ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತರಾಗಿ ಬದಲಾಗಿದ್ದೀರಾ: ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪ್ರಶ್ನೆ

ದೇಗುಲ ತೆರೆಯಲು ವಿಳಂಬ: ಮಹಾರಾಷ್ಟ್ರ ರಾಜ್ಯಪಾಲ–ಮುಖ್ಯಮಂತ್ರಿ ಜಟಾಪಟಿ
Last Updated 13 ಅಕ್ಟೋಬರ್ 2020, 19:36 IST
ಅಕ್ಷರ ಗಾತ್ರ

ಮುಂಬೈ: ದೇವಸ್ಥಾನ ಮತ್ತು ಇತರೆ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ವಿಚಾರದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಮಂಗಳವಾರ ಮಾತಿನ ಸಮರ ನಡೆದಿದೆ.

‘ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಠಾಕ್ರೆ ಅವರು ‘ಜಾತ್ಯತೀತ’ ಎನಿಸಿಕೊಳ್ಳಲು ‘ಹಿಂದುತ್ವ’ವನ್ನು ತ್ಯಜಿಸಿದರೇ‘ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಉದ್ಧವ್, ಜಾತ್ಯತೀತತೆ ಬಗ್ಗೆ ರಾಜ್ಯಪಾಲರಿಂದ ತಮಗೆ ‘ಪ್ರಮಾಣಪತ್ರ’ ಬೇಕಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಹರಡುವಿಕೆ ತಡೆಯುವ ಕಾರಣದಿಂದ ಮುಚ್ಚಲಾಗಿರುವ ಧಾರ್ಮಿಕ ಕೇಂದ್ರಗಳನ್ನು ತೆರೆಯುವಂತೆ ಕೆಲವು ದಿನಗಳಿಂದ ವಿವಿಧ ಧಾರ್ಮಿಕ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ.ದೇವಸ್ಥಾನಗಳನ್ನು ತೆರೆಯಬೇಕು ಎಂದು ವಿವಿಧ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದು,ಬಿಜೆಪಿ ಸಹ ಈ ಬಗ್ಗೆ ದನಿ ಎತ್ತಿದೆ.

ಕೋಶಿಯಾರಿ ಅವರು ಉದ್ಧವ್‌ ಅವರಿಗೆ ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಡಿಸಿದ್ದಾರೆ. ‘ನೀವು ಹಿಂದೂ ಮತದಾರರ ಪ್ರಬಲವಾದ ಬೆಂಬಲ ಪಡೆದಿದ್ದೀರಿ. ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಗೆ ಭೇಟಿ ನೀಡಿ ಭಗವಾನ್ ಶ್ರೀರಾಮನಲ್ಲಿ ನೀವು ಇಟ್ಟಿರುವ ಭಕ್ತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದೀರಿ. ಆಷಾಢ ಏಕಾದಶಿ ದಿನದ ಅಂಗವಾಗಿ ಪಂಡರಾಪುರದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದೀರಿ. ಆದರೆ ಪೂಜಾ ಸ್ಥಳಗಳ ಪುನರಾರಂಭವನ್ನು ಮತ್ತೆ ಮತ್ತೆ ಮುಂದೂಡಲು ನಿಮಗೆ ಯಾವ ದೈವೀಕ ಶಕ್ತಿಯ ಸೂಚನೆ ಸಿಕ್ಕಿದೆ? ಅಥವಾ ‘ಜಾತ್ಯತೀತ’ರಾಗಿ ನೀವು ಬದಲಾಗಿದ್ದೀರಾ’ ಎಂದು ಕೋಶಿಯಾರಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಪ್ರತ್ಯುತ್ತರ ನೀಡಿರುವ ಉದ್ಧವ್ ಠಾಕ್ರೆ, ‘ನನ್ನ ರಾಜ್ಯ ಮತ್ತು ರಾಜಧಾನಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಂದಿಗೆ ಹೋಲಿಸುವ ಜನರಿಗೆ ಆತ್ಮೀಯ ಸ್ವಾಗತ ನೀಡುವವರು ನನ್ನ ಹಿಂದುತ್ವಕ್ಕೆ ಹೊಂದಾಣಿಕೆ ಆಗುವುದಿಲ್ಲ’ ಎಂದಿದ್ದಾರೆ. ಈ ಮೂಲಕ ನಟಿ ಕಂಗನಾ ರನೌತ್ ಅವರನ್ನು ಕೋಶಿಯಾರಿ ಭೇಟಿಯಾಗಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ರಾಜ್ಯಪಾಲರು ಬಳಸಿರುವ ಭಾಷೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT