ಭಾನುವಾರ, ಜನವರಿ 24, 2021
16 °C

ಕೋವಿಡ್ 19 ಲಸಿಕೆ: ಹೇಗೆ, ಎಲ್ಲಿ ಹಾಕಲಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ಏಳೆಂಟು ತಿಂಗಳಿಂದ ದೇಶದ ಜನರನ್ನು ಕಂಗೆಡಿಸಿರುವ ಕೋವಿಡ್ ಮಹಾಮಾರಿಗೆ ಕೊನೆಗೂ ಲಸಿಕೆ ಸಿಕ್ಕಿದೆ. ಇಂದಿನಿಂದ ದೇಶದಲ್ಲಿ ಕೋವಿಡ್ ಲಸಿಕೆ ತಾಲೀಮು ಆರಂಭವಾಗಿದ್ದು, ಮುಂದಿನ 6 ರಿಂದ 8 ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕುವ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಡಿಸಿಜಿಐ(ಭಾರತೀಯ ಔಷಧ ಮಹಾನಿಯಂತ್ರಕ)ದಿಂದ ಲಸಿಕೆಗೆ ಅನುಮೋದನೆ ಸಿಕ್ಕ ಬಳಿಕ ಯಾವುದೇ ಸಮಯದಲ್ಲಿ ಲಸಿಕೆ ಅಭಿಯಾನ ಆರಂಭವಾಗಬಹುದು.

 ಮೊದಲು ಲಸಿಕ ಪಡೆಯುವವರು ಯಾರು?

1. ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರು

ಕೋವಿಡ್ 19 ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪಿನ ಶಿಫಾರಸಿನ ಪ್ರಕಾರ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸುಮಾರು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಈ ಲಸಿಕೆಯನ್ನು ಮೊದಲು ನೀಡಲಾಗುವುದು.

ಈ ಆರೋಗ್ಯ ಕಾರ್ಯಕರ್ತರನ್ನು  ಮತ್ತೆ ವಿಭಾಗಗಳಾಗಿ ವಿಂಗಡಿಸಲಾಗಿದೆ 
ಮುಂಚೂಣಿ ಆರೋಗ್ಯ ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಕಾರ್ಮಿಕರು, ದಾದಿಯರು ಮತ್ತು ಮೇಲ್ವಿಚಾರಕರು, ವೈದ್ಯಕೀಯ ಅಧಿಕಾರಿಗಳು, ಅರೆವೈದ್ಯಕೀಯ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು.

ಇದಕ್ಕಾಗಿ ಬೇಕಾದ ದತ್ತಾಂಶವನ್ನು ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಆಸ್ಪತ್ರೆಗಳಿಂದ ಸಂಗ್ರಹಿಸಲಾಗಿದ್ದು, ಲಸಿಕೆ ಅಭಿಯಾನಕ್ಕಾಗಿ ರೂಪಿಸಿರುವ ಡಿಜಿಟಲ್ ವೇದಿಕೆ ಕೋವಿನ್(Cowin) ಆ್ಯಪ್‌ನಲ್ಲಿ ಪ್ರಕಟಿಸಲಾಗುತ್ತದೆ.

2. ಮುಂಚೂಣಿ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು

ಪೊಲೀಸ್ ಇಲಾಖೆ, ಸಶಸ್ತ್ರ ಪಡೆ, ಗೃಹರಕ್ಷಕ, ವಿಪತ್ತು ನಿರ್ವಹಣೆ ಮತ್ತು ನಾಗರಿಕ ರಕ್ಷಣಾ ಸಂಸ್ಥೆ, ಜೈಲು ಸಿಬ್ಬಂದಿ, ಪುರಸಭೆ ಕಾರ್ಮಿಕರು, ಕೋವಿಡ್ 19 ಕಂಟೈನ್ಮೆಂಟ್ ವಲಯದ ಕಣ್ಗಾವಲು ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಕಂದಾಯ ಅಧಿಕಾರಿಗಳು ಸೇರಿ ರಾಜ್ಯ ಮತ್ತು ಕೇಂದ್ರ  ಸರ್ಕಾರದ ಸುಮಾರು ಎರಡು ಕೋಟಿ ಮುಂಚೂಣಿ ಕಾರ್ಮಿಕರು ಎರಡನೇ ಹಂತದಲ್ಲಿ ಲಸಿಕೆ ಪಡೆಯುತ್ತಾರೆ.

ಈ ಹಂತದಲ್ಲಿ ರಾಜ್ಯ ಸರ್ಕಾರ ಮತ್ತು ರಕ್ಷಣಾ ಸಚಿವಾಲಯ, ಗೃಹ ಇಲಾಖೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳಿಗೆ ಸಂಬಂಧಿಸಿದ ಕಾರ್ಮಿಕರಿಗೂ ಲಸಿಕೆ ಹಾಕಲಾಗುವುದು.

3. 50 ವರ್ಷ ಮೇಲ್ಪಟ್ಟ ನಾಗರಿಕರು

ಈ ಗುಂಪನ್ನು ಮತ್ತೆ ಎರಡು ಉಪ ವಿಭಾಗಗಳಾಗಿ ವಿಂಗಡಿಸಲಾಗಿದೆ: 60 ವರ್ಷ ಮೇಲ್ಪಟ್ಟ ನಾಗರಿಕರು ಮತ್ತು 50–60 ವರ್ಷ ವಯಸ್ಸಿನವರು.

ಲಸಿಕೆ ಅಭಿಯಾನಕ್ಕಾಗಿ ಈ ವಯೋಮಿತಿಯ ಜನರನ್ನು ಗುರುತಿಸಲು ಇತ್ತೀಚಿನ ಲೋಕಸಭಾ ಮತ್ತು ವಿಧಾನಸಭಾ ಮತದಾರರ ಪಟ್ಟಿಯನ್ನು ಪರಿಗಣಿಸಲಾಗುತ್ತದೆ.

4. ಅತಿ ಹೆಚ್ಚು ಕೋವಿಡ್ ಸೋಂಕಿತ ಪ್ರದೇಶ

ಈ ಹಂತದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು  ಕೋವಿಡ್ 19 ಸೋಂಕು ಹರಡುವಿಕೆಯು ಅಧಿಕವಾಗಿರುವ ಪ್ರದೇಶಗಳನ್ನು ಗುರುತಿಸಿ ಅದರ ಆಧಾರದ ಮೇಲೆ ಆದ್ಯತೆ ನಿರ್ಧರಿಸಿ ಲಸಿಕೆ ಅಭಿಯಾನ ಆರಂಭಿಸುವ ಅಧಿಕಾರ ಹೊಂದಿರುತ್ತವೆ.

5. ಇನ್ನುಳಿದ ಜನಸಂಖ್ಯೆ 

ಮೇಲೆ ತಿಳಿಸಿದ ಆದ್ಯತೆ ಪಟ್ಟಿಯಲ್ಲಿರುವ ಜನರ ಬಳಿಕ ಇನ್ನುಳಿದ ಜನಸಂಖ್ಯೆಗೆ  ಈ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ. ಇಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಲಸಿಕೆ ಲಭ್ಯತೆ ಆಧರಿಸಿ ಲಸಿಕೆ ಹಾಕಲಾಗುತ್ತದೆ. 
ಲಸಿಕೆ ಕೇಂದ್ರದಲ್ಲಿ ಜನದಟ್ಟಣೆ ತಪ್ಪಿಸಲು ಫಲಾನುಭವಿಗಳಿಗೆ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ.

ಲಸಿಕೆ ಪಡೆಯಲು ನೀವು ಹೇಗೆ ನೋಂದಾಯಿಸಿಕೊಳ್ಳಬೇಕು?

ಲಸಿಕೆ ಅಭಿಯಾನ ವ್ಯವಸ್ಥೆ ಸಿದ್ಧವಾದ ಬಳಿಕ ಸ್ವಯಂ ನೋಂದಣಿ ಮಾದರಿ ಲಭ್ಯವಾಗಲಿದೆ.

ಇದನ್ನು ಹೇಗೆ ಮಾಡಲಾಗುತ್ತದೆ ಎಂಬುದರ ವಿವರ ಇಲ್ಲಿದೆ:

ಕೋವಿನ್ ವೆಬ್‌ಸೈಟ್‌ನಲ್ಲಿ ಸ್ವಯಂ ನೋಂದಣಿ

ಫೋಟೋ ಇರುವ ಸರ್ಕಾರದ ಗುರುತಿನ ಚೀಟಿ(ಐಡೆಂಟಿಟಿ ಕಾರ್ಡ್) ಅಪ್‌ಲೋಡ್ ಮಾಡಿ ಅಥವಾ ಆಧಾರ್ ದೃಢೀಕರಣವನ್ನು ಮಾಡಿ. ದೃಢೀಕರಣವು ಬಯೋಮೆಟ್ರಿಕ್ಸ್, ಒಟಿಪಿ ಮೂಲಕ ಆಗಬಹುದು.

ನೋಂದಣಿ ಆದ ಬಳಿಕ ಲಸಿಕೆಗೆ ಸಮಯ, ಸ್ಥಳ ನಿಗದಿಪಡಿಸಲಾಗುತ್ತದೆ

* ಲಸಿಕೆ ಹಾಕುವ ಸ್ಥಳದಲ್ಲಿ ಯಾವುದೇ ನೋಂದಣಿ ಇರುವುದಿಲ್ಲ. ಮೊದಲೇ ನೋಂದಾಯಿತ ಫಲಾನುಭವಿಗಳಿಗೆ ಮಾತ್ರ ಲಸಿಕೆ ಹಾಕಲು ಅವಕಾಶ ಇರುತ್ತದೆ.

* ಕೋವಿನ್ ವ್ಯವಸ್ಥೆಯಲ್ಲಿ ಲಸಿಕೆ ಅಭಿಯಾನದ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಜಿಲ್ಲಾಡಳಿತ ವಹಿಸಿಕೊಳ್ಳಲಿದೆ. ಲಸಿಕೆಗಾಗಿ ಫಲಾನುಭವಿಗಳು ಮತ್ತು ಸ್ಥಳವನ್ನು ಅವರೇ ಅನುಮೋದಿಸುತ್ತಾರೆ. ಕೋವಿನ್(cowin)ನಲ್ಲಿ ಅಂತರ್ಗತ ಮೇಲ್ವಿಚಾರಣೆ ಮತ್ತು ವರದಿ ಮಾಡುವ ವ್ಯವಸ್ಥೆ ಇರುತ್ತದೆ.

ಲಸಿಕೆ ಎಲ್ಲಿ ಪಡೆಯುತ್ತೀರಿ?

ವಿಭಿನ್ನ ಆದ್ಯತೆಯ ಗುಂಪುಗಳಿಗೆ ಲಸಿಕೆ ಹಾಕುವ ಸ್ಥಳಗಳನ್ನು ನಿಗದಿ ಮಾಡಲಾಗಿದೆ:

ನಿಗದಿತ ಲಸಿಕೆ ನೀಡುವ ಸ್ಥಳ 

* ನಿಗದಿತ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಮೆಡಿಕಲ್ ಅಧಿಕಾರಿ ಅಥವಾ ವೈದ್ಯರು ಇರುತ್ತಾರೆ. 

ಆಸ್ಪತ್ರೆ ಬಿಟ್ಟು ಬೇರೆಡೆಯೂ ಲಸಿಕೆ ಸೌಲಭ್ಯ 

* ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಶಾಲೆಗಳು, ಸಮುದಾಯ ಭವನಗಳು ಇತ್ಯಾದಿ ಕಡೆಗಳಲ್ಲಿಯೂ ಲಸಿಕೆ ಅಭಿಯಾನಕ್ಕೆ ಸ್ಥಳ ನಿಗದಿಪಡಿಸಲಾಗುತ್ತದೆ.

ವಿಶೇಷ ಸಂಚಾರಿ ತಂಡಗಳು

* ಇದು ದೂರದ, ತಲುಪಲು ಕಷ್ಟವಾದ ಪ್ರದೇಶಗಳು, ವಲಸೆ ಜನಸಂಖ್ಯೆಯ ಪ್ರದೇಶಗಳು ಮತ್ತು ಅಂತರರಾಷ್ಟ್ರೀಯ ಗಡಿ ಪ್ರದೇಶಗಳಿಗೆ ಜಿಲ್ಲಾಡಳಿತಗಳು ಈ ತಂಡಗಳನ್ನು ಯೋಜಿಸಬೇಕಾಗಿದೆ.

ಲಸಿಕೆ ಹಾಕುವ ಪ್ರಕ್ರಿಯೆ ಹೇಗಿರುತ್ತದೆ?

* ಲಸಿಕೆ ಹಾಕುವ ಸ್ಥಳದಲ್ಲಿ ಲಸಿಕೆ ಅಭಿಯಾನದ ಪ್ರಕ್ರಿಯೆಗಾಗಿ ಮೂರು ಪ್ರತ್ಯೇಕ ಕೊಠಡಿಗಳಿರುತ್ತವೆ. ಕಾಯುವ ಕೊಠಡಿ  - ಲಸಿಕೆ ಹಾಕುವುದಕ್ಕೂ ಮುನ್ನ ಫಲಾನುಭವಿಗಳು ಇಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯಬೇಕು, ಲಸಿಕೆ ಕೊಠಡಿ –ಇಲ್ಲಿ ಫಲಾನುಭವಿಗಳಿಗೆ ವೈದ್ಯರು ಅಥವಾ ವೈದ್ಯಾಧಿಕಾರಿ ಲಸಿಕೆ ಹಾಕುತ್ತಾರೆ, ಮೇಲ್ವಿಚಾರಣಾ ಕೊಠಡಿ: ಲಸಿಕೆ ಪಡೆದ ಬಳಿಕ ವ್ಯಕ್ತಿಯನ್ನು 30 ನಿಮಿಷಗಳ ಕಾಲ ಮೇಲ್ವಿಚಾರಣೆಯಲ್ಲಿ ಇರಿಸಿಕೊಂಡು ಆತನ ಮೇಲೆ ಲಸಿಕೆ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಲಸಿಕೆ ಹಾಕುವವರು ಯಾರು?
ಲಸಿಕೆ ಕೇಂದ್ರದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿ ಐದು ಸದಸ್ಯರ ತಂಡ ಇರುತ್ತದೆ.

* ಲಸಿಕೆ ಅಧಿಕಾರಿ 1: ಲಸಿಕೆ ಹಾಕಿಸಿಕೊಳ್ಳಲು ಬರುವ ವ್ಯಕ್ತಿಯ ನೋಂದಣಿಯನ್ನು ಮೊದಲೇ ಪರಿಶೀಲಿಸುತ್ತಾರೆ.

* ಲಸಿಕೆ ಅಧಿಕಾರಿ 2: ವ್ಯಕ್ತಿಯ ದೃಢೀಕರಣ ಮಾಡುತ್ತಾರೆ.

* ಲಸಿಕೆ ಅಧಿಕಾರಿ 3: ಲಸಿಕೆ ನೀಡುವ ಉಸ್ತುವಾರಿ. ಇದು ಇಂಟ್ರಾಮಸ್ಕುಲರ್ ಲಸಿಕೆ ಆಗಿರುವುದರಿಂದ ತರಬೇತಿ ಪಡೆದ ವೃತ್ತಿಪರರು ಲಸಿಕೆಯನ್ನು ನೀಡುತ್ತಾರೆ.

* ಲಸಿಕೆ ಅಧಿಕಾರಿ 4 ಮತ್ತು 5: ಗುಂಪಿನ ನಿರ್ವಹಣೆ ಮತ್ತು 30 ನಿಮಿಷಗಳ ವೀಕ್ಷಣೆಯ ಉಸ್ತುವಾರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.