ಸೋಮವಾರ, ಜುಲೈ 26, 2021
26 °C

‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌‌ರನ್ನು ಕೊಂಡಾಡಿದ ತಂದೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಆತ ಅತ್ಯಂತ ಭಾವನಾತ್ಮಕ ವ್ಯಕ್ತಿತ್ವದವನು’ ಎಂದು ಮೊಹಮ್ಮದ್ ಅಖ್ತರ್ ಸಿದ್ದಿಕಿ ಅವರು ತಮ್ಮ ಪುತ್ರ, ಫೋಟೊ ಜರ್ನಲಿಸ್ಟ್ ಡ್ಯಾನಿಷ್‌ ಸಿದ್ದಿಕಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಂತೆ ಹೆಮ್ಮೆಯ ಭಾವದಿಂದ ಕೂಡಿದ ಗದ್ಗದಿತ ಧ್ವನಿ ಹೊರಡಿತು.

ಅಫ್ಘಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಛಾಯಾಗ್ರಾಹಕ ಡ್ಯಾನಿಷ್‌ ಸಿದ್ದಿಕಿ ಹತರಾದ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ ‘ಟೋಲೊ ನ್ಯೂಸ್’ ವರದಿ ಮಾಡಿತ್ತು.

ಇದನ್ನೂ ಓದಿ: ಫೋಟೊ ಜರ್ನಲಿಸ್ಟ್‌ ಡ್ಯಾನಿಷ್‌ ಸಿದ್ಧಿಕಿ ಸಾವಿಗೆ ಅಮೆರಿಕ ಸಂತಾಪ

ಕಳೆದ ಕೆಲವು ದಿನಗಳಿಂದ ಕಂದಹಾರ್‌ನಲ್ಲಿ, ವಿಶೇಷವಾಗಿ ಸ್ಪಿನ್ ಬೋಲ್ಡಾಕ್‌ನಲ್ಲಿ ಅಫ್ಗನ್‌ ಪಡೆಗಳು ಮತ್ತು ತಾಲಿಬಾನಿ ಪಡೆಗಳ ನಡುವೆ ತೀವ್ರ ಘರ್ಷಣೆ ನಡೆಯುತ್ತಿದೆ. ಭಾರತೀಯ ಪತ್ರಕರ್ತ ಸಿದ್ದಿಕಿ ಕಂದಹಾರ್‌ನ ಸಂಘರ್ಷಮಯ ಪರಿಸ್ಥಿತಿಯ ವರದಿ ಮಾಡಲು ತೆರಳಿದ್ದರು.

‘ಆತ ಬಹಳ ಸಮಾಧಾನದ, ಶಾಂತ ಸ್ವಭಾವದವನು. ಪ್ರೀತಿ ಪಾತ್ರ. ಅವನು ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದ. ತುಂಬಾ ಭಾವನಾತ್ಮಕ ವ್ಯಕ್ತಿ’ ಎಂದುಡ್ಯಾನಿಷ್‌ ತಂದೆ ಅಖ್ತರ್‌ ಸಿದ್ದಿಕಿ ಅವರು ಹೇಳಿದರು.

ಫೋಟೊ ಜರ್ನಲಿಸಂನ ಅಪಾಯಕಾರಿ ಸನ್ನಿವೇಶಗಳ ಕುರಿತು ಮಾತನಾಡಿದ ಡ್ಯಾನಿಷ್‌ ತಂದೆ, ‘ನಮ್ಮ ಕುಟುಂಬವು ಆತನ ವೃತ್ತಿ ಬದುಕಿನೊಂದಿಗೆ ಹೊಂದಿಕೊಂಡುಬಿಟ್ಟಿತ್ತು,‘ ಎಂದು ಹೇಳಿದರು.

‘ಇಂಥ ಕೆಲಸದ ಅಗತ್ಯವಾದರೂ ನಮಗೆ ಏನಿದೆ ಎಂದು ನಾವು ಅವನನ್ನು ಆರಂಭದಲ್ಲಿ ಕೇಳುತ್ತಿದ್ದೆವು. ಆದರೆ, ನಾವು ಅವನ ವೃತ್ತಿಗೆ ಒಗ್ಗಿಕೊಂಡಿದ್ದೆವು. ನನಗೆ ಭದ್ರತೆ ಇದೆ ಎಂದು ಆತ ನಮಗೆ ಹೇಳುತ್ತಿದ್ದ. ಸಂಪೂರ್ಣ ರಕ್ಷಣೆಯೊಂದಿಗೆ ಓಡಾಡುತ್ತೇನೆ ಎನ್ನುತ್ತಿದ್ದ. ಮುನ್ನೆಚ್ಚರಿಕೆ ವಹಿಸುವಂತೆ ಆತನಿಗೆ ನಾವು ಹೇಳುತ್ತಿದ್ದೆವು,’ ಎಂದು ಅವರು ಪಿಟಿಐಗೆ ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ, ಡ್ಯಾನಿಷ್‌ ಸಿದ್ದಿಕಿ ಕೋವಿಡ್‌ ಪರಿಸ್ಥಿತಿಯನ್ನು ಜನರಿಗೆ ಸಮರ್ಥವಾಗಿ ಕಟ್ಟಿಕೊಟ್ಟಿದ್ದರು.

‘ಸಿದ್ದಿಕಿ ಎಂದರೆ, ಅದ್ಭುತ ಮತ್ತು ಚೈತನ್ಯಶೀಲ ವ್ಯಕ್ತಿತ್ವ. ಆತ ತನ್ನ ಕೆಲಸದ ಬಗ್ಗೆ ಬದ್ಧತೆ ಹೊಂದಿದ್ದ. ಸವಾಲುಗಳನ್ನು ಎದುರಿಸುವ ಉತ್ಸಾಹ ಹೊಂದಿದ್ದ. ಕೋವಿಡ್‌ ಸಾಂಕ್ರಾಮಿಕ, ದೆಹಲಿ ಗಲಭೆಯ ಸಂದರ್ಭದಲ್ಲಿ ಆತ ಸವಾಲುಗಳ ನಡುವೆಯೂ ಸತ್ಯಾಂಶ ವರದಿ ಮಾಡಿದ್ದ. ಆತ ಅತೀ ಧೈರ್ಯವಂತ. ಚಿಕ್ಕಂದಿನಿಂದಲೂ ಹಿಡಿದ ಕೆಲಸವನ್ನು ಮಾಡಿಮುಗಿಸುವವನಾಗಿದ್ದ,‘ ಎಂದು ತಂದೆ ಅಖ್ತರ್‌ ಸಿದ್ದಿಕಿ ಅವರು ಮಗನನ್ನು ಕೊಂಡಾಡಿದ್ದಾರೆ.

2011ರಿಂದ ರಾಯಿಟರ್ಸ್ ಸುದ್ದಿ ಸಂಸ್ಥೆಯಲ್ಲಿ ಫೋಟೊ ಜರ್ನಲಿಸ್ಟ್ ಆಗಿ ಡ್ಯಾನಿಷ್‌ ಸಿದ್ದಿಕಿ ಕೆಲಸ ಮಾಡಿದ್ದರು. ಈ ವೇಳೆ ಅವರು ಅಫ್ಗಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್‌ನಲ್ಲಿ ನಡೆದ ಪ್ರತಿಭಟನೆ ಮತ್ತು ನೇಪಾಳದಲ್ಲಿ ಸಂಭವಿಸಿದ ಭೂಕಂಪಗಳ ಬಗ್ಗೆ ವರದಿ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು