ಪಶ್ಚಿಮ ಬಂಗಾಳದಲ್ಲಿ ಕೋವಿಡ್ ನಿರ್ಬಂಧಗಳು ಮತ್ತಷ್ಟು ಸಡಿಲಿಕೆ

ಕೋಲ್ಕತ್ತ: ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ.
ಪರಿಸ್ಥಿತಿ ಸುಧಾರಿಸಿರುವ ಕಾರಣ ಜೂನ್ 16ರಿಂದ ಶೇಕಡಾ 25ರಷ್ಟು ಉದ್ಯೋಗಿಗಳ ಸಾಮರ್ಥ್ಯದೊಂದಿಗೆ ಕಚೇರಿ ತೆರೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ಆದೇಶದ ವರೆಗೆ ಸಾರ್ವಜನಿಕ ಸಾರಿಗೆ ಸೇವೆಗಳ ಮೇಲಿನ ನಿರ್ಬಂಧಗಳು ಮುಂದುವರಿಯುವುದರಿಂದ ಕಂಪನಿಗಳು ಉದ್ಯೋಗಿಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಎಚ್.ಕೆ. ದ್ವಿವೇದಿ ತಿಳಿಸಿದ್ದಾರೆ.
ಇದನ್ನೂ ಓದಿ: Covid-19 India Update: 74 ದಿನಗಳಲ್ಲೇ ಅತಿ ಕಡಿಮೆ ಸೋಂಕು ಪ್ರಕರಣಗಳು
ಬುಧವಾರದಿಂದ ಶಾಪಿಂಗ್ ಮಾಲ್‌ಗಳು ಬೆಳಗ್ಗೆ 11ರಿಂದ ಸಂಜೆ 6ರ ವರೆಗೆ ಕಾರ್ಯನಿರ್ವಹಿಸಬಹುದು. ಮಾರುಕಟ್ಟೆಗಳು ಬೆಳಗ್ಗೆ 7ರಿಂದ 11ರ ವರೆಗೆ ತೆರೆದುಕೊಳ್ಳಬಹುದು.
ರೆಸ್ಟೋರೆಂಟ್ ಹಾಗೂ ಬಾರ್‌ಗಳಲ್ಲಿ ಶೇಕಡಾ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಮಧ್ಯಾಹ್ನದಿಂದ ರಾತ್ರಿ 8ರ ವರೆಗೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ಮುಚ್ಚಿದ ಕ್ರೀಡಾಂಗಣಗಳಲ್ಲಿ ಕ್ರೀಡಾಕೂಟ ಆಯೋಜಿಸಬಹುದಾಗಿದೆ. ಹಾಗೆಯೇ ಸಂಪೂರ್ಣವಾಗಿ ಲಸಿಕೆ ಹಾಕಿಸಿದವರಿಗೆ ಬೆಳಗ್ಗೆ ನಡೆದಾಡಲು ಉದ್ಯಾನ ತೆರೆದಿರುತ್ತವೆ ಎಂದಿದ್ದಾರೆ.
ಹಾಗೆಯೇ ಸಂಪೂರ್ಣ ಲಸಿಕೆ ಹಾಕಿಸಿದವರು ಒಳಾಂಗಣ ಮತ್ತು ಹೊರಾಂಗಣ ಚಲನಚಿತ್ರ ಶೂಟಿಂಗ್ 50 ಜನರ ಮಿತಿಯೊಂದಿಗೆ ಪುನರಾರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮೇ 16ರಿಂದ 30ರ ವರೆಗೆ ರಾಜ್ಯದಲ್ಲಿ ನಿರ್ಬಂಧವನ್ನು ಹೇರಲಾಗಿತ್ತು. ಬಳಿಕ ಜೂನ್ 15ರ ವರೆಗೆ ಮುಂದೂಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.