ಶನಿವಾರ, ಜನವರಿ 16, 2021
19 °C

ಮುಂಬೈ ದಾಳಿ ಮಾದರಿಯ ಮತ್ತೊಂದು ದಾಳಿ ಅಸಾಧ್ಯ: ರಾಜನಾಥ್‌ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ಕೆಲ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯು ಸದೃಢವಾಗಿದ್ದು, 2008ರ ನವೆಂಬರ್‌ 26ರಂದು ಮುಂಬೈನಲ್ಲಿ ಉಗ್ರರು ನಡೆಸಿದ ದಾಳಿಯ ಮಾದರಿಯ ಮತ್ತೊಂದು ದಾಳಿ ಭಾರತದಲ್ಲಿ ಅಸಾಧ್ಯ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಹೇಳಿದರು. 

ಹಿಂದೂಸ್ತಾನ್‌ ಟೈಮ್ಸ್‌ನ ಲೀಡರ್‌ಶಿಪ್‌ ಶೃಂಗಸಭೆಯಲ್ಲಿ ಮಾತನಾಡಿದ ಸಿಂಗ್‌, ‘ಭಾರತ–ಚೀನಾ ಗಡಿಯಲ್ಲಿರುವ ವಾಸ್ತವ ನಿಯಂತ್ರಣ ರೇಖೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರೆ ತಕ್ಕ ಕ್ರಮ ಕೈಗೊಳ್ಳಲು ಭಾರತೀಯ ಸೇನೆಗಳಿಗೆ ಅವಕಾಶ ನೀಡಲಾಗಿದ್ದು, ಭಾರತದ ಗೌರವಕ್ಕೆ ಧಕ್ಕೆ ಬರಲು ಸರ್ಕಾರ ಬಿಡುವುದಿಲ್ಲ’ ಎಂದು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ಭಾರತದ ಗೌರವ, ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಬಗ್ಗೆ ಯಾವುದೇ ರಾಜಿ ಇಲ್ಲ. ಕಳೆದ ಕೆಲ ವರ್ಷಗಳಲ್ಲಿ ಭಾರತವು ತನ್ನ ಭದ್ರತಾ ವ್ಯವಸ್ಥೆಯನ್ನು ಸದೃಢಗೊಳಿಸಿದ್ದು, ಭಯೋತ್ಪಾದಕರಿಗೆ ಭಾರತವು ಬಹಳ ಸುಲಭವಾದ ಗುರಿಯಾಗಿಲ್ಲ. ಆಂತರಿಕ ಭದ್ರತೆಯೂ ಸದೃಢವಾಗಿದ್ದು, ಭಾರತದ ನೆಲದಲ್ಲಿ ಮತ್ತೊಂದು 26/11 ಮಾದರಿಯ ದಾಳಿ ಅಸಾಧ್ಯ’ ಎಂದರು.

ಇದೇ ವೇಳೆ ಪಾಕಿಸ್ತಾನವನ್ನು ‘ಭಯೋತ್ಪಾದಕರ ನರ್ಸರಿ’ ಎಂದೂ ಟೀಕಿಸಿದ ರಾಜನಾಥ್‌ ಸಿಂಗ್‌, ಇತ್ತೀಚೆಗೆ ಪಾಕಿಸ್ತಾನ ಮೂಲದ ಉಗ್ರರನ್ನು ನಗ್ರೋಟಾದಲ್ಲಿ ಹೊಡೆದುರುಳಿಸಿರುವುದನ್ನೂ ಉಲ್ಲೇಖಿಸಿದರು. ‘ಉರಿ ಹಾಗು ಪುಲ್ವಾಮಾ ದಾಳಿಯ ಬಳಿಕ ಭಾರತವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಭಯೋತ್ಪಾದನೆಯನ್ನು ಬೆಂಬಲಿಸುವವರ ವಿರುದ್ಧವೂ ನಾವು ಕಠಿಣ ಕ್ರಮ ಕೈಗೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು