ಆಲಿಗಡ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎನ್‌ಸಿಸಿಯ ಕೆಲ ಕೇಡೆಟ್‌ಗಳು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊ ತುಣುಕೊಂದು ಹರಿದಾಡಿದ ಹಿನ್ನೆಲೆಯಲ್ಲಿ ಆಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ (ಎಎಂಯು) ವಿದ್ಯಾರ್ಥಿಯೊಬ್ಬನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಬಿ (ಸೌಹಾರ್ದಕ್ಕೆ ಧಕ್ಕೆ ತರುವ ಹೇಳಿಕೆ ಅಥವಾ ದ್ವೇಷ ಬಿತ್ತುವಂಥ ಹೇಳಿಕೆ), 505 (ಕಿಡಿಗೇಡಿತನ) ಅಡಿ ಪೊಲೀಸರು ಗುರುತುಪತ್ತೆಯಾಗದ ಎಸ್‌ಸಿಸಿ ಕೇಡೆಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸದ್ಯ ದೊರಕಿರುವ ಸಾಕ್ಷ್ಯದ ಆಧಾರದಲ್ಲಿ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿರುವ ವಾಹಿದುಝಾಮಾನ್ ಎಂಬ ವಿದ್ಯಾರ್ಥಿಯನ್ನು ಎಎಂಯು ಆಡಳಿತವು ಶುಕ್ರವಾರ ಅಮಾನತುಗೊಳಿಸಿದೆ. ವಿ.ವಿಯ ಕ್ಯಾಂಪಸ್‌ನಿಂದ ಆತನನ್ನು ಹೊರಗಿಟ್ಟಿರುವುದಾಗಿ ಘೋಷಿಸಿದೆ.
ಎರಡು ವಿಡಿಯೊಗಳು ಪೊಲೀಸರಿಗೆ ದೊರಕಿದ್ದು. ಮೊದಲನೆಯದು 17 ಸೆಕೆಂಡುಗಳದ್ದಾಗಿದ್ದು ಎಸ್‌ಸಿಸಿ ಕೇಡೆಟ್‌ಗಳ ಗುಂಪೊಂದು ಧ್ವಜಸ್ತಂಭದ ಬಳಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುವುದು ಇದರಲ್ಲಿ ಸೆರೆಯಾಗಿದೆ. ಮತ್ತೊಂದು ವಿಡಿಯೊ 19 ಸೆಕಂಡುಗಳದ್ದಾಗಿದ್ದು, ಅದರಲ್ಲಿ ಮೊತ್ತೊಂದು ಗುಂಪು ‘ಭಾರತ್ ಮಾತಾ ಕೀ ಜೈ’, ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಸೆರೆಯಾಗಿದೆ. ಈ ಪ್ರಕರಣ ಕುರಿತು ವಿ.ವಿ. ಆಡಳಿತ ಮಂಡಳಿ ಕೂಡಾ ಆಂತರಿಕ ತನಿಖೆ ನಡೆಸುತ್ತಿದ್ದು, ಅದಕ್ಕಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿರುವ ವಿ.ವಿ. ಅಧಿಕಾರಿ ಮೊಹಮ್ಮದ್ ವಾಸೀಂ ‘ಯಾವುದೇ ರಾಷ್ಟ್ರ ದಿನಾಚರಣೆಯಂದು ಇಂಥ ಘಟನೆಗಳು ಜರುಗಬಾರದು’ ಎಂದಿದ್ದಾರೆ.
ತಪ್ಪಿತಸ್ಥ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಲಿಗಡ ಬಿಜೆಪಿ ಸಂಸದ ಸತೀಶ್ ಗೌತಮ್ ಪೊಲೀಸರಿಗೆ ಹೇಳಿದ್ದಾರೆ.
ವಿಡಿಯೊದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ವಿಡಿಯೊ ತುಣಕನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.