ಭಾನುವಾರ, ಅಕ್ಟೋಬರ್ 25, 2020
28 °C

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಈಗ ಬಿಜೆಪಿ ಮಿತ್ರಪಕ್ಷಗಳ ಏಕೈಕ ಪ್ರತಿನಿಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ವರಿಷ್ಠ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಾ ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಂತ್ರಿ ಮಂಡಲದಲ್ಲಿ ಬಿಜೆಪಿ ಮಿತ್ರ ಪಕ್ಷದ ಪ್ರತಿನಿಧಿಯಾಗಿ ಉಳಿದಿರುವುದು ಈಗ ಕೇವಲ ಒಬ್ಬರಷ್ಟೇ.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಆರ್‌ಪಿಐ) ರಾಮದಾಸ್ ಅಟವಾಲೆ ಎನ್‌ಡಿಎ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಬಿಜೆಪಿ ಮಿತ್ರ ಪಕ್ಷದ ಏಕೈಕ ಪ್ರತಿನಿಧಿಯಾಗಿ ಉಳಿದುಕೊಂಡಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾಗಿರುವ ಅಟವಾಲೆ ಅವರನ್ನು ಹೊರತುಪಡಿಸಿ ಬಿಜೆಪಿ ಮಿತ್ರ ಪಕ್ಷಗಳ ಯಾವೊಬ್ಬ ಪ್ರತಿನಿಧಿಯೂ ಮಂತ್ರಿಮಂಡಲದಲ್ಲಿಲ್ಲ.

2019ರ ಲೋಕಸಭಾ ಚುನಾವಣೆಯ ನಂತರ ರಚನೆಯಾದ ಮೋದಿ ಸರ್ಕಾರ 2.0ನಲ್ಲಿ ಶಿವಸೇನೆಯ ಅರವಿಂದ ಸಾವಂತ್, ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್‌ ಕೌರ್ ಬಾದಲ್, ಎಲ್‌ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಪ್ರತಿನಿಧಿಗಳಾಗಿದ್ದರು.

ಶಿವಸೇನೆ 2019ರ ಕೊನೆಯಲ್ಲಿ ಎನ್‌ಡಿಎಯನ್ನು ತೊರೆದರೆ, ಅಖಾಲಿದಳ ಇತ್ತೀಚೆಗೆ ಕೃಷಿ ಮಸೂದೆಗಳ ಮೇಲಿನ ಭಿನ್ನಮತದ ಹಿನ್ನೆಲೆಯಲ್ಲಿ ಮೈತ್ರಿ ಮುರಿಯಿತು. ಮತ್ತೊಂದು ಪ್ರಮುಖ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಸರ್ಕಾರದಲ್ಲಿ ಪಾಲ್ಗೊಳ್ಳದೆ ದೂರವೇ ಉಳಿದಿದೆ.

ಪ್ರಧಾನಿ ಮೋದಿಯವರಲ್ಲದೆ, 24 ಕ್ಯಾಬಿನೆಟ್ ಸಚಿವರು, ಒಂಬತ್ತು ರಾಜ್ಯ ಸಚಿವರು (ಸ್ವತಂತ್ರ ಖಾತೆ) ಮತ್ತು 24 ರಾಜ್ಯ ಸಚಿವರು ಸೇರಿ ಒಟ್ಟು 57 ಮಂತ್ರಿಗಳು 2019ರ ಮೇ 30 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

ಸಾವಂತ್‌, ಹರ್‌ಸಿಮ್ರತ್‌ ಕೌರ್‌ ರಾಜೀನಾಮೆ ಮತ್ತು ಪಾಸ್ವಾನ್ ಸಾವಿನ ನಂತರ ಕ್ಯಾಬಿನೆಟ್‌ನಲ್ಲಿ ಈಗ 21 ಮಂತ್ರಿಗಳಿದ್ದಾರೆ. ‌ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಾವಿನೊಂದಿಗೆ, ರಾಜ್ಯ ಸಚಿವರ ಸಂಖ್ಯೆಯೂ 23 ಕ್ಕೆ ಇಳಿದಿದೆ.

ನಿಯಮಗಳ ಪ್ರಕಾರ, ಲೋಕಸಭೆಯಲ್ಲಿನ ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಪ್ರಧಾನಿ ಸೇರಿದಂತೆ ಒಟ್ಟು ಕೇಂದ್ರ ಸಚಿವರ ಸಂಖ್ಯೆ ಶೇಕಡಾ 15 ಮೀರಬಾರದು. 543 ಸದಸ್ಯರ ಲೋಕಸಭೆಯಲ್ಲಿ 80 ಮಂತ್ರಿಗಳನ್ನು ಹೊಂದಲು ಪ್ರಧಾನಿಗೆ ಅವಕಾಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು