ನಕಲಿ ಎನ್‌ಕೌಂಟರ್: ಸೇನೆಯ ಕ್ಯಾಪ್ಟನ್ ವಿರುದ್ಧ ಆರೋಪ ಪಟ್ಟಿ

ಸೋಫಿಯಾನ್ (ಕಾಶ್ಮೀರ): ₹20 ಲಕ್ಷದ ಆಸೆಗೆ ನಕಲಿ ಎನ್‌ಕೌಂಟರ್ ಮಾಡಿದ್ದ ಸೇನೆಯ ಕ್ಯಾಪ್ಟನ್ ಭೂಪಿಂದರ್ ಸಿಂಗ್ ವಿರುದ್ಧ ಪೊಲೀಸರು ಭಾನುವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಭೂಪಿಂದರ್ ಅವರು ಸದ್ಯ ಸೇನೆಯ ಅಧಿಕಾರಿಗಳ ಸುಪರ್ದಿಯಲ್ಲಿದ್ದು ಅವರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2020ರ ಜುಲೈ 18ರಂದು ಅಮಶಿಪುರದಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ರಜೌರಿ ಜಿಲ್ಲೆಯ ಇಮ್ತಿಯಾಜ್ ಅಹಮದ್, ಅಬ್ರಾರ್ ಅಹಮದ್ ಹಾಗೂ ಮೊಹಮ್ಮದ್ ಇಬ್ರಾರ್ ಅವರನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಅವರಿಗೆ ಉಗ್ರರ ಹಣೆಪಟ್ಟಿ ಕಟ್ಟಲಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ವಿಶೇಷ ತನಿಖಾ ತಂಡವು ರಜೌರಿ ಜಿಲ್ಲೆಯ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 75 ಸಾಕ್ಷಿಗಳ ಹೆಸರನ್ನು ನಮೂದಿಸಿದೆ. ಆರೋಪಿಗಳ ದೂರವಾಣಿ ಕರೆಯ ದತ್ತಾಂಶಗಳನ್ನೂ ಉಲ್ಲೇಖಿಸಿದೆ. ಎನ್‌ಕೌಂಟರ್ ವೇಳೆ ಭೂಪಿಂದರ್ ಅವರ ತಂಡದಲ್ಲಿದ್ದ ಸುಬೇದಾರ್ ಗಾರು ರಾಮ್, ಲ್ಯಾನ್ಸ್ ನಾಯಕ್ ರವಿಕುಮಾರ್, ಸಿಪಾಯಿಗಳಾದ ಅಶ್ವನಿ ಕುಮಾರ್ ಮತ್ತು ಯೋಗೇಶ್ ಅವರ ಹೇಳಿಕೆಗಳನ್ನೂ ಉಲ್ಲೇಖಿಸಲಾಗಿದೆ.
ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಯುವ ಖಚಿತ ಮಾಹಿತಿಯೊಂದಿಗೆ ನಾಗರಿಕರಾದ ತಬೀಶ್ ನಜೀರ್ ಮತ್ತು ಬಿಲಾಲ್ ಅಹಮದ್ ಲೋನ್ ಅವರೊಂದಿಗೆ ಸೇನಾ ಶಿಬಿರ ತೊರೆದಿದ್ದೆವು. ಘಟನಾ ಸ್ಥಳ ತಲುಪಿದ ಕೂಡಲೇ ನಾಲ್ವರನ್ನು ನಾಲ್ಕು ದಿಕ್ಕುಗಳಿಂದ ಸುತ್ತುವರಿಯುವಂತೆ ಸೂಚಿಸಲಾಯಿತು. ವಾಹನದಿಂದ ಕೆಳಗಿಳಿದು ಸೂಚಿಸಿದ್ದ ಸ್ಥಳಕ್ಕೆ ತೆರಳುವ ಮುನ್ನವೇ ಗುಂಡುಗಳ ಸದ್ದು ಕಿವಿಗಪ್ಪಳಿಸಿತ್ತು ಎಂದು ನಾಲ್ವರು ಅಧಿಕಾರಿಗಳು ಹೇಳಿಕೆ ನೀಡಿರುವುದಾಗಿ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.