ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit: ದೇಶದಲ್ಲಿ ಇನ್ನು ‘ಒಂದು ಆರೋಗ್ಯ’

ಕಾಯಿಲೆಗಳ ನಿಯಂತ್ರಣಕ್ಕೆ ತಂತ್ರಜ್ಞಾನ ಒಳಗೊಂಡ ಸಮಗ್ರ ಯೋಜನೆ
Last Updated 16 ನವೆಂಬರ್ 2022, 21:20 IST
ಅಕ್ಷರ ಗಾತ್ರ

ಬೆಂಗಳೂರು: ಪಶು ಸಂಗೋಪನೆ, ವನ್ಯಜೀವಿ ಮತ್ತು ಮನುಷ್ಯರನ್ನು ಒಳಗೊಳ್ಳುವ ‘ಒಂದು ಆರೋಗ್ಯ’ ಎನ್ನುವ ಸಮಗ್ರವಾದ ಯೋಜನೆ ದೇಶದಲ್ಲಿ ಶೀಘ್ರ ಜಾರಿಯಾಗಲಿದೆ.

ಕೋವಿಡ್‌ ಸಾಂಕ್ರಾಮಿಕ ಕಾಯಿಲೆ ಬಳಿಕ, ಇಂತಹ ಯೋಜನೆಯ ಅಗತ್ಯತೆಯನ್ನು ಕೇಂದ್ರ ಸರ್ಕಾರ ಮನಗಂಡಿದೆ. ಪ್ರಧಾನಮಂತ್ರಿ ಅವರ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಮಂಡಳಿ (ಪಿಎಂ–ಎಸ್‌ಟಿಐಎಸಿ) ಈ ಬಗ್ಗೆ ಶಿಫಾರಸ್ಸು ಮಾಡಿದ್ದು, ವಿವಿಧ ರೀತಿಯ ರೋಗಗಳ ಮೇಲೆ ತಂತ್ರಜ್ಞಾನಗಳ ಮೂಲಕ ನಿಗಾವಹಿಸಲು ಅನುಕೂಲವಾಗಲಿದೆ ಎಂದು ಪ್ರತಿಪಾದಿಸಲಾಗಿದೆ. ಜತೆಗೆ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕೆ, ಲಸಿಕೆಗಳ ಸಂಶೋಧನೆಗೆ ಆದ್ಯತೆ ದೊರೆಯಲಿದೆ.

‘ಬೆಂಗಳೂರು ಟೆಕ್‌ಸಮ್ಮಿಟ್‌’ನಲ್ಲಿ ಬುಧವಾರ ನಡೆದ ಭಾರತದ ಅಭಿವೃದ್ಧಿಯಲ್ಲಿತಂತ್ರಜ್ಞಾನಗಳ ಕ್ರಾಂತಿಯ ಸಮ್ಮಿಲನ ಕುರಿತ ಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್‌ ಕೆ. ಸೂದ್‌, ‘ಹತ್ತು ಸಚಿವಾಲಯಗಳು ಒಂದು ಆರೋಗ್ಯ ಯೋಜನೆಗಾಗಿ ಕಾರ್ಯನಿರ್ವಹಿಸುತ್ತಿವೆ. ಮನುಷ್ಯರು ಮತ್ತು ಪ್ರಾಣಿಗಳನ್ನು ಒಳಗೊಂಡ ಸಮಗ್ರವಾದ ಅತಿ ದೊಡ್ಡ ಯೋಜನೆ ಇದಾಗಿದೆ’ ಎಂದು ವಿವರಿಸಿದರು.

‘ಇದುವರೆಗೆ ಪಶುಸಂಗೋಪನೆ, ವನ್ಯಜೀವಿಗಳು ಮತ್ತು ನಾಗರಿಕರ ಆರೋಗ್ಯ ರಕ್ಷಣೆ ವಿಷಯಗಳನ್ನು ಪ್ರತ್ಯೇಕವಾಗಿಯೇ ಕಾಣಲಾಗುತ್ತಿತ್ತು. ಆದರೆ, ಕೋವಿಡ್‌ ನಂತರ ಸನ್ನಿವೇಶಗಳು ಬದಲಾಗಿವೆ. ಹೀಗಾಗಿ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಈ ಯೋಜನೆ ಜಾರಿಗೊಳಿಸಲಾಗುವುದು. ಇದರಿಂದ, ಪ್ರಾಣಿಗಳಿಂದ ಹರಡಬಹುದಾದ
ಕಾಯಿಲೆಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕವೇ ನಿಯಂತ್ರಿಸಬಹುದಾಗಿದೆ’ ಎಂದು ತಿಳಿಸಿದರು.

‘ವಿವಿಧ ಲಸಿಕೆಗಳಿಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುವುದು. ಭವಿಷ್ಯದಲ್ಲಿ ನಾಗರಿಕರು ಮತ್ತು ಪ್ರಾಣಿಗಳ ಮೂಲಕ ಹಬ್ಬುವ ಸಾಂಕ್ರಾಮಿಕ ಕಾಯಿಲೆಗಳನ್ನು ನಿಯಂತ್ರಿಸಲು ಸಮಗ್ರ ಮಾಹಿತಿ ವ್ಯವಸ್ಥೆಯನ್ನುಕ್ರೋಢೀಕರಿಸಲು ಮಹತ್ವ ನೀಡಲಾಗುವುದು. ಜತೆಗೆ, ಅಂತರ ಸಚಿವಾಲಯಗಳ ನಡುವೆ ಸಮನ್ವಯ, ಸಹಯೋಗ ಮತ್ತು ಸಂಪರ್ಕ ಸಾಧಿಸುವುದು ಸಹ ಅತ್ಯಂತ ಮಹತ್ವದ್ದಾಗಿದೆ’ ಎಂದು ಮಾಹಿತಿ ನೀಡಿದರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಾಜಿ ನಿರ್ದೇಶಕ ಪ್ರೊ. ಪದ್ಮನಾಭನ್‌ ಗೋವಿಂದರಾಜನ್‌ ಇದ್ದರು.

‘6ಜಿ’ಗೆ ಕೇಂದ್ರದ ಸಿದ್ಧತೆ
ದೇಶದಲ್ಲಿ ಈಗಾಗಲೇ ‘5ಜಿ’ ತಂತ್ರಜ್ಞಾನ ಜಾರಿಗೊಳಿಸಲಾಗಿದ್ದು, ಈಗ ‘6ಜಿ’ ಅನುಷ್ಠಾನಕ್ಕೆಕೇಂದ್ರ ಸರ್ಕಾರ ಸಿದ್ಧತೆಗಳನ್ನು ಕೈಗೊಂಡಿದೆ ಎಂದುಪ್ರೊ. ಅಜಯ್‌ ಕೆ. ಸೂದ್‌ ತಿಳಿಸಿದರು. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ದೂರಸಂಪರ್ಕ ಇಲಾಖೆ ಈಗಾಗಲೇ 6ಜಿ ತಂತ್ರಜ್ಞಾನ ಆವಿಷ್ಕಾರ ಸಮಿತಿಯವನ್ನು ರಚಿಸಿದೆ. ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕೈಗೊಳ್ಳಲು ನೀಲನಕಾಶೆ ರೂಪಿಸುವುದು ಸಮಿತಿಯ ಹೊಣೆಯಾಗಿದೆ. ಜತೆಗೆ, ಭಾರತವನ್ನು ಈ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವಂತೆ ಯೋಜನೆಗಳನ್ನು ರೂಪಿಸುವುದಾಗಿದೆಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT