ಮಂಗಳವಾರ, ಸೆಪ್ಟೆಂಬರ್ 21, 2021
21 °C
ಉತ್ತರ ಪ್ರದೇಶ ರಾಜ್ಯ ವಿಧಿವಿಜ್ಞಾನಗಳ ಸಂಸ್ಥೆಗೆ ಶಿಲಾನ್ಯಾಸ

ನ್ಯಾಯೋಚಿತ ಕ್ರಮ ಕೈಗೊಳ್ಳಿ: ಉತ್ತರ ಪ್ರದೇಶ ಪೊಲೀಸರಿಗೆ ಅಮಿತ್ ಶಾ ಕಿವಿಮಾತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ‘ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅಥವಾ ಅತಿಯಾದ ಕ್ರಮ ಜರುಗಿಸಿದಾಗ ಪೊಲೀಸರಿಗೆ ಅಪಕೀರ್ತಿ ತಪ್ಪಿದ್ದಲ್ಲ. ಹೀಗಾಗಿ ಪೊಲೀಸರು ನ್ಯಾಯೋಚಿತ ಕ್ರಮಗಳನ್ನು ಮಾತ್ರ ಕೈಗೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಹೇಳಿದರು.

ಅವರು ಇಲ್ಲಿ ಉತ್ತರ ಪ್ರದೇಶ ರಾಜ್ಯ ವಿಧಿವಿಜ್ಞಾನಗಳ ಸಂಸ್ಥೆಗೆ (ಯುಪಿಎಸ್‌ಐಎಫ್‌ಎಸ್‌) ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

‘ಕ್ರಮ ಕೈಗೊಳ್ಳದಿರುವುದಕ್ಕೆ ಅಥವಾ ವಿಪರೀತ ಕ್ರಮಕ್ಕಾಗಿ ಪೊಲೀಸರು ನಿಂದನೆಗೆ ಒಳಗಾಗುತ್ತಾರೆ ಎಂದು ನಾನು ಪದೇಪದೇ ಹೇಳುತ್ತಿರುತ್ತೇನೆ. ಕ್ರಮ ಕೈಗೊಳ್ಳದೇ ಇರುವುದು ಸರಿಯಲ್ಲ. ಇಂಥ ಸೋಮಾರಿತನದಿಂದ ಕಾನೂನು–ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲಾಗದು. ವಿಪರೀತ ಕ್ರಮಗಳೂ ಒಳ್ಳೆಯದಲ್ಲ. ಇದರಿಂದ ಅಷ್ಟೇ ತೀವ್ರವಾದ ಪ್ರತಿಕ್ರಿಯೆಗೆ ಪ್ರಚೋದನೆ ನೀಡಿದಂತಾಗುತ್ತದೆ’ ಎಂದರು.

‘ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಸಂಸ್ಥೆ ಹಾಗೂ ಗುಜರಾತ್‌ನ ಗಾಂಧಿನಗರದಲ್ಲಿರುವ ನ್ಯಾಷನಲ್‌ ಫೋರೆನ್ಸಿಕ್‌ ಸೈನ್ಸಸ್‌ ಯುನಿವರ್ಸಿಟಿಯಿಂದ ಪೊಲೀಸರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪೊಲೀಸರ ಕಾರ್ಯವೈಖರಿ ಈಗ ಸಂಪೂರ್ಣ ಬದಲಾಗಿದೆ. ಖೋಟಾ ನೋಟುಗಳು, ಮಾದಕ ದ್ರವ್ಯಗಳ ಸಾಗಾಟ, ಸೈಬರ್‌ ಅಪರಾಧಗಳು, ಗೋವುಗಳ ಕಳ್ಳ ಸಾಗಣೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳು ಈಗ ಪೊಲೀಸರಿಗೆ ಸವಾಲೊಡ್ಡುತ್ತಿವೆ’ ಎಂದರು.

‘ಬರುವ ದಿನಗಳಲ್ಲಿ ಉತ್ತರ ಪ್ರದೇಶದ ಪ್ರತಿ ಜಿಲ್ಲೆಯೂ ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ಹೊಂದುವ ದಿನಗಳು ದೂರ ಇಲ್ಲ. ಇದರ ಜೊತೆಗೆ, ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸಹ ಸ್ಥಾಪಿಸಲಾಗುವುದು’ ಎಂದರು.

‘6 ವರ್ಷಗಳಿಗೂ ಅಧಿಕ ಜೈಲು ಶಿಕ್ಷೆ ನೀಡಬಹುದಾದಂತಹ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಶಿಕ್ಷೆ ಪ್ರಕಟಿಸಲು ವಿಧಿವಿಜ್ಞಾನ ಪ್ರಯೋಗಾಲಯಗಳ ಬಳಕೆಯನ್ನು ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆದಿದೆ’ ಎಂದೂ ಅವರು ಹೇಳಿದರು.

‘ಕಾನೂನು–ಸುವ್ಯವಸ್ಥೆ ಬಲಪಡಿಸಲು ಕೇಂದ್ರ ಕ್ರಮ’

‘ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯ. ಆದರೆ, ಇದನ್ನು ಇನ್ನಷ್ಟೂ ಬಲಪಡಿಸಲು ಕೇಂದ್ರ ಸರ್ಕಾರ ಕೆಲವು ಕಾರ್ಯಕ್ರಮಗಳನ್ನು ರೂಪಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

‘ದೇಶದಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ ಬಹಳ ಕಡಿಮೆ ಇದೆ. ಇಸ್ರೇಲ್‌ನಂತಹ ದೇಶದಲ್ಲಿ ಈ ಪ್ರಮಾಣ ಶೇ 98ರಷ್ಟಿದೆ. ವೃತ್ತಿಪರ ಶಿಕ್ಷಣದ ಕೊರತೆ ಕಾರಣ, ಈ ವಿಷಯದಲ್ಲಿ ಭಾರತ ಹಿಂದಿದೆ’ ಎಂದು ಪ್ರತಿಪಾದಿಸಿದರು.

‘ಗಾಂಧಿನಗರದಲ್ಲಿರುವ ನ್ಯಾಷನಲ್‌ ಫೋರೆನ್ಸಿಕ್‌ ಸೈನ್ಸಸ್‌ ಯುನಿರ್ಸಿಟಿಯ ಸಂಲಗ್ನತೆಯನ್ನು ಪಡೆದುಕೊಂಡ ತಕ್ಷಣವೇ ದೇಶದ ಹಲವೆಡೆ ವಿಧಿವಿಜ್ಞಾನ ಕಾಲೇಜುಗಳು ಆರಂಭವಾಗಲಿವೆ. 2024ರ ವೇಳೆಗೆ ದೇಶದ ಅರ್ಧಕ್ಕೂ ಅಧಿಕ ರಾಜ್ಯಗಳು ವಿಧಿವಿಜ್ಞಾನ ಕಾಲೇಜುಗಳನ್ನು ಹೊಂದಲಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು