ಕಾಶ್ಮೀರದಲ್ಲಿ ಭದ್ರತಾ ಲೋಪ: ಕಾಂಗ್ರೆಸ್ ಆರೋಪ

ಶ್ರೀನಗರ: ‘ಜಮ್ಮು–ಕಾಶ್ಮೀರ ಆಡಳಿತದಿಂದ ಗಂಭೀರ ಸ್ವರೂಪದ ಭದ್ರತಾ ಲೋಪವಾಗಿದೆ’ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದಿನದ ಮಟ್ಟಿಗೆ ಭಾರತ್ ಜೋಡೊ ಯಾತ್ರೆಯನ್ನು ರದ್ದು ಶುಕ್ರವಾರ ಮಾಡಿದರು.
ಶುಕ್ರವಾರ ಮಧ್ಯಾಹ್ನವಷ್ಟೆ ಯಾತ್ರೆಯು ಜಮ್ಮು–ಕಾಶ್ಮೀರವನ್ನು ಪ್ರವೇಶಿಸಿತ್ತು.
ಯಾತ್ರೆಯನ್ನು ರದ್ದುಗೊಳಿಸಿದ ನಂತರ ಅನಂತನಾಗ್ ಜಿಲ್ಲೆಯ ಖಾನಾಬಾಲ್‌ನಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ‘ಬನಿಹಾಲ್‌ನಿಂದ ಕಾಜಿಗುಂಡಕ್ಕೆ ತೆರಳುವಾಗ, ಯಾತ್ರೆಯು ಜವಾಹರ್ ಸುರಂಗ ದಾಟುತ್ತಿದ್ದಂತೆಯೇ ನನ್ನ ಸ್ವಾಗತಕ್ಕಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಆದರೆ, ಈ ಜನರನ್ನು ನಿಯಂತ್ರಿಸಲು ಒಬ್ಬ ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ’ ಎಂದು ಆರೋಪಿಸಿದರು.
‘ಯಾತ್ರೆಯನ್ನು ಮುಂದುವರಿಸುವುದು ಬೇಡ ಎಂದು ನನ್ನ ಭದ್ರತಾ ಸಿಬ್ಬಂದಿ ಸಲಹೆ ನೀಡಿದರು. ನಾನು ಅವರ ಸಲಹೆಯನ್ನು ಮೀರುವುದು ಸಾಧ್ಯವಿರಲಿಲ್ಲ’ ಎಂದರು.
‘ಜ. 30ರಂದು ಯಾತ್ರೆಯು ಶ್ರೀನಗರದಲ್ಲಿ ಮುಕ್ತಾಯವಾಗಲಿದೆ. ಅದೇ ದಿನ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವೆ. ಹೀಗಾಗಿ, ಮುಂಬರುವ ದಿನಗಳಲ್ಲಿ ನಡೆಯುವ ನನ್ನ ಎಲ್ಲ ಕಾರ್ಯಕ್ರಮಗಳಿಗಾದರೂ ವ್ಯಾಪಕ ಭದ್ರತೆ ಒದಗಿಸಲಾಗುತ್ತದೆ ಎಂಬ ಭರವಸೆ ಹೊಂದಿದ್ದೇನೆ’ ಎಂದರು.
‘ಭಾರತ್ ಜೋಡೊ ಯಾತ್ರೆಗೆ ಭದ್ರತೆ ಒದಗಿಸಲು ಸ್ಥಳೀಯ ಆಡಳಿತ ವಿಫಲವಾಗಿದೆ’ ಎಂದು ಎಐಸಿಸಿಯ ಜಮ್ಮು–ಕಾಶ್ಮಿರ ಉಸ್ತುವಾರಿ ರಜನಿ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಶುಕ್ರವಾರದಂದು ರಾಹುಲ್ ಗಾಂಧಿ ಅವರು 16 ಕಿ.ಮೀ ನಡೆಯಬೇಕಿತ್ತು. ಆದರೆ, ಅದನ್ನು 4 ಕಿ.ಮಿ.ಗೇ ಮೊಟಕುಗೊಳಿಸಬೇಕಾಯಿತು. ಗುರುವಾರ ಗಣರಾಜ್ಯೋತ್ಸವ ಇದ್ದ ಕಾರಣ, ಒಂದು ದಿನದ ಮಟ್ಟಿದೆ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಬುಧವಾರವೂ ಯಾತ್ರೆ ನಡೆದಿರಲಿಲ್ಲ.
ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಒಮರ್ ಅಬ್ದುಲ್ ಅವರು ರಾಹುಲ್ ಗಾಂಧಿ ಜತೆ ಯಾತ್ರೆಯಲ್ಲಿ ಪಾಲ್ಗೊಂಡರು.
ಭದ್ರತಾ ಲೋಪವಾಗಿಲ್ಲ: ಎಡಿಜಿಪಿ
ಅನಂತನಾಗ್ (ಪಿಟಿಐ): ‘ಭಾರತ್ ಜೋಡೊ ಯಾತ್ರೆಗೆ ಒದಗಿಸಿರುವ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ. ಬನಿಹಾಲ್‌ನಿಂದ ಸಾಗುವ ಯಾತ್ರೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ಸಂಘಟಕರು ತಿಳಿಸಿರಲಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದರು.
‘ಶುಕ್ರವಾರದಂದು ಯಾತ್ರೆಯನ್ನು ರದ್ದು ಮಾಡುವ ಮುನ್ನ, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಮಾಲೋಚನೆ ನಡೆಸಲಿಲ್ಲ. ಯಾವುದೇ ಲೋಪವಿಲ್ಲದೆ ನಾವು ಯಾತ್ರೆಗೆ ಭದ್ರತೆ ನೀಡಲಿದ್ದೇವೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಆಯೋಜಕರು ಗುರುತಿಸಿದ ಅಧಿಕೃತ ವ್ಯಕ್ತಿಗಳು ಹಾಗೂ ತಪಾಸಣೆಗೆ ಒಳಪಟ್ಟ ಜನರಿಗೆ ಮಾತ್ರ ಯಾತ್ರೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿತ್ತು’ ಎಂದರು.
*
ಮುಂದಿನ ದಿನಗಳಲ್ಲಿ ಶ್ರೀನಗರವನ್ನು ಪ್ರವೇಶಿಸಲಿರುವ ಯಾತ್ರೆಗೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೂಕ್ತ ಭದ್ರತೆ ಒದಗಿಸಬೇಕು
-ಜೈರಾಮ್ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
*
ಒಮ್ಮಿಂದೊಮ್ಮೆಲೆ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿರುವುದು ಗಂಭೀರ ಭದ್ರತಾ ಲೋಪ. ಸಿಬ್ಬಂದಿ ಹಿಂಪಡೆಯುವಂತೆ ಯಾರು ಆದೇಶಿಸಿದರು?
-ಕೆ.ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.