ಮಂಗಳವಾರ, ಡಿಸೆಂಬರ್ 7, 2021
20 °C

ಶಾಂತಿಯುತ ಕಾಶ್ಮೀರ ನೋಡಬಯಸುತ್ತೇವೆ: ಸಿಆರ್‌ಪಿಎಫ್‌ ಶಿಬಿರದಲ್ಲಿ ಅಮಿತ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಭಯೋತ್ಪಾದನೆಯನ್ನು ಮೋದಿ ಸರ್ಕಾರ ಸಹಿಸುವುದೇ ಇಲ್ಲ. ಜಮ್ಮು–ಕಾಶ್ಮೀರದಲ್ಲಿ ಈಗ ಸ್ವಲ್ಪ ಪರಿಸ್ಥಿತಿ ಸುಧಾರಿಸಿದೆ. ಆದರೆ ಸಂಪೂರ್ಣ ಶಾಂತಿ ನೆಲೆಸುವವರೆಗೂ ನಮಗೆ ತೃಪ್ತಿಯಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಜಮ್ಮು–ಕಾಶ್ಮೀರ ಪ್ರವಾಸದಲ್ಲಿರುವ ಅವರು ಪುಲ್ವಾಮಾದ ಲೆಥ್‌ಪೊರಾ ಪ್ರದೇಶದಲ್ಲಿ ಸಿಆರ್‌ಪಿಎಫ್‌ ಶಿಬಿರದಲ್ಲಿ ಸೋಮವಾರ ರಾತ್ರಿ ಕಳೆದರು. 2019ರ ಫೆಬ್ರುವರಿಯಲ್ಲಿ ಇದೇ ಪ್ರದೇಶದಲ್ಲಿ ಉಗ್ರರು ನಡೆಸಿದ್ದ ಕಾರ್‌ ಬಾಂಬ್ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು.

ಓದಿ: 

‘ನಿಮ್ಮ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕಾಗಿ ನಿಮ್ಮ ಜತೆ ಒಂದು ರಾತ್ರಿ ಕಳೆಯಲು ಬಂದಿದ್ದೇನೆ. ಜಮ್ಮು–ಕಾಶ್ಮೀರ ಭೇಟಿಯಲ್ಲಿ ಇದುವೇ ನನಗೆ ಬಹು ಮುಖ್ಯವಾದ ಅಂಶ’ ಎಂದು ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಶಾ ಹೇಳಿದ್ದಾರೆ.

ಜಮ್ಮು–ಕಾಶ್ಮೀರದಲ್ಲಿ ಈಗ ಕಾನೂನು ಸುವ್ಯವಸ್ಥೆ ಸುಧಾರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಮ್ಮ ಜೀವಿತಾವಧಿಯಲ್ಲಿ ನಾವು ಶಾಂತಿಯುತ ಜಮ್ಮು–ಕಾಶ್ಮೀರವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

‘ಕಲ್ಲುತೂರಾಟ ಘಟನೆಗಳು ಈಗ ಅತಿ ವಿರಳವಾಗಿವೆ. ಕೆಲವು ಸಮಯ ಹಿಂದೆ ಕಾಶ್ಮೀರದಲ್ಲಿ ಕಲ್ಲುತೂರಾಟ ಸಾಮಾನ್ಯವಾಗಿತ್ತು. ಇಂಥ ಕೃತ್ಯಗಳು ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆದರೆ ಇದರಿಂದ ನಾವು ತೃಪ್ತಿಪಟ್ಟುಕೊಳ್ಳುವಂತಿಲ್ಲ’ ಎಂದು ಶಾ ಹೇಳಿದ್ದಾರೆ.

‘ಭಯೋತ್ಪಾದನೆ ವಿರುದ್ಧ ಮೋದಿ ಸರ್ಕಾರ ಶೂನ್ಯ ಸಹನೆ ಹೊಂದಿದೆ. ನಾವದನ್ನು ಸಹಿಸಲಾರೆವು. ಅದು ಮಾನವೀಯತೆಗೆ ವಿರುದ್ಧವಾದದ್ದು. ಮಾನವೀಯತೆಯ ವಿರೋಧಿಗಳು ಹಾಗೂ ಕ್ರೌರ್ಯ ಎಸಗುವವರಿಂದ ಕಾಶ್ಮೀರದ ಜನರನ್ನು ರಕ್ಷಿವುಸುವುದು ನಮ್ಮ ಆದ್ಯತೆ’ ಎಂದು ಶಾ ಹೇಳಿದ್ದಾರೆ.

ಓದಿ: 

370ನೇ ವಿಧಿಯ ರದ್ದತಿ ಬಳಿಕ ಜಮ್ಮು–ಕಾಶ್ಮೀರದಲ್ಲಿ ರಕ್ತಪಾತವಾಗದಂತೆ ನೋಡಿಕೊಂಡದ್ದಕ್ಕಾಗಿ ಸಿಆರ್‌ಪಿಎಫ್‌ ಹಾಗೂ ಇತರ ಭದ್ರತಾ ಸಿಬ್ಬಂದಿಗೆ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು