ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 30ರಿಂದ ಅಮರನಾಥ ಯಾತ್ರೆ: ಅಧಿಕಾರಿಗಳೊಂದಿಗೆ ಅಮಿತ್ ಶಾ ಉನ್ನತ ಮಟ್ಟದ ಸಭೆ

ಅಕ್ಷರ ಗಾತ್ರ

ನವದೆಹಲಿ: ಅಮರನಾಥ ಯಾತ್ರೆ ಜೂನ್‌ 30ರಿಂದ ಆರಂಭವಾಗಲಿದ್ದು, ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದರು.

ಇತ್ತೀಚೆಗೆ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್‌ ಭಟ್‌ (35) ಎಂಬುವರನ್ನು ಉಗ್ರನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ರಾಹುಲ್ ಹತ್ಯೆ ಪಂಡಿತ ಸಮುದಾಯದವರಲ್ಲಿ ವ್ಯಾಪಕ ಆಕ್ರೋಶ, ಸಿಟ್ಟು ಮತ್ತು ಆತಂಕಕ್ಕೆ ಕಾರಣವಾಗಿರುವ ಬೆನ್ನಲ್ಲೇ ಅಮಿತ್ ಶಾ ಸಭೆ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಅರವಿಂದ್ ಕುಮಾರ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲ್ದೀಪ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಲಾಗಿತ್ತು.

ಮೇ 13ರಂದು ದೆಹಲಿಯಲ್ಲಿ ಹಾಗೂ ಏಪ್ರಿಲ್ 15ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಭೆ ನಡೆಸಲಾಗಿತ್ತು.

ಇಂದು ನಡೆದ ಸಭೆಯಲ್ಲಿ ಅಮರನಾಥ ದೇವಾಲಯದ ಆಡಳಿತ ಮಂಡಳಿ ಸದಸ್ಯರು ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಏಜೆನ್ಸಿಗಳಿಗೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮರನಾಥ ಯಾತ್ರೆಗೆ ಆನ್‌ಲೈನ್ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ಜೂನ್ 30ರಿಂದ ಆಗಸ್ಟ್ 11 ರವರೆಗೆ 43 ದಿನಗಳ ಕಾಲ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಎರಡು ಮಾರ್ಗಗಳ ಮೂಲಕ ಯಾತ್ರೆ ನಡೆಯಲಿದೆ. ಈ ಬಾರಿ ಸರ್ಕಾರ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್‌ಐಡಿ) ಮೂಲಕ ಯಾತ್ರಿಕರ ಸುರಕ್ಷತೆ ಮತ್ತು ಅವರ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ.

ಕೋವಿಡ್‌ ಕಾರಣದಿಂದ 2020 –2021ರಲ್ಲಿ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT