ಸೋಮವಾರ, ಏಪ್ರಿಲ್ 12, 2021
29 °C

ಉಗ್ರರ ದಾಳಿ: ಯೋಧ ಹುತಾತ್ಮ ಮೂವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಶಾಲೆಯೊಳಗೆ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕವು(ಐಇಡಿ) ಸ್ಫೋಟಗೊಂಡು ಯೋಧರೊಬ್ಬರು ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಶಮ್ಸಿಪೊರಾದಲ್ಲಿ ಬುಧವಾರ ನಡೆದಿದೆ. ಈ ವರ್ಷದ ಮೊದಲ ಉಗ್ರರ ದಾಳಿ ಇದಾಗಿದೆ.

ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಭನ್‌ಪೊರಾ ಪ್ರದೇಶದಲ್ಲಿ ಸೇನೆಯ 24ನೇ ರಾಷ್ಟ್ರೀಯ ರೈಫಲ್ಸ್‌ನ ‘ರೋಡ್‌ ಓಪನಿಂಗ್‌ ಪಾರ್ಟಿ’ಯ(ಆರ್‌ಒಪಿ) ನಾಲ್ವರು ಯೋಧರು ಪ್ರಯಾಣಿಸುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿದೆ. ಗಾಯಗೊಂಡ ನಾಲ್ವರು ಯೋಧರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಒಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಹುತಾತ್ಮರಾಗಿದ್ದಾರೆ. ಉಳಿದ ಮೂವರ ಪೈಕಿ ಒಬ್ಬರ ಆರೋಗ್ಯ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಇಡಿಯನ್ನು ಶಾಲೆಯ ಕಟ್ಟಡದೊಳಗೆ ಉಗ್ರರು ಹುದುಗಿಸಿಟ್ಟಿದ್ದ ಕಾರಣ, ಸ್ಫೋಟದ ತೀವ್ರತೆಗೆ ಶಾಲೆಯ ಕಟ್ಟಡವೂ ಹಾನಿಗೊಂಡಿದೆ. ಘಟನೆ ನಡೆದ ಬೆನ್ನಲ್ಲೇ ಸೇನೆಯು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರ ಶೋಧಕಾರ್ಯ ಆರಂಭಿಸಿದೆ. ಈ ವರ್ಷದಲ್ಲಿ ಇಲ್ಲಿಯವರೆಗೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಯಾವುದೇ ಎನ್‌ಕೌಂಟರ್‌ ನಡೆದಿಲ್ಲ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ 225 ಉಗ್ರರು ಹತ್ಯೆಯಾಗಿದ್ದರೆ, ಭದ್ರತಾ ಪಡೆಯ 60 ಸಿಬ್ಬಂದಿ ಹುತಾತ್ಮರಾಗಿದ್ದರು. 2019ರಲ್ಲಿ 157 ಹಾಗೂ 2018ರಲ್ಲಿ 257 ಉಗ್ರರರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು