ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಬಿಜೆಪಿಗೆ ಸೋಲಿನ ಭೀತಿ: ನಮ್ಮ ನಾಯಕರ ಬಂಧನ ಸಾಧ್ಯತೆ– ಕೇಜ್ರಿವಾಲ್

Last Updated 28 ಸೆಪ್ಟೆಂಬರ್ 2022, 12:56 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಆತಂಕದಲ್ಲಿರುವ ಬಿಜೆಪಿ, ಆಮ್ ಆದ್ಮಿ ಪಕ್ಷವನ್ನು ಹಣಿಯಲು ಪ್ರಯತ್ನಿಸುತ್ತಿದ್ದು, ಸುಳ್ಳು ಪ್ರಕರಣ ದಾಖಲಿಸಿ ಮುಂಬರುವ ದಿನಗಳಲ್ಲಿ ಪಕ್ಷದ ಯಾವುದೇ ನಾಯಕರನ್ನು ಬಂಧಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಆರೋಪಿಯಾಗಿರುವ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿಯ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರನ್ನು ಸಿಬಿಐ ಬಂಧಿಸಿದ ಒಂದು ದಿನದ ಬಳಿಕ ಕೇಜ್ರಿವಾಲ್ ಈ ಆರೋಪ ಮಾಡಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಅವರನ್ನು ಸಿಲುಕಿಸಲು ಸುಳ್ಳು ಹೇಳಿಕೆ ನೀಡುವಂತೆ ತನಿಖಾ ಸಂಸ್ಥೆಯ ಅಧಿಕಾರಿಗಳು ಮಾಡಿದ ಒತ್ತಡಕ್ಕೆ ಮಣಿಯದ ಹಿನ್ನೆಲೆಯಲ್ಲಿ ನಾಯರ್ ಅವರನ್ನು ಸಿಬಿಐ ಬಂಧಿಸಿ ಕರೆದೊಯ್ದಿದೆ ಎಂದು ಅವರು ಆರೋಪಿಸಿದರು.

ದೇಶದ ರಾಜಧಾನಿ ಅಬಕಾರಿ ಪರವಾನಗಿ ಹಂಚಿಕೆಗೆ ಸಂಬಂಧಿಸಿದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನಾಯರ್ ಅವರನ್ನು ಸಿಬಿಐ ಬಂಧಿಸಿದೆ.

‘ಗುಜರಾತ್‌ನಲ್ಲಿ ಎಎಪಿಯ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿರುವುದರಿಂದ ಬಿಜೆಪಿ ನಾಯಕರು ವಿಚಲಿತರಾಗಿದ್ದಾರೆ. ಗುಜರಾತ್ ಜನ ಬೀದಿಗಿಳಿದು, ಬಿಜೆಪಿ ವಿರುದರ್ಧ ಬಹಿರಂಗ ಟೀಕೆ ಮಾಡುತ್ತಿದ್ದಾರೆ’ ಎಂದು ಕೇಜ್ರಿವಾಲ್ ಆರೋಪಿಸಿದರು.

ಅಬಕಾರಿ ಹಗರಣ ಆರೋಪಕ್ಕೂ, ನಾಯರ್‌ಗೂ ಯಾವುದೇ ಸಂಬಂಧವಿಲ್ಲ. ಸಿಸೋಡಿಯಾ ವಿರುದ್ಧ ಸುಳ್ಳು ಹೇಳಿಕೆ ನೀಡಲು ನಿರಾಕರಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಕಿಡಿಕಾರಿದರು.

ಮೊದಲು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು. ಬಳಿಕ, ಶಾಸಕ ಅಮಾನತುಲ್ಲಾ ಖಾನ್ ಮತ್ತು ಈಗ ನಾಯರ್ ಅವರನ್ನು ಸಂಪೂರ್ಣ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.

‘ಗುಜರಾತ್ ಚುನಾವಣೆ ಸೋಲಿನ ಭಯದಲ್ಲಿ ದಿನದ 24 ಗಂಟೆ ಎಎಪಿ ನಾಯಕರ ವಿರುದ್ಧ ಬಿಜೆಪಿ ನಾಯಕರು ಪಿತೂರಿ ನಡೆಸುತ್ತಿದ್ದಾರೆ’ ಎಂದು ಕೇಜ್ರಿವಾಲ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT