ಗುರುವಾರ , ಅಕ್ಟೋಬರ್ 6, 2022
26 °C

ಸುಳ್ಳುಗಳ ಮೂಲಕ ಜನರಲ್ಲಿ ಭಯ ಸೃಷ್ಟಿಸುತ್ತಿರುವ ಕೇಜ್ರಿವಾಲ್‌: ಅನುರಾಗ್‌ ಠಾಕೂರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೇಂದ್ರದ ಹಣಕಾಸು ನೀತಿಯನ್ನು ಟೀಕಿಸುವ ಮೂಲಕ ಜನಸಾಮಾನ್ಯರಲ್ಲಿ ಭಯವನ್ನು ಸೃಷ್ಟಿಸುತ್ತಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಸರ್ಕಾರದ ಸಚಿವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ‘ಮರೆಮಾಚುವ’ ಉದ್ದೇಶದಿಂದ ಕೇಜ್ರಿವಾಲ್‌ ಟೀಕೆಗಳನ್ನು ಮಾಡುತ್ತಿದ್ದಾರೆಂದು ಠಾಕೂರ್ ಹರಿಹಾಯ್ದಿದ್ದಾರೆ. 

‘ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಅಲ್ಲ, ಅವರು ಸುಳ್ಳುಗಳ ಮಂತ್ರಿ. ಅವರು ಕಾಲಕಾಲಕ್ಕೆ ಸುಳ್ಳು ಹೇಳುತ್ತಲೇ ಇರುತ್ತಾರೆ,’ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿ ಸರ್ಕಾರದ ಆರೋಗ್ಯ ಸಚಿವರು, ಉಪ ಮುಖ್ಯಮಂತ್ರಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈಗ ಅವರಿಗೆ(ಕೇಜ್ರಿವಾಲ್‌) ಹೇಳಲು ಏನೂ ಉಳಿದಿಲ್ಲ. ಅದಕ್ಕಾಗಿಯೇ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ. 

ಉಚಿತ ಯೋಜನೆಗಳು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ಪ್ರಯತ್ನಕ್ಕೆ ತೊಡಕಾಗಿದೆ ಮತ್ತು ತೆರಿಗೆದಾರರಿಗೆ ಹೊರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್‌, ಹಾಗಿದ್ದರೆ ಸರ್ಕಾರದ ಕೆಲಸವೇನು? ತೆರಿಗೆದಾರರ ದುಡ್ಡನ್ನು ಜನರ ಏಳ್ಗೆಗಾಗಿ ಖರ್ಚು ಮಾಡದಿರುವುದು ಮೋಸವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ವೈದ್ಯಕೀಯ ನೆರವು ಸಿಗುತ್ತಿದೆ ಎಂದಾದರೆ ತೆರಿಗೆದಾರರು ಸಂತೋಷ ಪಡುತ್ತಾರೆ. ನಮ್ಮ ದುಡ್ಡು ನಮ್ಮ ಮಕ್ಕಳಿಗೆ ಬಳಕೆಯಾಗುತ್ತಿದೆ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. ಆದರೆ ತೆರಿಗೆದಾರರ ದುಡ್ಡನ್ನು ರಾಜಕಾರಣಿಗಳು ತಮ್ಮ ಸ್ವಂತಕ್ಕೆ ಅಥವಾ ಅವರ ಸ್ನೇಹಿತರಿಗಾಗಿ ಬಳಸಿಕೊಳ್ಳುವುದು ವಂಚನೆಯಾಗಿದೆ. ಪ್ರಬಲ ವ್ಯಕ್ತಿಗಳಾಗಿರುವ ಕೆಲವು ಸ್ನೇಹಿತರಿಗೆ ತೆರಿಗೆ ದುಡ್ಡನ್ನು ವ್ಯಯಿಸುತ್ತಿರುವುದರಿಂದ ಮೋಸ ಹೋಗಿದ್ದೇವೆ ಎಂಬ ಭಾವನೆ ಜನರನ್ನು ಕಾಡುತ್ತಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು