ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ದೇಶಕ್ಕೆ ದಿಕ್ಕು ತೋರಲಿ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚುರುಕು: ಭಾಷೆ, ಸಂಸ್ಕೃತಿಗೆ ವಿರುದ್ಧವಾಗಿರುವ ಶಕ್ತಿಗಳನ್ನು ಮಣಿಸಲು ರಾಹುಲ್‌ ಕರೆ
Last Updated 1 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ನಾಗರಕೋಯಿಲ್ (ತಮಿಳುನಾಡು): ‘ಒಂದು ಸಂಸ್ಕೃತಿ, ಒಂದು ರಾಷ್ಟ್ರ, ಒಂದು ಇತಿಹಾಸ’ ಪರಿಕಲ್ಪನೆಯನ್ನು ಮುಂದಿರಿಸುತ್ತಿರುವ ಹಾಗೂ ಭಾಷೆ–ಸಂಸ್ಕೃತಿಗೆ ವಿರುದ್ಧವಾಗಿರುವ ಶಕ್ತಿಗಳನ್ನು ಮಣಿಸುವ ಮೂಲಕ ತಮಿಳುನಾಡು ರಾಜ್ಯವು ಭಾರತಕ್ಕೆ ಹೊಸ ದಿಕ್ಕು ತೋರಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕರೆ ನೀಡಿದ್ದಾರೆ.

ತಮಿಳು ಜನರನ್ನು ಹೊರತುಪಡಿಸಿ ಬೇರೆ ಯಾರೂ ತಮಿಳುನಾಡನ್ನು ಆಳಲು ಸಾಧ್ಯವಾಗಿಲ್ಲ ಎಂಬುದನ್ನು ಇತಿಹಾಸ ತೋರಿಸಿದೆ ಎಂದು ಅವರು ಹೇಳಿದರು. ತಮಿಳುನಾಡು ಪ್ರವಾಸದಲ್ಲಿರುವ ರಾಹುಲ್ ಇಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ‘ತಮಿಳು ಜನರನ್ನು ನಿಜವಾಗಿಯೂ ಪ್ರತಿನಿಧಿಸುವ ವ್ಯಕ್ತಿ ಮಾತ್ರ ತಮಿಳುನಾಡಿನ ಮುಖ್ಯಮಂತ್ರಿಯಾಗಬಲ್ಲರು ಎಂಬುದನ್ನುಈ ಚುನಾವಣೆಯು ತೋರಿಸಲಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿಯವರಿಗೆ ನಮಸ್ಕರಿಸುವ ತಮಿಳುನಾಡು ಮುಖ್ಯಮಂತ್ರಿ ರಾಜ್ಯದ ಜನರಿಗೆ ತಲೆಬಾಗಬೇಕು. ಆರ್‌ಎಸ್‌ಎಸ್ ಮತ್ತು ಮೋದಿ ಅವರು ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಅವಮಾನಿಸಿದ್ದಾರೆ. ಅವರಿಗೆ ಇಲ್ಲಿ ಅವಕಾಶ ನೀಡಬಾರದು’ ಎಂದು ಕರೆ ಕೊಟ್ಟರು.

‘ತಮಿಳು ಭಾರತೀಯ ಭಾಷೆಯಲ್ಲವೇ. ಬಂಗಾಳಿ ಭಾರತೀಯ ಭಾಷೆಯಲ್ಲವೇ. ತಮಿಳು ಸಂಸ್ಕೃತಿ ಭಾರತೀಯ ಸಂಸ್ಕೃತಿಯಲ್ಲವೇ. ಈ ಚುನಾವಣೆಯಲ್ಲಿ ನಡೆಯುತ್ತಿರುವ ಯುದ್ಧವಿದು’ ಎಂದು ರಾಹುಲ್ ಹೇಳಿದರು.

‘ಭಾರತದ ಎಲ್ಲಾ ಭಾಷೆ ಮತ್ತು ಧರ್ಮಗಳನ್ನು ರಕ್ಷಿಸುವುದು ನನ್ನ ಕರ್ತವ್ಯ. ಅಂತೆಯೇ ತಮಿಳು ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ರಕ್ಷಿಸುವುದು ನನ್ನ ಕರ್ತವ್ಯ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಪಳನಿಸ್ವಾಮಿ ಸರ್ಕಾರವು ತಮಿಳು ಭಾಷೆ, ಸಂಸ್ಕೃತಿ– ಸಂಪ್ರದಾಯವನ್ನು ಗೌರವಿಸುತ್ತಿಲ್ಲ’ ಎಂದು ಅವರು ಆರೋಪಿಸಿದರು.

ಎರಡಂಕಿ ಬಿಜೆಪಿ ಶಾಸಕರು–ಮುರುಘನ್

(ಚೆನ್ನೈ ವರದಿ): ಆಡಳಿತಾರೂಢ ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಸೀಟು ಹೊಂದಾಣಿಕೆ ಮಾತುಕತೆ ವಿಳಂಬವಾಗುತ್ತಿಲ್ಲ ಎಂದು ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಎಲ್. ಮುರುಘನ್ ಸೋಮವಾರ ಸ್ಪಷ್ಟಪಡಿಸಿದ್ಧಾರೆ. ಸೀಟು ಹಂಚಿಕೆ ವಿಚಾರವನ್ನು ಎಳೆದಾಡಲಾಗುತ್ತಿದೆ ಎಂಬುದನ್ನು ಅವರು ಅಲ್ಲಗಳೆದರು.

‘ಎಐಎಡಿಎಂಕೆ–ಬಿಜೆಪಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಮಾಡುವುದೇ ನಮ್ಮ ಮುಂದಿರುವ ಗುರಿ’ ಎಂದಿರುವ ಮುರುಘನ್, ಎಷ್ಟು ಸೀಟುಗಳನ್ನು ನೀಡುವಂತೆ ಎಐಎಡಿಎಂಕೆ ಮುಂದೆ ಪ್ರಸ್ತಾವ ಇರಿಸಲಾಗಿದೆ ಎಂಬುದಕ್ಕೆ ನೇರವಾಗಿ ಉತ್ತರಿಸಲಿಲ್ಲ. ‘ಎರಡಂಕಿಯ ಬಿಜೆಪಿ ಶಾಸಕರು ಇರಲಿದ್ದಾರೆ’ ಎಂದಷ್ಟೇ ಹೇಳಿದರು. ಒಂದೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದರು.

ಶಶಿಕಲಾ ಬಿಡುಗಡೆ ಬಳಿಕ ಎಐಎಡಿಎಂಕೆ ಪಕ್ಷದ ಜೊತೆ ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷ ವಿಲೀನವಾಗಲಿದೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಆ ಎರಡೂ ಪಕ್ಷಗಳು ತೀರ್ಮಾನಕ್ಕೆ ಬರಲಿವೆ ಎಂದು ಮುರುಘನ್ ತಿಳಿಸಿದರು.

ಟಿಎಂಸಿಯ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ಅನುಮಾನ

(ಕೋಲ್ಕತ್ತ ವರದಿ): ತೃಣಮೂಲ ಕಾಂಗ್ರೆಸ್ ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯಿಂದ ಹಲವಾರು ಹಾಲಿ ಶಾಸಕರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಯುವಕರು, ಮಹಿಳೆಯರು ಮತ್ತು ಯಾವುದೇ ಕಳಂಕ ಇಲ್ಲದ ನಾಯಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಲು ಪಕ್ಷವು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ 12 ಸದಸ್ಯರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.

ಬಿಜೆಪಿಗೆ ಹೋಗಿರುವ 19 ಶಾಸಕರೂ ಸೇರಿದಂತೆ 294 ಅಭ್ಯರ್ಥಿಗಳ ಪೈಕಿ ಶೇ 30ರಷ್ಟು ಹೊಸಬರೇ ಇರಲಿದ್ದಾರೆ ಎನ್ನಲಾಗಿದೆ.

ಮಮತಾ–ತೇಜಸ್ವಿ ಭೇಟಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸಂಭಾವ್ಯ ಮೈತ್ರಿ ಬಗ್ಗೆ ಊಹಾಪೋಹ ಎದ್ದಿರುವ ನಡುವೆಯೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಸೋಮವಾರ ಭೇಟಿ ಮಾಡಿದರು. ಟಿಎಂಸಿ ಹಿರಿಯ ನಾಯಕ ಹಾಗೂ ಸಚಿವ ಫಿರ್ಹಾದ್ ಹಕೀಮ್ ಅವರು ಸಭೆಯಲ್ಲಿ ಇದ್ದರು.

ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಬಿಹಾರಿಗರು ಮಮತಾ ಅವರನ್ನು ಬೆಂಬಲಿಸಬೇಕು ಎಂದು ತೇಜಸ್ವಿ ಮನವಿ ಮಾಡಿದರು. ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆಯೇ ಎಂಬ ಪ್ರಶ್ನೆಗೆ ಅವರು ನೇರವಾದ ಉತ್ತರ ನೀಡಲಿಲ್ಲ.

ಬಂಗಾಳಕ್ಕೆ ಕಾಂಗ್ರೆಸ್‌ನಿಂದ 28 ವೀಕ್ಷಕರು

ಚುನಾವಣೆ ನಿಗದಿಯಾಗಿರುವ ಪಶ್ಚಿಮ ಬಂಗಾಳಕ್ಕೆ 28 ವೀಕ್ಷಕರನ್ನು ಕಾಂಗ್ರೆಸ್ ಪಕ್ಷ ನಿಯೋಜಿಸಿದೆ ಎಂದು ಹಿರಿಯ ಮುಖಂಡರೊಬ್ಬರು ತಿಳಿಸಿದ್ಧಾರೆ. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ ಹಾಗೂ ಜಾರ್ಖಂಡ್‌ನ ಮುಖಂಡರು ವೀಕ್ಷಕರಾಗಿ ನೇಮಕವಾಗಿದ್ದಾರೆ.

8 ಹಂತದ ಮತದಾನ ಪ್ರಶ್ನಿಸಿ ಅರ್ಜಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸಲು ಮುಂದಾಗಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿ ಸಲ್ಲಿಸಿರುವ ಎಂ.ಎಲ್. ಶರ್ಮಾ ಅವರು ಚುನಾವಣಾ ಆಯೋಗದ ಈ ನಿರ್ಧಾರದಿಂದ ಸಂವಿಧಾನದ 14 ಹಾಗೂ 21ನೇ ವಿಧಿ ಉಲ್ಲಂಘನೆಯಾಗುತ್ತದೆ ಎಂದು ವಾದ ಮಂಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಜೈ ಶ್ರೀರಾಮ್’ ಮೊದಲಾದ ಧಾರ್ಮಿಕ ಘೋಷಣೆಗಳನ್ನು ಕೂಗಿದವರ ಮೇಲೆ ಎಫ್‌ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡ ಸೂತ್ರದ ಗೊಂಬೆ: ಸಿದ್ದಿಕಿ

‘ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಸೂತ್ರದ ಬೊಂಬೆಯ ರೀತಿ ವರ್ತಿಸುತ್ತಿದ್ದು ಟಿಎಂಸಿ ಹಾಗೂ ಬಿಜೆಪಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಚುನಾವಣೆ ಬಳಿಕ ಯಾರು ಅಧಿಕಾರಕ್ಕೆ ಬರುವರೋ ಅವರ ಸಂಗಡ ಹೋಗಲಿದ್ದಾರೆ’ ಎಂದು ಇಂಡಿಯನ್ ಸೆಕ್ಯುಲರ್ ಫ್ರಂಟ್ ಮುಖಂಡ ಅಬ್ಬಾಸ್ ಸಿದ್ದಿಕಿ ಸೋಮವಾರ ಹೇಳಿದ್ದಾರೆ.

ಬಂಗಾಳದ ಪ್ರತಿಪಕ್ಷ ಮೈತ್ರಿಕೂಟವು ಸೀಟು ಹಂಚಿಕೆ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬರಬೇಕು ಎಂದು ಅವರು ಹೇಳಿದರು. ‘ನಿನ್ನೆ (ಭಾನುವಾರ) ನಾನು ಹೇಳಿದ ಮಾತುಗಳಿಂದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಅಧಿರ್ ಚೌಧರಿ ಅವರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕಾಂಗ್ರೆಸ್ ಸ್ಪಷ್ಟ ನಿಲುವು ತಳೆಯಬೇಕು. ಮೈತ್ರಿ ಬಯಸುತ್ತಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇರಬೇಕು. ಕೊನೆಯ ಕ್ಷಣದವರೆಗೂ ಕಾಯಲು ನಮಗಾಗದು’ ಎಂದರು.

ಸಿದ್ದಿಕಿ ಅವರ ಆರೋಪಗಳನ್ನು ಹಿರಿಯ ಕಾಂಗ್ರೆಸ್ ಮುಖಂಡ ಪ್ರದೀಪ್ ಭಟ್ಟಾಚಾರ್ಯ ಅಲ್ಲಗಳೆದರು. ‘ಇತರೆ ಪಕ್ಷಗಳ ಜೊತೆ ಸಂಪರ್ಕದಲ್ಲಿರುವ ವ್ಯಕ್ತಿಯ ಹೆಸರನ್ನು ಸಿದ್ದಿಕಿ ಏಕೆ ಹೇಳುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT