ಗುರುವಾರ , ಫೆಬ್ರವರಿ 25, 2021
28 °C

ಆಳ–ಅಗಲ | ಉಕ್ಕಿನ ಹಕ್ಕಿಗಳ ಕಲರವ ಏರೊ ಇಂಡಿಯಾ 2021

ಜಯಸಿಂಹ ಆರ್./ಅಮೃತಕಿರಣ್ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಏರೊ ಇಂಡಿಯಾ ಪ್ರದರ್ಶನದ 13ನೇ ಆವೃತ್ತಿ ಇದೇ ಫೆಬ್ರುವರಿ 3ರಿಂದ 5ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಈ ಪ್ರದರ್ಶನವು ಮೊದಲ ಬಾರಿ ನಡೆದದ್ದು 1996ರಲ್ಲಿ. ಅಂದಿನಿಂದ ಈವರೆಗೆ ಈ ಪ್ರದರ್ಶನ ಬೆಂಗಳೂರಿನಲ್ಲಿಯೇ ನಡೆಯುತ್ತಿದೆ. ಕೋವಿಡ್‌ ಲಾಕ್‌ಡೌನ್‌ನ ನಂತರ ಜಗತ್ತಿನಲ್ಲಿ ನಡೆಯುತ್ತಿರುವ ಮೊದಲ ಜಾಗತಿಕ ಪ್ರದರ್ಶನವಿದು. ಬೆಂಗಳೂರು, ಭಾರತದ ವಿಮಾನ ತಂತ್ರಜ್ಞಾನದ ಕೇಂದ್ರವಾಗಿದೆ. ಈ ಕಾರಣದಿಂದಲೇ ದೇಶದ ಮೊದಲ ಏರೊ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನಲ್ಲೇ ಆಯೋಜಿಸಲಾಗಿತ್ತು. ಬ್ರ್ಯಾಂಡ್ ಬೆಂಗಳೂರು ಹೆಸರನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸುವಲ್ಲಿ ಏರೊ ಇಂಡಿಯಾ ಪ್ರದರ್ಶನದ ಕೊಡುಗೆಯೂ ಇದೆ.

ಕೋವಿಡ್‌ ನಡುವೆ ನಡೆಯುತ್ತಿರುವ 13ನೇ ಆವೃತ್ತಿಯ ಪ್ರದರ್ಶನದಲ್ಲಿ ಸಾಕಷ್ಟು ಬದಲಾವಣೆಗಳು ಇವೆ. ಭಾರತದ ಮತ್ತು ವಿದೇಶಿ ಕಂಪನಿಗಳು ಈ ಪ್ರದರ್ಶನದಲ್ಲಿ ಮಳಿಗೆ ತೆರೆದು, ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಜತೆಗೆ ಹಲವು ಕಂಪನಿಗಳು ವರ್ಚುವಲ್ ಸ್ವರೂಪದಲ್ಲಿ ಮಾತ್ರ ಭಾಗಿಯಾಗಲಿವೆ. ಇದು ಹೈಬ್ರಿಡ್ ಪ್ರದರ್ಶನ. ಕರ್ನಾಟಕ ಸರ್ಕಾರದ ಮನವಿಯ ಮೇರೆಗೆ ಹೈಬ್ರಿಡ್ ಸ್ವರೂಪದಲ್ಲಿ ಈ ಪ್ರದರ್ಶನವನ್ನು ಈ ಬಾರಿ ಆಯೋಜಿಸಲಾಗುತ್ತಿದೆ.

ಫ್ರಾನ್ಸ್‌, ಅಮೆರಿಕ ಉತ್ಸುಕತೆ

ಈ ಬಾರಿ ಪ್ರದರ್ಶನದಲ್ಲಿ ಭಾಗಿಯಾಗುತ್ತಿರುವ ವಿದೇಶಿ ಕಂಪನಿಗಳಲ್ಲಿ ಫ್ರಾನ್ಸ್‌ನ ಕಂಪನಿಗಳದ್ದೇ ಸಿಂಹಪಾಲು. 77 ವಿದೇಶಿ ಕಂಪನಿಗಳಲ್ಲಿ 25 ಕಂಪನಿಗಳು ಫ್ರಾನ್ಸ್‌ನದ್ದಾಗಿವೆ. ಭಾರತಕ್ಕೆ ಅತ್ಯಾಧುನಿಕ ರಫೇಲ್‌ ಯುದ್ಧವಿಮಾನಗಳನ್ನು ಮಾರಾಟ ಮಾಡಿರುವ ಡಾಸೊ ಏವಿಯೇಷನ್ ಸಹ ಈ ಪ್ರದರ್ಶನದಲ್ಲಿ ಭಾಗಿಯಾಗುತ್ತಿದೆ. ಫ್ರಾನ್ಸ್‌ನ ಇತರ ಹೆಲಿಕಾಪ್ಟರ್‌, ಶಸ್ತ್ರಾಸ್ತ್ರ, ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಗಳು ಈ ಪ್ರದರ್ಶಕ್ಕೆ ಭಾಗಿಯಾಗುತ್ತಿವೆ.

ಅಮೆರಿಕದ 22 ಕಂಪನಿಗಳು ಈ ಪ್ರದರ್ಶನದಲ್ಲಿ ಭಾಗಿಯಾಗುತ್ತಿವೆ. ಯುದ್ಧವಿಮಾನ ತಯಾರಿಕಾ ಕಂಪನಿ, ಕದನ ಹೆಲಿಕಾಪ್ಟರ್ ತಯಾರಿಕಾ ಕಂಪನಿ, ಸೇನಾ ಡ್ರೋನ್ ತಯಾರಿಕಾ ಕಂಪನಿಗಳು, ಏರ್‌ ಟು ಏರ್ ಕ್ಷಿಪಣಿ ತಯಾರಿಕಾ ಕಂಪನಿಗಳು, ಏವಿಯಾನಿಕ್ಸ್ ಅಭಿವೃದ್ಧಿ ಸಂಸ್ಥೆಗಳು, ಕ್ಷಿಪಣಿ ನಿರೋಧಕ ವ್ಯವಸ್ಥೆ ತಯಾರಿಕಾ ಕಂಪನಿಗಳು ಇದರಲ್ಲಿ ಸೇರಿವೆ.

ಫ್ರಾನ್ಸ್ ಮತ್ತು ಅಮೆರಿಕವನ್ನು ಬಿಟ್ಟರೆ, ಇಸ್ರೇಲ್‌ ಮತ್ತು ಬ್ರಿಟನ್‌ನ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಭಾಗಿಯಾಗುತ್ತಿವೆ. ಉಳಿದಂತೆ ಬೇರೆ ದೇಶಗಳ ಒಂದೆರಡು ಕಂಪನಿಗಳಷ್ಟೇ ಬರುತ್ತಿವೆ.

ಹೊರಗುಳಿದ ಚೀನಾ: ಈವರೆಗೆ ಎರಡು ಬಾರಿ ಏರೊ ಇಂಡಿಯಾ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಚೀನಾ, ಈ ಬಾರಿ ಪ್ರದರ್ಶನದಿಂದ ದೂರ ಉಳಿದಿದೆ. ಏರೊ ಇಂಡಿಯಾ 2021 ಪ್ರದರ್ಶನದಲ್ಲಿ ಚೀನಾದ ಯಾವ ಕಂಪನಿಯೂ ಒಂದೂ ಮಳಿಗೆಯನ್ನು ಕಾಯ್ದಿರಿಸಿಲ್ಲ. ಪೂರ್ವ ಲಡಾಖ್‌ನ ಗಡಿಯಲ್ಲಿ ಭಾರತ-ಚೀನಾ ನಡುವಣ ಗಡಿ ಸಂಘರ್ಷವೇ ಚೀನಾ ಈ ಪ್ರದರ್ಶನದಿಂದ ದೂರ ಉಳಿಯಲು ಕಾರಣ ಎನ್ನಲಾಗಿದೆ.

ಭಾರತಕ್ಕೆ ಉತ್ತೇಜನ

ಏರೊ ಇಂಡಿಯಾ 2021 ಪ್ರದರ್ಶನವು ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಅಭಿಯಾನದ ಪ್ರತೀಕವಾಗಿರಲಿದೆ ಎಂದು ಸರ್ಕಾರವು ಹೇಳಿದೆ. ಈ ಪ್ರದರ್ಶನದಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ 463 ಕಂಪನಿಗಳು ಭಾಗಿಯಾಗುತ್ತಿವೆ.

ವಿಮಾನ-ಹೆಲಿಕಾಪ್ಟರ್ ತಯಾರಿಕೆ ಸಾಮರ್ಥ್ಯದ ಹಿಂದೂಸ್ತಾನ್‌ ಏರೊನಾಟಿಕ್ಸ್ ಲಿಮಿಟೆಡ್, ಕ್ಷಿಪಣಿ ತಯಾರಿಕೆ, ಡ್ರೋನ್ ತಯಾರಿಕೆ, ಏವಿಯಾನಿಕ್ಸ್ ಅಭಿವೃದ್ಧಿ ಕಂಪನಿಗಳು, ಯುದ್ಧೋಪಕರಣ ತಯಾರಿಕೆ, ಶಸ್ತ್ರಾಸ್ತ್ರ ತಯಾರಿಕೆ, ವಿಮಾನಗಳ ಬಿಡಿಭಾಗಗಳ ತಯಾರಿಕೆ, ರಕ್ಷಣಾ ವ್ಯವಸ್ಥೆ ಅಭಿವೃದ್ಧಿ ಕಂಪನಿಗಳು ಈ ಪ್ರದರ್ಶನದಲ್ಲಿ ಇರಲಿವೆ.

ಭಾರತೀಯ ವಾಯುಪಡೆಯು ಈ ಕಂಪನಿಗಳ ಉತ್ಪನ್ನಗಳನ್ನು ಪರೀಕ್ಷಿಸಲು ಮತ್ತು ಆ ಉತ್ಪನ್ನಗಳನ್ನು ಖರೀದಿಸಲು ಮಾತುಕತೆ ನಡೆಸಲು ಈ ಪ್ರದರ್ಶನವು  ವೇದಿಕೆಯಾಗಲಿದೆ. ವಾಯುಪಡೆಗೆ ಅಗತ್ಯವಿರುವ ಸಲಕರಣೆಗಳ ಖರೀದಿಯಲ್ಲಿ ಸ್ವಾವಲಂಬನೆ ಸಾಧಿಸಲು ಇದರಿಂದ ನೆರವಾಗಲಿದೆ.

ವಿದೇಶಿ ಕಂಪನಿಗಳು ಮತ್ತು ವಿದೇಶಿ ರಾಜತಾಂತ್ರಿಕರು, ರಕ್ಷಣಾ ತಂತ್ರಜ್ಞರೂ ಈ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಇದರಿಂದ ಭಾರತದ ರಕ್ಷಣಾ ವಲಯದ ಕಂಪನಿಗಳು ವಿದೇಶಿ ಮಾರುಕಟ್ಟೆ ಪ್ರವೇಶಿಸಲು ಈ ಪ್ರದರ್ಶನವು ಉತ್ತಮ ಅವಕಾಶವನ್ನು ಒದಗಿಸಿಕೊಡಲಿದೆ.


Caption

ಏರ್‌ ಶೋ: ಕೋವಿಡ್ ಮಾರ್ಗಸೂಚಿ

ಕೋವಿಡ್ ಭೀತಿಯ ನಡುವೆಯೇ ಈ ಬಾರಿಯ ಬೆಂಗಳೂರು ಏರ್‌ ಶೋಗೆ ಕ್ಷಣಗಣನೆ ಶುರುವಾಗಿದೆ. ಪ್ರದರ್ಶನಕ್ಕೆ ಭೇಟಿ ನೀಡುವವರಿಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ರಕ್ಷಣಾ ಸಚಿವಾಲಯವು ಬಿಡುಗಡೆ ಮಾಡಿದೆ. ಕರ್ನಾಟಕ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳ ಪ್ರಕಾರ, ಪ್ರದರ್ಶನದಲ್ಲಿ ಭಾಗಿಯಾಗುವ ಸಲುವಾಗಿ ವಿದೇಶದಿಂದ ಬರುವ ಪ್ರತಿನಿಧಿಗಳಿಗೂ ಸೋಂಕು ಪರೀಕ್ಷೆ ಮತ್ತು ಕ್ವಾರಂಟೈನ್ ನಿಯಮಗಳು ಅನ್ವಯ.

*ಮಾಸ್ಕ್ ಇಲ್ಲದಿದ್ದರೆ ಪ್ರವೇಶ ನಿಷಿದ್ಧ

*ಶೌಚಾಲಯ, ವಾಷ್‌ಬೇಸಿನ್‌ಗಳಲ್ಲಿ ಸೆನ್ಸರ್ ಬಳಕೆ

*ಕರಪತ್ರ ಮತ್ತು ಪುಸ್ತಕಗಳಿಗೆ ಡಿಜಿಟಲ್ ಸ್ವರೂಪ

*ನೋಂದಣಿ ಮತ್ತು ಬೂತ್‌ಗಳಲ್ಲಿ ಸಂಪರ್ಕರಹಿತ ಸೇವೆ ಲಭ್ಯವಿರಲಿದೆ. ಡೆಸ್ಕ್‌ಗಳಲ್ಲಿ ಪಾರದರ್ಶಕ ಶೀಟ್ ಅಳವಡಿಕೆ

*ಕಾಲಿನಿಂದ ತಳ್ಳಬಹುದಾದ ಬಾಗಿಲು ಅಳವಡಿಕೆ

*ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿ ಹೊಂದಿರುವವರಿಗೆ ತಪಾಸಣೆಯಿಂದ ವಿನಾಯಿತಿ

*72 ಗಂಟೆಗಳ ಮೊದಲು ನಡೆಸಿದ ಕೋವಿಡ್ ಪರೀಕ್ಷಾ ವರದಿ ಹೊಂದಿರಬೇಕು

*ಯುವಿ ಸ್ಯಾನಿಟೈಜಿಂಗ್‌ ಜೊತೆ ಚೀಲಗಳ (ಬ್ಯಾಗೇಜ್) ಸ್ಕ್ಯಾನಿಂಗ್

*ಒಂದು ಬೇನಲ್ಲಿ ಸಾವಿರ ಜನರಿಗೆ ಮಾತ್ರ ಅವಕಾಶ

*ಸರತಿ ಸಾಲಿನಲ್ಲಿ ನಿಂತಿರುವ ವ್ಯಕ್ತಿಗಳ ನಡುವೆ 3.25 ಚದರ ಮೀಟರ್‌ ಅಂತರ ಕಾಯ್ದುಕೊಳ್ಳಬೇಕು; ಎರಡು ಗುಂಟೆ ಜಾಗದಲ್ಲಿ 15 ಜನರು ಮಾತ್ರ ಇರಲು ಅವಕಾಶ

*ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಜನರ ದೈಹಿಕ ಅಂತರ ಪರಿಶೀಲನೆ

*ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಪ್ರತ್ಯೇಕ ಕೋಣೆಗಳಿಗೆ ಕಳುಹಿಸಲಾಗುವುದು. ಇಲ್ಲಿ ಹಾಸಿಗೆ, ಮೆಡಿಕಲ್ ಸಿಬ್ಬಂದಿ, ಸ್ಯಾನಿಟೈಸರ್, ಡಿಜಿಟಲ್ ಥರ್ಮಾಮೀಟರ್, ಪಿಪಿಇ ಸೂಟ್, ಕೈಗವಸು, ಫೇಸ್ ಶೀಲ್ಡ್, ಎನ್-95 ಮಾಸ್ಕ್ ಇತ್ಯಾದಿ ಸವಲತ್ತು ಇರಲಿವೆ

*ಕೋವಿಡ್ ಕಾರಣ, ಯಾವುದೇ ಸ್ಥಳದಲ್ಲಿ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶ. ಪಾಸ್ ಅವಧಿ ಮುಗಿದವರು ಸ್ಥಳದಲ್ಲಿ ಇರುವಂತಿಲ್ಲ

300 ಕಾರು ಭಸ್ಮ ಆಗಿದ್ದವು

ಬೆಂಗಳೂರಿನಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಏರ್ ಶೋ ವೇಳೆ ಅಗ್ನಿ ಅವಘಡ ಉಂಟಾಗಿತ್ತು. ವಾರಾಂತ್ಯವಾದ ಕಾರಣ ಹೆಚ್ಚಿನ ಜನರು ವೈಮಾನಿಕ ಪ್ರದರ್ಶನ ನೋಡಲು ಕಾರುಗಳಲ್ಲಿ ಯಲಹಂಕ ವಾಯುನೆಲೆಗೆ ಬಂದಿದ್ದರು. ವಾಹನಗಳನ್ನು ಪಾರ್ಕ್ ಮಾಡಲಾಗಿದ್ದ ನಿಲುಗಡೆ ತಾಣದಲ್ಲಿ ಸುಮಾರು 300 ಕಾರುಗಳು ಹೊತ್ತಿ ಉರಿದಿದ್ದವು. ಒಂದು ಕಾರಿಗೆ ಹತ್ತಿಕೊಂಡ ಬೆಂಕಿ, ಪಕ್ಕದ ಕಾರುಗಳಿಗೂ, ಅದು ಪಕ್ಕದ ಸಾಲಿಗೂ ವ್ಯಾಪಿಸಿ, ಇಡೀ ಪಾರ್ಕಿಂಗ್ ಪ್ರದೇಶವು ಅಗ್ನಿಯ ಕೆನ್ನಾಲಿಗೆಯನ್ನು ನೆನಪಿಸುವಂತಿತ್ತು.

ವಾಯುನೆಲೆ ಸುತ್ತ ದಟ್ಟ ಹೊಗೆ ಎದ್ದಿದ್ದರಿಂದ, ಯಾವುದೋ ವಿಮಾನ ಪತನ ಆಗಿರಬಹುದೆಂದು ಜನ ಆರಂಭದಲ್ಲಿ ಗಾಬರಿಗೊಂಡಿದ್ದರು. ಕೆಲಕಾಲ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಏರ್ ಶೋ ಶುರುವಾಗುವ ಮುನ್ನಾದಿನ ಸೂರ್ಯಕಿರಣ ವಿಮಾನ ದುರಂತಕ್ಕೀಡಾಗಿ ಪೈಲಟ್ ನಿಧನರಾಗಿದ್ದರು. ಹೀಗಾಗಿ, ಸಹಜವಾಗಿಯೇ ಜನ ಆತಂಕಕ್ಕೆ ಒಳಗಾಗಿದ್ದರು.

ವರದಿ: ವಾಹನ ನಿಲುಗಡೆ ತಾಣದಲ್ಲಿ ಬಿಸಿಯಾಗಿದ್ದ ಕಾರುಗಳ ಎಂಜಿನ್ ಮತ್ತು ಸೈಲೆನ್ಸರ್‌ಗಳು ಒಣಗಿದ್ದ ಹುಲ್ಲುಗಳಿಗೆ ತಾಗಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಹೈಕೋರ್ಟ್‌ಗೆ ಪೊಲೀಸರು ಮಾಹಿತಿ ನೀಡಿದ್ದರು. ಇದೊಂದು ಆಕಸ್ಮಿಕ ಘಟನೆ ಎಂದು ತಿಳಿಸಿದ್ದರು. ಘಟನೆಯಲ್ಲಿ 277 ಕಾರುಗಳು ಪೂರ್ಣ ಪ್ರಮಾಣದಲ್ಲಿ ಭಸ್ಮವಾಗಿದ್ದಾರೆ, 44 ಕಾರುಗಳು ಭಾಗಶಃ ಸುಟ್ಟುಹೊಗಿದ್ದವು.

ನಿರ್ದೇಶನ: 2021ರ ಏರ್ ಶೋ ಸಂದರ್ಭದಲ್ಲಿ ಅವಘಡಗಳನ್ನು ತಪ್ಪಿಸುವುದಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಮೂಲಕ ಪ್ರಮಾಣಪತ್ರ ಸಲ್ಲಿಸಬೇಕು ಎಂದು ರಕ್ಷಣಾ ಸಚಿವಾಲಯಕ್ಕೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಬಾರಿ ಸುರಕ್ಷತೆಗೆ ಸಂಬಂಧಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ವಿಶೇಷ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳಾಂತರ ಗುಮ್ಮ

ಪ್ರತಿ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‌ ಶೋ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಆಗಲಿದೆ ಎಂಬ ಬಗ್ಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಚರ್ಚೆಯಾಗುತ್ತಿದೆ. ಕೊನೆಗೆ ಈ ಬಾರಿ ಬೆಂಗಳೂರಲ್ಲೇ ನಡೆಯಲಿದೆ ಎಂಬ ಸಮಜಾಯಿಷಿ ಸಿಗುತ್ತದೆ.

ಈ ಬಾರಿಯ ಏರ್ ಶೋ ಪೂರ್ವಸಿದ್ಧತೆ ಪರಿಶೀಲನೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂದಿನ ದಿನಗಳಲ್ಲೂ ಬೆಂಗಳೂರಿನಲ್ಲೇ ವೈಮಾನಿಕ ಪ್ರದರ್ಶನ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಏರ್ ಶೋ ನಡೆಸಲು ಬೆಂಗಳೂರು ಅತ್ಯಂತ ಸೂಕ್ತವಾದ ಸ್ಥಳ’ ಎಂದಿರುವ ಅವರು, ಬೇರೆ ನಗರಕ್ಕೆ ಸ್ಥಳಾಂತರ ಮಾಡುವ ವರದಿಗಳನ್ನು ಅಲ್ಲಗಳೆದರು. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಬಹುತೇಕ ಸಂಸ್ಥೆಗಳು ಹಾಗೂ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಗೊಂಡಿರುವ ಕಾರಣ, ನಗರ ಇದಕ್ಕೆ ಸೂಕ್ತ ಎಂದು ಅವರು ಹೇಳಿದ್ದಾರೆ.

2017ರಲ್ಲಿ ಹಾಗೂ 2018ರಲ್ಲೂ ಈ ವಿಚಾರ ಚರ್ಚೆಯಲ್ಲಿತ್ತು. ಸ್ಥಳಾಂತರಕ್ಕೆ ರಾಜ್ಯದ ರಾಜಕೀಯ ನಾಯಕರು ಪಕ್ಷಭೇದ ಮರೆತು ವಿರೋಧ ವ್ಯಕ್ತಪಡಿಸಿದ್ದರು. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿರುವ ಕಾರಣ, ಏರ್‌ ಶೋ ಸ್ಥಳಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಅಂದಿನ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದರು.

ಆಧಾರ: ಏರೊ ಇಂಡಿಯಾ 2021 ಜಾಲತಾಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು