ಬುಧವಾರ, ಜುಲೈ 6, 2022
22 °C
ಆಂಬುಲೆನ್ಸ್‌ ಚಾಲಕರಿಂದ ₹ 10,000 ಬೇಡಿಕೆ, ದೌರ್ಜನ್ಯ

ತಿರುಪತಿ: ಬೈಕ್‌ನಲ್ಲೇ ಮಗನ ಶವ: 90 ಕಿ.ಮೀ. ಸಾಗಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುಪತಿ (ಪಿಟಿಐ): ಮಗನ ಶವವನ್ನು ಹೊತ್ತೊಯ್ಯಲು ಆಂಬುಲೆನ್ಸ್‌ನ ಚಾಲಕರ ಬೇಡಿಕೆಯಂತೆ ₹ 10,000 ಕೊಡಲು ಸಾಧ್ಯವಾಗದೇ ತಂದೆಯೊಬ್ಬರು ಬೈಕ್‌ನ ಹಿಂಬದಿ ಕುಳಿತು, ತೊಡೆಯ ಮೇಲೆ ಮಗನ ಮೃತದೇಹವನ್ನಿರಿಸಿಕೊಂಡು ತಿರುಪತಿಯಿಂದ 90 ಕಿ.ಮೀ. ದೂರದ ಗ್ರಾಮಕ್ಕೆ ತೆರಳಿದ ಹೃದಯವಿದ್ರಾವಕ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ನೆರೆಯ ಅನ್ನಮಯ್ಯ ಜಿಲ್ಲೆಯ ಚಿತ್ವೇಲಿ ಗ್ರಾಮದ ಕೃಷಿಕೂಲಿಕಾರ, ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 10 ವರ್ಷದ ಮಗನನ್ನು ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾನೆ.

ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕರ ಬೇಡಿಕೆ ಇಟ್ಟಷ್ಟು ಹಣ ಕೊಡಲು ಸಾಧ್ಯವಾಗದ ಕಾರಣ, ಮೃತ ಬಾಲಕನ ತಂದೆ ತನ್ನ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.  ಸಂಬಂಧಿಕರು ಗ್ರಾಮದಿಂದ ಬೇರೆ ಆಂಬುಲೆನ್ಸ್‌ ಕಳುಹಿಸಿದ್ದರು. ಆ ಆಂಬುಲೆನ್ಸ್ ಚಾಲಕನನ್ನು ಥಳಿಸಿದ ರುಯಾ ಆಸ್ಪತ್ರೆ ಆಂಬುಲೆನ್ಸ್‌ ಚಾಲಕರು, ಗ್ರಾಮದಿಂದ ಬಂದಿದ್ದ ಆಂಬುಲೆನ್ಸ್‌ ಜಾಗ ಖಾಲಿ ಮಾಡುವಂತೆಯೂ ಮಾಡಿದ್ದಾರೆ.

ಆಗ ಬೇರೆ ದಾರಿ ಕಾಣದೇ, ಸಂಬಂಧಿಯೊಬ್ಬರ ಬೈಕ್‌ನಲ್ಲಿ ಮಗನ ಶವವನ್ನು ತೊಡೆಯ ಮೇಲಿರಿಸಿಕೊಂಡು ಬೈಕ್‌ನ ಹಿಂಬದಿ ಕುಳಿತು ಆ ಕೃಷಿ ಕೂಲಿಕಾರ ಗ್ರಾಮಕ್ಕೆ ತೆರಳಿದ್ದಾರೆ.

ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರುಯಾ ಆಸ್ಪತ್ರೆಯ ಹಿರಿಯ ಸ್ಥಾನಿಕ ವೈದ್ಯಕೀಯ ಅಧಿಕಾರಿಯನ್ನು ಅಮಾನತುಗೊಳಿಸಿರುವ ರಾಜ್ಯ ಸರ್ಕಾರ, ಆಸ್ಪತ್ರೆಯ ಸೂಪರಿಂಟೆಂಡೆಂಟ್‌ಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕರನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆಯೂ ಸೂಚಿಸಿದೆ.

‘ಈ ಘಟನೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಅಥವಾ ಖಾಸಗಿ ವ್ಯಕ್ತಿಗಳ ಪಾತ್ರ ಇದೆಯೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ
ಜರುಗಿಸಲಾಗುವುದು. ಯಾರನ್ನೂ ರಕ್ಷಿಸುವ ಮಾತೇ ಇಲ್ಲ’ ಎಂದು ಆರೋಗ್ಯ ಸಚಿವೆ ವಿ.ರಜಿನಿ ಪ್ರತಿಕ್ರಿಯಿಸಿದ್ದಾರೆ.

ಘಟನೆ ಕುರಿತು ವಿಚಾರಣೆ ನಡೆಸುವ ಸಂಬಂಧ ತಿರುಪತಿ ಜಿಲ್ಲಾಧಿಕಾರಿ ವೆಂಕಟರಮಣ ರೆಡ್ಡಿ ಅವರು ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದಾರೆ. ‘ರುಯಾ ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕರು ದೌರ್ಜನ್ಯ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಗೆ ಕಾರಣರು ಎನ್ನಲಾದ ನಾಲ್ವರು ಚಾಲಕರನ್ನು ಗುರುತಿಸಲಾಗಿದೆ’ ಎಂದು ಈ ತ್ರಿಸದಸ್ಯ ಸಮಿತಿ ಹೇಳಿದೆ.

ಟೀಕೆ–ಪ್ರತಿಭಟನೆ: ‘ಈ ಘಟನೆ ರಾಜ್ಯದ ಆರೋಗ್ಯ ಕ್ಷೇತ್ರದ ದುಃಸ್ಥಿತಿಗೆ ಹಿಡಿದ ಕನ್ನಡಿ’ ಎಂದು ಟಿಡಿಪಿ ಮುಖ್ಯಸ್ಥ ಹಾಗೂ ವಿರೋಧ ಪಕ್ಷದ ನಾಯಕ ಎನ್‌.ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು