ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಎಲ್ಲ ಸಂಸ್ಥೆಗಳು ಬಿಜೆಪಿ, ಆರ್‌ಎಸ್‌ಎಸ್‌ ಕೈವಶ: ರಾಹುಲ್‌ ಗಾಂಧಿ

ಭಾರತ್‌ ಜೋಡೊ ಯಾತ್ರೆ
Last Updated 17 ಜನವರಿ 2023, 19:16 IST
ಅಕ್ಷರ ಗಾತ್ರ

ಹೋಷಿಯಾರ್‌ಪುರ (ಪಂಜಾಬ್‌): ದೇಶದ ಎಲ್ಲ ಸಂಸ್ಥೆಗಳನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೈವಶ ಮಾಡಿಕೊಂಡಿವೆ. ಚುನಾವಣಾ ಆಯೋಗ ಮತ್ತು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ತಮ್ಮ ಕತ್ತು ಸೀಳಿದರೂ ಆರ್‌ಎಸ್‌ಎಸ್‌ ಕಚೇರಿಗೆ ಹೋಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ತಮ್ಮ ದೊಡ್ಡಪ್ಪ ಸಂಜಯ್‌ ಗಾಂಧಿ ಮಗ, ಬಿಜೆಪಿ ಸಂಸದ ವರುಣ್‌ ಗಾಂಧಿ ಅವರನ್ನು ಭೇಟಿಯಾಗುವಿರಾ ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ರಾಹುಲ್‌ ಉತ್ತರಿಸಿದರು. ತಮ್ಮ ಸಿದ್ಧಾಂತಗಳು ಹೊಂದಿಕೆ ಆಗುವುದಿಲ್ಲ ಎಂದರು.

ವರುಣ್‌ ಅವರು ಯಾತ್ರೆಯ ಜೊತೆಗೆ ಹೆಜ್ಜೆ ಹಾಕಿದರೆ ಅವರಿಗೆ ಸಮಸ್ಯೆ ಉಂಟಾಗಬಹುದು. ಬಿಜೆಪಿ ಅದನ್ನು ಒಪ್ಪಲಿಕ್ಕಿಲ್ಲ ಎಂದು ಹೇಳಿದರು.

‘ವರುಣ್‌ ಅವರನ್ನು ನಾನು ಪ್ರೀತಿಯಿಂದ ತಬ್ಬಿಕೊಳ್ಳುತ್ತೇನೆ. ಆದರೆ, ಆ ಸಿದ್ಧಾಂತವನ್ನು ಒಪ್ಪಲಾಗದು’ ಎಂದರು. ಆರ್‌ಎಸ್‌ಎಸ್‌ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ವರುಣ್‌ ಹಿಂದೊಮ್ಮೆ ಹೇಳಿದ್ದರು ಎಂಬುದನ್ನು ರಾಹುಲ್‌ ನೆನಪಿಸಿಕೊಂಡರು. ‘ನಮ್ಮ ಕುಟುಂಬವು ಯಾವ ಸಿದ್ಧಾಂತದ ಪರವಾಗಿ ನಿಂತಿದೆ ಎಂಬುದನ್ನು ಓದಿ ಅರ್ಥ ಮಾಡಿಕೊಂಡಿದ್ದರೆ ಹೀಗೆ ಹೇಳುತ್ತಿರಲಿಲ್ಲ ಎಂದು ವರುಣ್‌ಗೆ ನಾನು ಹೇಳಿದ್ದೆ’ ಎಂದೂ ರಾಹುಲ್‌ ಹೇಳಿದರು.

ಸಂಸ್ಥೆಗಳ ಮೇಲೆ ಒತ್ತಡ ಇದೆ. ಮಾಧ್ಯಮ, ಅಧಿಕಾರಶಾಹಿ, ಚುನಾವಣಾ ಆಯೋಗ, ನ್ಯಾಯಾಂಗ ಎಲ್ಲದರ ಮೇಲೆಯೂ ಒತ್ತಡ ಇದೆ. ಈಗ ನಡೆಯುತ್ತಿರುವುದು ಒಂದು ರಾಜಕೀಯ ಪಕ್ಷದ ಜೊತೆಗೆ ಇನ್ನೊಂದು ರಾಜಕೀಯ ಪಕ್ಷದ ಜಗಳ ಅಲ್ಲ. ಈಗಿನ ಸಂಘರ್ಷವು ಬಿಜೆಪಿ–ಆರ್‌ಎಸ್‌ಎಸ್‌ ಕೈವಶ ಮಾಡಿಕೊಂಡಿರುವ ಸಂಸ್ಥೆಗಳು ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿದೆ. ವಿದ್ಯುನ್ಮಾನ ಮತಯಂತ್ರ ಕೂಡ ಅದರಲ್ಲಿ ಒಂದು. ಸಹಜ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಈಗ ಕಾಣೆಯಾಗಿವೆ ಎಂದು ರಾಹುಲ್‌ ಆಪಾದಿಸಿದ್ದಾರೆ.

ರಾಹುಲ್ ನೇತೃತ್ವದ ‘ಭಾರತ್‌ ಜೋಡೊ ಯಾತ್ರೆ’ಯು ಪಂಜಾಬ್‌ನಲ್ಲಿ ಸಾಗುತ್ತಿದೆ. ಪಂಜಾಬ್‌ನ ಆಡಳಿತಾರೂಢ ಎಎಪಿ ಬಗ್ಗೆಯೂ ಅವರು ಟೀಕೆ ಮಾಡಿದರು. ಪಂಜಾಬ್‌ನ ಆಳ್ವಿಕೆಯು ಪಂಜಾಬ್‌ನಿಂದಲೇ ನಡೆಯಬೇಕು. ಅದು ದೆಹಲಿಯಿಂದ ನಡೆಯಬಾರದು. ಪಂಜಾಬ್‌ನ ಆಳ್ವಿಕೆಯು ದೆಹಲಿಯಿಂದ ನಡೆಯುವುದನ್ನು ಪಂಜಾಬ್‌ನ ಜನರು ಒಪ್ಪುವುದಿಲ್ಲ ಎಂದರು.

ಭದ್ರತಾ ಲೋಪ?
ಹೋಷಿಯಾರ್‌ಪುರದಲ್ಲಿ ರಾಹುಲ್ ಗಾಂಧಿ ಅವರನ್ನು ಕಾಣಲು ಯುವಕನೊಬ್ಬ ಅತ್ಯುತ್ಸಾಹದಿಂದ ನುಗ್ಗಿಬಂದ ಘಟನೆಯು ಆತಂಕ ಮೂಡಿಸಿತ್ತು. ಇದು ‘ಭಾರತ್ ಜೋಡೊ’ ಯಾತ್ರೆಯಲ್ಲಿ ರಾಹುಲ್ ಅವರ ಭದ್ರತೆಯ ಬಗ್ಗೆ ಭೀತಿ ಮೂಡಿಸಿದರೂ, ಭದ್ರತಾ ಲೋಪ ಆಗಿಲ್ಲ ಎಂದು ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ‘ರಾಹುಲ್ ಅವರು ಸ್ವತಃ ಕರೆದಿದ್ದರಿಂದ ಯುವಕ ಅವರತ್ತ ಧಾವಿಸಿ ಬಂದಿದ್ದ’ ಎಂದು ಐಜಿ ಜಿ.ಎಸ್. ಧಿಲ್ಲೋನ್ ಸ್ಪಷ್ಟಪಡಿಸಿದ್ದಾರೆ. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ‘ನನ್ನನ್ನು ಅಪ್ಪಿಕೊಳ್ಳಲು ಬಂದ ಯುವಕ ಸ್ವಲ್ಪ ಉತ್ಸುಕನಾಗಿದ್ದ. ತೊಂದರೆಯೇನಿಲ್ಲ. ಇಂತಹ ಘಟನೆಗಳು ಆಗುತ್ತಿರುತ್ತವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT