳಿಸಬೇಕು. ಕೇಂದ್ರಾಡಳಿತ ಪ್ರದೇಶದಿಂದ ಭಯೋತ್ಪಾದನೆಯ ನಿರ್ಮೂಲನೆಗಾಗಿ ಉಗ್ರರ ಗಡಿ ನುಸುಳುವಿಕೆ ಸಂಪೂರ್ಣ ನಿಲ್ಲುವಂತೆ ಮಾಡಬೇಕು ಎಂದು ಭದ್ರತಾಪಡೆಗಳಿಗೆ ಶಾ ಹೇಳಿರುವುದಾಗಿ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಮರನಾಥ ಯಾತ್ರೆ ಜೂನ್‌ 30ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲು ಅಮಿತ್ ಶಾ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಬಳಿಕ ನಿಗ್ರಹ ಕಾರ್ಯಾಚರಣೆಯನ್ನು ಸಕ್ರಿಯವಾಗಿ ನಡೆಸುವಂತೆ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ, ಗುಪ್ತಚರ ದಳದ ಮುಖ್ಯಸ್ಥ ಅರವಿಂದ್ ಕುಮಾರ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, ಗಡಿ ರಸ್ತೆಗಳ ಸಂಘಟನೆಯ (ಬಿಆರ್‌ಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು