ಶುಕ್ರವಾರ, ಡಿಸೆಂಬರ್ 9, 2022
21 °C

ರಾಜಸ್ಥಾನದ ಬೆಳವಣಿಗೆಗೆ ಖರ್ಗೆ ಕ್ಷಮೆ ಕೋರಿದ ಗೆಹಲೋತ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಕುರಿತಂತೆ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಕೇಂದ್ರೀಯ ವೀಕ್ಷಕರಾಗಿ ಆಗಮಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷಮೆ ಯಾಚಿಸಿದ್ಧಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಪರ್ಯಾಯವಾಗಿ ಶಾಸಕರು ಮತ್ತೊಂದು ಸಭೆ ನಡೆಸಿರುವುದು ತಪ್ಪು. ಆ ರೀತಿ ಆಗಬಾರದಿತ್ತು. ಅದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ ಎಂದು ಗೆಹಲೋತ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ, ಗೆಹಲೋತ್ ಏನೇ ಹೇಳಿದರೂ ಅವರ ಅನುಮತಿ ಇಲ್ಲದೆ 90 ಶಾಸಕರ ಸಭೆ ನಡೆಯಲು ಸಾಧ್ಯವೇ ಇಲ್ಲ ಎಂದು ಖರ್ಗೆ ಹೇಳಿರುವುದಾಗಿ ತಿಳಿದುಬಂದಿದೆ. ಈ ಮಧ್ಯೆ, ದೆಹಲಿಗೆ ವಾಪಸ್ ಆಗಿರುವ ಖರ್ಗೆ, ಗೆಹಲೋತ್ ಅವರು, ವೀಕ್ಷಕರ ತಂಡವನ್ನು ಅವಮಾನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ರಾಜಸ್ಥಾನ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ. ರಾಜಸ್ಥಾನದ ಬೆಳವಣಿಗೆಗಳ ಬಗ್ಗೆ ವಿವರವಾದ ಲಿಖಿತ ವರದಿ ನೀಡುವಂತೆ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ ಮಾಕನ್‌ ಅವರಿಗೆ ಸೂಚಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಸುಮಾರು 90 ಶಾಸಕರ ವರ್ತನೆಯು ಮೇಲ್ನೋಟಕ್ಕೆ ಅಶಿಸ್ತಿನಂತೆ ಕಾಣಿಸುತ್ತಿದೆ ಎನ್ನುವ ಮೂಲಕ ಪಕ್ಷವು ತನ್ನ ಅಸಮಾಧಾನವನ್ನು ಸ್ಪಷ್ಟವಾಗಿಯೇ ಹೊರಹಾಕಿದೆ. ನೆಹರೂ–ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಕಾಂಗ್ರೆಸ್ ಮುಖಂಡರೊಬ್ಬರು ಅಧ್ಯಕ್ಷ ಚುನಾವಣೆಯ ಎರಡು ನಾಮಪತ್ರಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಅದು ಯಾರಿಗಾಗಿ ಎಂಬುದು ಸ್ಪಷ್ಟವಾಗಿಲ್ಲ. ಗೆಹಲೋತ್ ಅವರು ಸ್ಪರ್ಧಿಸಲಿದ್ದಾರೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿ ನೆಹರೂ–ಗಾಂಧಿ ಕುಟುಂಬದ ಒಲವನ್ನು ಗೆಹಲೋತ್‌ ಕಳೆದುಕೊಂಡಿದ್ದಾರೆ ಎಂದು ಪಕ್ಷದ ವಲಯದಲ್ಲಿ ಮಾತುಕತೆ ನಡೆಯುತ್ತಿದೆ.

‌ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರ ಜತೆಗೆ ಸೋನಿಯಾ ಅವರು ಸೋಮವಾರ ಸಭೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ ಮಾಕನ್‌ ಅವರು ‍ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜಸ್ಥಾನದಲ್ಲಿನ ಬೆಳವಣಿಗೆಗಳ ಬಗ್ಗೆ ಸೋಮವಾರ ವಿವರಣೆ ಕೊಟ್ಟಿದ್ದಾರೆ.

ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಭಾನುವಾರ ನಡೆಯಬೇಕಿತ್ತು. ಗೆಹಲೋತ್ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಈ ಸಭೆಯ ಉದ್ದೇಶವಾಗಿತ್ತು. ಪಕ್ಷದ ನಾಯಕತ್ವವು ಗೆಹಲೋತ್‌ ಅವರ ಪ್ರತಿಸ್ಪರ್ಧಿ ಸಚಿನ್‌ ಪೈಲಟ್‌ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಒಲವು ಹೊಂದಿತ್ತು. ಆದರೆ, ಪಕ್ಷದ 108 ಶಾಸಕರ ಪೈಕಿ 92 ಶಾಸಕರು ಇದನ್ನು ವಿರೋಧಿಸಿದ್ದರು.

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು