ಸೋಮವಾರ, ಆಗಸ್ಟ್ 15, 2022
25 °C

ಕೋವ್ಯಾಕ್ಸಿನ್‌ನ 3ನೇ ಹಂತದ ದತ್ತಾಂಶ WHOಗೆ ಸಲ್ಲಿಸಿಲ್ಲ: ಭಾರತ್‌ ಬಯೋಟೆಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌:  ಕೋವ್ಯಾಕ್ಸಿನ್‌ನ ಲಸಿಕೆಯ 3 ನೇ ಹಂತದ ಪ್ರಾಯೋಗದ ದತ್ತಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತ್‌ ಬಯೋಟೆಕ್‌ ಸಂಸ್ಥೆ ಗುರುವಾರ ನಿರಾಕರಿಸಿದೆ.

ಕೊರೊನಾ ವೈರಸ್‌ಗೆ ವಿರುದ್ಧವಾಗಿ ಭಾರತ ದೇಶಿಯವಾಗಿ ಅಭಿವೃದ್ಧಿಪಡಿಸಿದ ಲಸಿಕೆ ಕೋವ್ಯಾಕ್ಸಿನ್‌. ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಂಸ್ಥೆ ಕೋವ್ಯಾಕ್ಸಿನ್‌ ಅನ್ನು ಸಂಶೋಧಿಸಿದೆ.

‘ಭಾರತ್ ಬಯೋಟೆಕ್ ಕೋವಾಕ್ಸಿನ್‌ನ 3ನೇ ಹಂತದ ಪ್ರಯೋಗದ ದತ್ತಾಂಶವನ್ನು ಬುಧವಾರ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ. ಜೂನ್ 23 ರಂದು ಸಂಸ್ಥೆಯ ಅರ್ಜಿಯನ್ನು ಆರೋಗ್ಯ ಸಂಸ್ಥೆ ಪರಿಶೀಲಿಸಲಿದೆ,‘ ಎಂದು ಮಾಧ್ಯಮಗಳಲ್ಲಿ ಈ ಮೊದಲು ವರದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಭಾರತ್‌ ಬಯೋಟೆಕ್‌ ಗುರುವಾರ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದೆ. ‘ಭಾರತ್ ಬಯೋಟೆಕ್ ಕೋವ್ಯಾಕ್ಸಿನ್‌ನ 3ನೇ ಹಂತದ ದತ್ತಾಂಶವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ ಎಂಬ ಸುದ್ದಿ, ವರದಿಗಳು ತಪ್ಪಿನಿಂದ ಕೂಡಿವೆ. ಮತ್ತು, ಈ ವರದಿಗಳಿಗೆ ಯಾವುದೇ ಪುರಾವೆಗಳಿಲ್ಲ,’ ಎಂದು ತಿಳಿಸಿದೆ.

ಪ್ರಸ್ತುತ ಭಾರತದಲ್ಲಿ ಮೂರು ಲಸಿಕೆಗಳನ್ನು ಬಳಸಲಾಗುತ್ತಿದ್ದು, ಅದರಲ್ಲಿ ಕೋವ್ಯಾಕ್ಸಿನ್‌ ಕೂಡ ಒಂದು. ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸುತ್ತಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿವೆ.

ಭಾರತ್‌ ಬಯೋಟೆಕ್‌ ಸಂಸ್ಥೆಯು ಕೋವ್ಯಾಕ್ಸಿನ್‌ನ 3 ನೇ ಹಂತದ ಪ್ರಯೋಗದ ದತ್ತಾಂಶವನ್ನು ಜೂನ್‌ನಲ್ಲಿ ಬಹಿರಂಗಪಡಿಸುವುದಾಗಿ ಹೇಳಿತ್ತು. ನಂತರ ಸ್ಪಷ್ಟನೆ ನೀಡಿದ್ದ ಸಂಸ್ಥೆಯು ಜುಲೈನಲ್ಲಿ ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿದೆ. ಈ ಮಧ್ಯೆ ಪ್ರಯೋಗದ ವರದಿ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು