ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರಿಹಾರಕ್ಕೆ ₹15 ಕೋಟಿ ದೇಣಿಗೆ: ಅಮಿತಾಭ್ ಬಚ್ಚನ್

ಸೆಲೆಬ್ರಿಟಿಗಳ ವಿರುದ್ಧ ಕಿಡಿಕಾರಿದವರಿಗೆ ತಕ್ಕ ಉತ್ತರ ನೀಡಿದ ‘ಬಿಗ್‌ ಬಿ’
Last Updated 11 ಮೇ 2021, 14:47 IST
ಅಕ್ಷರ ಗಾತ್ರ

ಮುಂಬೈ:‘ದೇಶದಲ್ಲಿ ದಿನೇದಿನೇ ಉಲ್ಬಣಿಸುತ್ತಿರುವ ಕೋವಿಡ್–19 ಸಾಂಕ್ರಾಮಿಕ ರೋಗದ ಪರಿಹಾರ ಕಾರ್ಯಕ್ಕಾಗಿ ಸುಮಾರ ₹ 15 ಕೋಟಿ ಅನ್ನು ದೇಣಿಗೆಯನ್ನಾಗಿ ನೀಡಿದ್ದೇನೆ. ಅಗತ್ಯಬಿದ್ದರೆ ನನ್ನ ವೈಯಕ್ತಿಕ ನಿಧಿಯಿಂದ ಮತ್ತಷ್ಟು ಹಣ ನೀಡಲು ಹಿಂಜರಿಯುವುದಿಲ್ಲ’ ಎಂದು ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಹೇಳಿದ್ದಾರೆ.

‘ದೇಶವು ಗಂಭೀರವಾದ ಆರೋಗ್ಯದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಸೆಲೆಬ್ರಿಟಿಗಳು ಎನಿಸಿಕೊಂಡಿರುವವರು ಜನರಿಗೆ ಸಹಾಯ ಮಾಡುತ್ತಿಲ್ಲ’ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಬರೆದ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಮಿತಾಭ್ ಅವರು, ಕೋವಿಡ್ ಬಿಕ್ಕಟ್ಟಿನಲ್ಲಿ ತಾವು ಕೈಗೊಂಡಿರುವ ಸಹಾಯದ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ನವದೆಹಲಿಯ ಗುರದ್ವಾರ ರಕಾಬ್ ಗಂಜಿ ಸಾಹಿಬ್‌ನ ಶ್ರೀ ಗುರು ತೇಜ್ ಬಹಾದ್ದೂರ್ ಕೋವಿಡ್ ಕೇರ್ ಕೇಂದ್ರಕ್ಕೆ ₹ 2 ಕೋಟಿ ದೇಣಿಗೆ ನೀಡಿದ್ದಾರೆ’ ಎಂದು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಂಜಿದರ್ ಸಿಂಗ್ ಸಿರ್ಸಾ ಅವರು ಭಾನುವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

‘ಕೋವಿಡ್ ವಿರುದ್ಧದ ಹೋರಾಟಕ್ಕೆ ಅನೇಕರು ಕೊಡುಗೆಗಳನ್ನು ನೀಡಿದ್ದಾರೆ. ಹಲವರು ಪರಿಹಾರ ಕಾರ್ಯಗಳನ್ನೂ ಕೈಗೊಂಡಿದ್ದಾರೆ. ಶ್ರೀಗುರು ತೇಜ್ ಬಹಾದ್ದೂರ್ ಕೋವಿಡ್ ಕೇರ್ ಕೇಂದ್ರಕ್ಕೆ ನಾನು ₹ 2 ಕೋಟಿ ನೀಡಿದ್ದೇನೆ. ಆದರೆ, ದಿನಗಳೆದಂತೆ ನನ್ನ ವೈಯಕ್ತಿಕ ದೇಣಿಗೆಯು ಸುಮಾರು ₹ 15 ಕೋಟಿ ಮೀರಿದೆ. ನಾನು ದುಡಿಯುತ್ತೇನೆ. ಹಣ ಗಳಿಸುತ್ತೇನೆ ಮತ್ತು ನನ್ನ ಗಳಿಕೆಯ ಹಣವನ್ನು ಅಗತ್ಯವಿರುವವರಿಗೆ ವಿನಿಯೋಗಿಸಲು ನಿರ್ಧರಿಸುತ್ತೇನೆ. ಸರ್ವಶಕ್ತನಾದ ಆ ಭಗವಂತನ ದಯೆಯಿಂದಾಗಿ ಇಷ್ಟು ಮೊತ್ತವನ್ನು ನೀಡಲು ನನಗೆ ಸಾಧ್ಯವಾಯಿತು. ದೇಣಿಗೆಯ ಕಾರ್ಯವು ನನ್ನ ಬಗ್ಗೆ ತುತ್ತೂರಿ ಊದಿಕೊಳ್ಳುವ ಕಾರ್ಯವಲ್ಲ’ ಎಂದೂ ಬಚ್ಚನ್ ಅವರು ಸ್ಪಷ್ಟಪಡಿಸಿದ್ದಾರೆ.

‘ವಿದೇಶದಿಂದ 20 ವೆಂಟಿಲೇಟರ್‌ಗಳನ್ನು ತರಿಸಲಾಗುತ್ತಿದೆ. 10 ವೆಂಟಿಲೇಟರ್‌ಗಳು ಈಗಾಗಲೇ ಮುಂಬೈ ತಲುಪಿದ್ದು ಕಸ್ಟಮ್ಸ್ ತೆರವಿಗಾಗಿ ಕಾಯುತ್ತಿವೆ. ಇವುಗಳನ್ನು ನಗರದ 4 ಮುನ್ಸಿಪಲ್ ಆಸ್ಪತ್ರೆಗಳಿಗೆ ಬುಧವಾರದೊಳಗೆ ತಲುಪಿಸಲಾಗುವುದು. ಉಳಿದ 10 ವೆಂಟಿಲೇಟರ್‌ಗಳು ಮೇ 25ರ ಹೊತ್ತಿಗೆ ಬರಲಿವೆ’ ಎಂದಿದ್ದಾರೆ.

‘ವಿದೇಶದಿಂದ ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನೂ ತರಿಸಿಕೊಳ್ಳಲಾಗುತ್ತಿದೆ. ಅವುಗಳಲ್ಲಿ 50 ಕಾನ್ಸಂಟ್ರೇಟರ್‌ಗಳನ್ನು ದೆಹಲಿಗೆ 15ರೊಳಗೆ ತಲುಪಿಸಲಾಗುವುದು. ಮಾನ್ಯತೆ ಪಡೆದ ಪೋಲೆಂಡ್ ಕಂಪನಿಯಿಂದ ಇವುಗಳನ್ನು ತರಿಸಲಾಗುತ್ತಿದ್ದು, ಇತರ 150 ಕಾನ್ಸಂಟ್ರೇಟರ್‌ಗಳು ಮೇ 23ರೊಳಗೆ ತಲುಪಲಿದ್ದು, ಕೋವಿಡ್ ಆರೈಕೆ ಕೇಂದ್ರಗಳಿಗೆ ನೀಡಲಾಗುವುದು’ ಎಂದು ಅವರು ವಿವರಿಸಿದ್ದಾರೆ.

ನಾನಾವತಿ ಆಸ್ಪತ್ರೆಗೆ ಎಂಆರ್‌ಐನ ಮೂರು ಯಂತ್ರಗಳನ್ನು ಕೊಡುಗೆ ನೀಡಿರುವ ಬಚ್ಚನ್ ಅವರು, ಕೋವಿಡ್‌ನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಹೈದರಾಬಾದ್‌ನಲ್ಲಿ ಅನಾಥಾಶ್ರಮವೊಂದರಲ್ಲಿ 1ರಿಂದ 10ನೇ ತರಗತಿವರೆಗೆ ಶಿಕ್ಷಣ, ವಸತಿಯ ವ್ಯವಸ್ಥೆಯನ್ನೂ ಮಾಡಿದ್ದಾರೆ. ಜುಹುವಿನಲ್ಲಿ 25ರಿಂದ 30 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಕ್ಕೂ ನೆರವು ನೀಡಿದ್ದಾರೆ.

ಕೋವಿಡ್ ಮುಂಚೂಣಿ ಕಾರ್ಯಕರ್ತರನ್ನು ಶ್ಲಾಘಿಸಿರುವ ಅವರು ತಮ್ಮ ತಂದೆ ಹರಿವಂಶರಾಯ್ ಬಚ್ಚನ್ ಅವರ ಪ್ರಸಿದ್ಧ ‘ಅಗ್ನಿಪಥ್’ ಕವಿತೆಯನ್ನೂ ವಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT