ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿಯಲ್ಲಿ ಭಾರಿ ಮಳೆ; ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳ ಪ್ರವಾಹ

Last Updated 19 ನವೆಂಬರ್ 2021, 3:14 IST
ಅಕ್ಷರ ಗಾತ್ರ

ತಿರುಪತಿ: ಕೆಲವು ಭಕ್ತರು ಕಾಲ್ನಡಿಗೆಯ ಮೂಲಕ, ಇನ್ನೂ ಕೆಲವರು ವಾಹನಗಳ ಮೂಲಕ ತಿರುಮಲ ಪ್ರವೇಶಿಸಿ ವೆಂಕಟೇಶ್ವರ ದೇವಾಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ, ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಯಾವುದೇ ಮಾರ್ಗದಲ್ಲಿ ತಿರುಮಲಕ್ಕೆ ಹೋಗುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡಿದವರು, ಪ್ರವಾಸಿಗರು, ಸ್ಥಳೀಯರು ಮಳೆಯ ರಭಸದಿಂದ ಎದುರಾಗಿರುವ ಪ್ರವಾಹದ ಸ್ಥಿತಿಗೆ ತತ್ತರಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೊಳೆಯಾದ ರಸ್ತೆಗಳ ವಿಡಿಯೊಗಳು ಹರಿದಾಡುತ್ತಿವೆ.

ಭಾರಿ ಮಳೆಯಿಂದ ತಿರುಪತಿಯಲ್ಲಿ ಜನ ಜೀವನಕ್ಕೂ ಅಡ್ಡಿ ಉಂಟಾಗಿದೆ. ಮಳೆಯಿಂದಾಗಿ ಯಾತ್ರಿಕರೂ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದಾಟುವುದು, ಅಗತ್ಯ ವಸ್ತುಗಳನ್ನು ತರುವುದು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿರುವುದನ್ನು ವಿಡಿಯೊಗಳಲ್ಲಿ ಕಾಣಬಹುದಾಗಿದೆ.

ಅಲ್ಲಲ್ಲಿ ಸೃಷ್ಟಿಯಾಗಿರುವ ಜಲಧಾರೆಗಳು, ಹಲವು ಕಡೆ ಉಂಟಾಗಿರುವ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಿರುಪತಿಯ ಪರಿಸ್ಥಿತಿಯ ಕುರಿತು ವಿಡಿಯೊಗಳು, ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು – 'ಸದ್ಯಕ್ಕೆ ತಿರುಪತಿ ಕಡೆಗೆ ಪ್ರವಾಸ, ಪ್ರಯಾಣ ಮಾಡಬೇಡಿ' ಎಂದು ಎಚ್ಚರಿಕೆ ಸಂದೇಶಗಳನ್ನು ಪ್ರಕಟಿಸಿಕೊಂಡಿದ್ದಾರೆ. ಇದರೊಂದಿಗೆ ಕೆಲವು ಹಳೆಯ ವಿಡಿಯೊಗಳು, ಯಾವುದೋ ಪ್ರದೇಶದ ಪ್ರವಾಹದ ವಿಡಿಯೊಗಳು ಸಹ ನುಸುಳುತ್ತಿವೆ.

ತಿರುಪತಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಯಾತ್ರಿಕರ ಸುರಕ್ಷತೆ ದೃಷ್ಟಿಯಿಂದ, ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ತೆರಳುವ ಎರಡೂ ಪಾದಚಾರಿ ಮಾರ್ಗಗಳನ್ನು ಬಂದ್‌ ಮಾಡಲಾಗಿದೆ. ಮುಂದಿನ ಆದೇಶದ ವರೆಗೂ ಈ ನಿಯಮ ಜಾರಿಯಲ್ಲಿ ಇರಲಿದೆ ಎಂದು ಟಿಟಿಡಿ ತಿಳಿಸಿದೆ. ಟಿಟಿಡಿ ಕಚೇರಿಯ ಸಿಬ್ಬಂದಿಗೆ ಇಂದು ರಜೆ ಘೋಷಿಸಲಾಗಿದೆ.

ವೆಂಕಟೇಶ್ವರ ದೇವಸ್ಥಾನಕ್ಕೆ ಸಾಗುವ ರಸ್ತೆಗಳ ಮೇಲೆ ಬಿದ್ದಿರುವ ಬಂಡೆ ಮತ್ತು ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ವೈಕುಂಟಂನ ಸರದಿ ಸಾಲಿನ ಜಾಗದಲ್ಲೂ ಮಳೆ ನೀರು ನಿಂತಿದೆ. ತಿರುಪತಿಯಲ್ಲಿ ಇಂದು ನಡೆಯಬೇಕಿದ್ದ ಕಾರ್ತಿಕ ದೀಪೋತ್ಸವವನ್ನು ಮುಂದೂಡಲಾಗಿದೆ. ದರ್ಶನಕ್ಕೆ ಬಂದು ಮಳೆಯಿಂದ ಸಿಲುಕಿರುವ ಭಕ್ತಾದಿಗಳಿಗೆ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್‌ (ಟಿಟಿಡಿ) ಸಿಬ್ಬಂದಿ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿರುವುದಾಗಿ ವರದಿಯಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪೂರ್ವ ಕರಾವಳಿ ತೀರಗಳ ಹತ್ತಿರಕ್ಕೆ ಸಾಗುತ್ತಿರುವ ಕಾರಣ ನಲ್ಲೂರು, ಚಿತ್ತೂರು ಮತ್ತು ಕಡಪ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದೆ. ಈ ಭಾಗದಲ್ಲಿ ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಿರುಪತಿಯ ರೇಣಿಗುಂಟ ವಿಮಾನ ನಿಲ್ದಾಣ ಕೂಡಾ ಜಲಾವೃತವಾಗಿದ್ದು, ಇಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಬೆಂಗಳೂರು ಮತ್ತು ಹೈದರಾಬಾದಿನ ಕಡೆ ತಿರುಗಿಸಲಾಯಿತು. ತಗ್ಗು ಪ್ರದೇಶದ ಹಲವು ಪ್ರದೇಶಗಳು, ಕೊಳೆಗೇರಿಗಳು ಜಲಾವೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT