ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ಕೋರೆಗಾಂವ್‌ ಪ್ರಕರಣ: ಸಾಕ್ಷ್ಯ ಸೃಷ್ಟಿ ಸಮರ್ಥಿಸುವ ಇನ್ನಷ್ಟು ಸಾಕ್ಷ್ಯ

16 ಹೋರಾಟಗಾರರ ಸೆರೆ
Last Updated 21 ಏಪ್ರಿಲ್ 2021, 15:43 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ 2018ರ ಜನವರಿಯಲ್ಲಿ ಭೀಮಾ ಕೋರೆಗಾಂವ್‌ 200ನೇ ವರ್ಷಾಚರಣೆ ವೇಳೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ರೋನಾ ವಿಲ್ಸನ್‌ ಅವರ ಲ್ಯಾಪ್‌ಟಾಪ್‌ನಲ್ಲಿ 22 ಕಡತಗಳನ್ನು ಹ್ಯಾಕಿಂಗ್ ಮೂಲಕ ಸೇರಿಸಲಾಗಿದೆ ಎಂದು ಅಮೆರಿಕದ ಡಿಜಿಟಲ್ ವಿಧಿವಿಜ್ಞಾನ ಪ್ರಯೋಗಾಲಯವೊಂದು ತನ್ನ ಹೊಸ ವರದಿಯಲ್ಲಿ ಹೇಳಿದೆ. ಹಿಂಸಾಚಾರ ನಡೆದ ಕೆಲವು ದಿನಗಳ ನಂತರ ವಿಲ್ಸನ್ ಅವರ ಲ್ಯಾಪ್‌ಟಾಪ್‌ನಲ್ಲಿ ಈ ಕಡತಗಳನ್ನು ಸೇರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಈ ಪ್ರಕರಣದಲ್ಲಿ ಈ ಕಡತಗಳೇ ಪ್ರಮುಖ ಸಾಕ್ಷ್ಯಗಳು ಎಂದು ಪುಣೆ ಪೊಲೀಸರು 2018ರ ನವೆಂಬರ್ 15ರಿಂದ ಹೇಳುತ್ತಿದ್ದಾರೆ. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಹ ಇವನ್ನು ಪ್ರಮುಖ ಸಾಕ್ಷ್ಯಗಳು ಎಂದು ಪರಿಗಣಿಸಿದೆ. ಈ ಸಾಕ್ಷ್ಯಗಳ ಆಧಾರದಲ್ಲೇ ರೋನಾ ವಿಲ್ಸನ್ ಸೇರಿದಂತೆ 16 ಮಂದಿಯನ್ನು ಬಂಧಿಸಲಾಗಿತ್ತು. ಭಾರತ ಸರ್ಕಾರದ ವಿರುದ್ಧ ಸಂಚು ರೂಪಿಸಿದ ಆರೋಪದಲ್ಲಿ ಇವರನ್ನು ಜೈಲಿಗೆ ಹಾಕಲಾಗಿದೆ. ಎರಡು ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. ಇವರಲ್ಲಿ ಕವಿ ವರವರ ರಾವ್ ಅವರು ಮಾತ್ರವೇ ಈಗ ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ.

‘ವಿಲ್ಸನ್ ಅವರ ಲ್ಯಾಪ್‌ಟಾಪ್‌ ಅನ್ನು ಭೌತಿಕವಾಗಿ ನಿರ್ವಹಣೆ ಮಾಡಿದವರಲ್ಲಿ ಯಾರೂ ಈ ಕಡತಗಳನ್ನು ಅದರಲ್ಲಿ ಸೇರಿಸಿಲ್ಲ. ಬದಲಿಗೆ ಕೆಲವು ಕುತಂತ್ರಾಂಶಗಳನ್ನು ಬಳಸಿ, ಹ್ಯಾಕರ್ ಮೂಲಕ ಈ ಕಡತಗಳನ್ನು ಲ್ಯಾಪ್‌ಟಾಪ್‌ನಲ್ಲಿ ಸೇರಿಸಲಾಗಿದೆ’ ಎಂದು ಆರ್ಸೆನಲ್ ಕನ್ಸಲ್ಟಿಂಗ್ ತನ್ನ ವರದಿಯಲ್ಲಿ ಹೇಳಿದೆ. ವಿಲ್ಸನ್ ಅವರ ವಕೀಲರ ಮನವಿಯ ನಂತರ, ವಿಲ್ಸನ್ ಅವರ ಲ್ಯಾಪ್‌ಟಾಪ್‌ನ ಎಲೆಕ್ಟ್ರಾನಿಕ್ ಪ್ರತಿಯನ್ನು ವಕೀಲರಿಗೆ ಹಸ್ತಾಂತರಿಸುವಂತೆ 2019ರ ನವೆಂಬರ್‌ನಲ್ಲಿ ನ್ಯಾಯಾಲಯವು ಎನ್‌ಐಎಗೆ ನಿರ್ದೇಶನ ನೀಡಿತ್ತು. ಆ ಎಲೆಕ್ಟ್ರಾನಿಕ್ ಪ್ರತಿಯನ್ನು ಪರಿಶೀಲಿಸಿ, ಆರ್ಸೆನಲ್ ಕನ್ಸಲ್ಟಿಂಗ್ ಈ ವರದಿಯನ್ನು ಸಿದ್ಧಪಡಿಸಿದೆ.

ಎನ್‌ಐಎ ಆರೋಪಪಟ್ಟಿಯ ಚಿತ್ರ
ಎನ್‌ಐಎ ಆರೋಪಪಟ್ಟಿಯ ಚಿತ್ರ

ಇದಕ್ಕೆ ಸಂಬಂಧಿಸಿದಂತೆ 2021ರ ಫೆಬ್ರುವರಿಯಲ್ಲಿ ಆರ್ಸೆನಲ್ ಮೊದಲ ವರದಿ ನೀಡಿತ್ತು. ಈಗ ಅದಕ್ಕೆ ಪೂರಕವಾಗಿ ಎರಡನೇ ವರದಿ ಸಿದ್ಧಪಡಿಸಿದೆ.ಈ ಎರಡನೇ ವರದಿ ಇನ್ನಷ್ಟೇ ಬಹಿರಂಗವಾಗಬೇಕಿದೆ. ಆದರೆ ಆರ್ಟಿಕಲ್ 14, ಈ ವರದಿಯನ್ನು ಪರಿಶೀಲಿಸಿದೆ. ‘ಈ ಲ್ಯಾಪ್‌ಟಾಪ್‌ ಮೇಲೆ ನಿರಂತರವಾಗಿ ಗೂಢಚರ್ಯೆ ನಡೆಸಲಾಗಿದೆ. ಕುತಂತ್ರಾಂಶ ಬಳಸಿ ಹ್ಯಾಕ್‌ ಮಾಡಲಾಗಿದೆ. ಎನ್‌ಐಎಯ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿರುವ 10 ಕಡತಗಳನ್ನು, ಹ್ಯಾಕ್ ಮಾಡುವ ಮೂಲಕ ಈ ಲ್ಯಾಪ್‌ಟಾಪ್‌ಗೆ ಸೇರಿಸಲಾಗಿದೆ. ಈ ಕಡತಗಳನ್ನು ವಿಲ್ಸನ್ ಅವರ ಲ್ಯಾಪ್‌ಟಾಪ್‌ನಿಂದ ನಿರ್ವಹಿಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಆದರೆ, ಇಂತಹ ಹೆಚ್ಚುವರಿ 24 ಕಡತಗಳಲ್ಲಿ 22 ಕಡತಗಳನ್ನು ಹ್ಯಾಕರ್‌ ನಿರ್ವಹಿಸಿದ್ದಾನೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರ ನಡುವಣ ಪತ್ರವ್ಯವಹಾರ, ಹಣ ವರ್ಗಾವಣೆ, ಸಂಘಟನೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಳ, ಪರಸ್ಪರ ನಡುವೆ ಸಂವಹನಕ್ಕೆ ಸದಸ್ಯರಿಗೆ ಇರುವ ಕಷ್ಟಗಳು, ಸರ್ಕಾರವು ಸಂಘಟನೆಯನ್ನು ದಮನಿಸಲು ಕೈಗೊಂಡಿರುವ ಕ್ರಮಗಳ ಬಗೆಗಿನ ಚರ್ಚೆಯ ಮಾಹಿತಿ ಈ 24 ಕಡತಗಳಲ್ಲಿ ಇವೆ. ಜತೆಗೆ ಕೆಲವು ಗೆರಿಲ್ಲಾ ಹೋರಾಟಗಾರರ ಫೋಟೊಗಳೂ ಇವೆ.

ಈ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಬಗ್ಗೆ ಆರ್ಸೆನಲ್ ವರದಿ ಮತ್ತು ಸರ್ಕಾರದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿನ ಅಂಶಗಳನ್ನು ಆಧರಿಸಿ, ವಿವರವಾದ ಮತ್ತು ನಿಖರವಾದ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು. ಈ ಪ್ರಶ್ನೆಗಳನ್ನು ಎನ್‌ಐಎಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಕ್ತಾರರಾದ ಜಯಾ ರಾಯ್ ಅವರಿಗೆ ಇ-ಮೇಲ್ ಮಾಡಲಾಗಿತ್ತು. ಆದರೆ, ಅವರು ಇ-ಮೇಲ್‌ಗೆ ಉತ್ತರಿಸಿಲ್ಲ. ಬದಲಿಗೆ ಫೋನ್‌ ಕರೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಖಾಸಗಿ ಪ್ರಯೋಗಾಲಯಗಳ ವರದಿಗಳನ್ನು ನಾವು ಪರಿಗಣಿಸುವುದಿಲ್ಲ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (ಆರ್‌ಎಫ್‌ಎಸ್‌ಎಲ್‌) ಮತ್ತು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಸಿಎಫ್‌ಎಸ್‌ಎಲ್‌) ಮಾತ್ರವೇ ನಾವು ಪರಿಶೀಲನೆ ನಡೆಸುತ್ತೇವೆ’ ಎಂದು ಅವರು ಉತ್ತರಿಸಿದ್ದಾರೆ.

ಈ 16 ಜನರ ವಿರುದ್ಧದ ಪ್ರಕರಣವು ತಾರ್ಕಿಕ ಅಂತ್ಯ ಕಾಣಲು ಹಲವು ವರ್ಷಗಳು ಬೇಕಾಗುವ ಸಾಧ್ಯತೆ ಇದೆ. ಹೀಗಾಗಿಯೇ ಬಂಧಿತರ ವಕೀಲರು, ಬಂಧಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಆರ್ಸೆನಲ್‌ ನೀಡಿರುವ ಎರಡನೇ ವರದಿಯನ್ನು ಇದಕ್ಕೆ ಬಳಸಿಕೊಳ್ಳಲು ರೋನಾ ವಿಲ್ಸನ್ ಅವರ ವಕೀಲರು ಸಿದ್ಧತೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷ್ಯಗಳು ಎಂದು ಪರಿಗಣಿಸಲಾಗಿರುವ ಎಲೆಕ್ಟ್ರಾನಿಕ್ ಕಡತಗಳನ್ನು, ತಮ್ಮ ಕಕ್ಷಿದಾರರ ಕಂಪ್ಯೂಟರ್‌ ಅನ್ನು ಹ್ಯಾಕ್‌ ಮಾಡಿ ಸೃಷ್ಟಿಸಲಾಗಿದೆ. ಹೀಗಾಗಿ ಇವುಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಲು ಅವರು ಯೋಚಿಸಿದ್ದಾರೆ.

16 ಆರೋಪಿಗಳು ಹಾಗೂ ವಿದ್ಯುನ್ಮಾನ ಪುರಾವೆ

ಮೇಲ್ಜಾತಿಯ ಹಿಂದೂಗಳಿಂದ ಕೂಡಿದ್ದ ಪೇಶ್ವೆಯ ಸೈನ್ಯ ಹಾಗೂ ಬಹುತೇಕ ದಲಿತರಿಂದ ಕೂಡಿದ್ದ ಬ್ರಿಟಿಷ್ ಸೇನೆಯ ನಡುವೆ ನಡೆದ ಯುದ್ಧದಲ್ಲಿ ದಲಿತರು ಜಯ ಸಾಧಿಸಿದ್ದರು. ಇದರ ದ್ವಿಶತಮಾನೋತ್ಸವ ಆಚರಣೆಯು ಪುಣೆ ಸಮೀಪದ ಭೀಮಾ–ಕೋರೆಗಾಂವ್ ಎಂಬಲ್ಲಿ 2018ರ ಜನವರಿ 1ರಂದು ಆಯೋಜನೆಗೊಂಡಿತ್ತು. ಆದರೆ, ಅದು ಹಿಂಸಾಚಾರಕ್ಕೆ ತಿರುಗಿತ್ತು. ದಲಿತರು ಮತ್ತು ಬಲಪಂಥೀಯ ಹಿಂದೂಗಳು ಕಾದಾಟ ನಡೆಸಿದ್ದರು. ಇದಕ್ಕೆ ಪೂರ್ವಭಾವಿಯಾಗಿ 2017ರ ಡಿಸೆಂಬರ್ 31ರಂದು ಒಂದು ಸಭೆ ನಡೆದಿತ್ತು. ಈ ಸಭೆ ಆಯೋಜನೆಗೂ ಎಲ್ಗಾರ್‌ ಪರಿಷತ್‌ಗೂ ನಂಟು ಇದೆ ಎಂಬ ಆರೋಪದ ಮೇಲೆ 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪುಣೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ
ಪುಣೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ

ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ ಪುಣೆ ಪೊಲೀಸರು, ಇದರಲ್ಲಿ ಮಾವೋವಾದಿಗಳ ಸಂಚು ಇದೆ ಎಂದು ಹೇಳಿದರು. ಆಗ ಪ್ರಚಲಿತಕ್ಕೆ ಬಂದಿದ್ದ ‘ನಗರ ನಕ್ಸಲ’ರತ್ತ ಬೊಟ್ಟು ಮಾಡಿದರು.ನಗರದ ಬುದ್ಧಿಜೀವಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಅಪಹಾಸ್ಯ ಮಾಡಲು ಬಲಪಂಥೀಯರು ‘ನಗರ ನಕ್ಸಲ್‌’ ಪದವನ್ನು ಚಾಲ್ತಿಗೆ ತಂದಿದ್ದರು.

ದ್ವಿಶತಮಾನೋತ್ಸವದ ಹಿಂದಿನ ದಿನ ನಡೆದ ಸಭೆಗೆ ಸಂಬಂಧಿಸಿದಂತೆ ಹಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳಿಗೆ ಸೇರಿದ ಸ್ಥಳದಲ್ಲಿ ಶೋಧ ನಡೆಸಿದ ಪೊಲೀಸರು, ಪುರಾವೆಯಾಗಿ ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಮತ್ತು ಇತರೆ ಉಪಕರಣಗಳನ್ನು ವಶಕ್ಕೆ ಪಡೆದಿದ್ದರು. ಭೀಮಾ–ಕೋರೆಗಾಂವ್ ಕಾರ್ಯಕ್ರಮ ಆಯೋಜಕರಲ್ಲಿ ಪ್ರಮುಖರಾದ ಸುಧೀರ್ ಧವಳೆ ಅವರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರೋನಾ ವಿಲ್ಸನ್ ಹಾಗೂ ವಕೀಲ ಸುರೇಂದ್ರ ಗಡಲಿಂಗ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದುದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ರೋನಾ ಅವರಿಗೆ ಸೇರಿದ ಕಂಪ್ಯೂಟರ್‌ನಲ್ಲಿ ಸಿಕ್ಕ ಫೈಲ್‌ಗಳನ್ನು ರೋನಾ ವಿಲ್ಸನ್, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಹಾಗೂ ಕವಿ ವರವರ ರಾವ್ ವಿರುದ್ಧದ ಸಾಕ್ಷ್ಯಗಳಾಗಿ ಪರಿಗಣಿಸಿ ಸಲ್ಲಿಸಲಾಗಿದೆ.

ಮಹಾರಾಷ್ಟ್ರ ರಾಜ್ಯ ಪೊಲೀಸರಿಂದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಯಿತು. ಈ ವೇಳೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಹೋಗಿ, ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ ಸರ್ಕಾರ ಅಧಿಕಾರಕ್ಕೆ ಬಂದಿತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎನ್‌ಐಎ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿತು. ಕ್ರೈಸ್ತ ಪಾದ್ರಿ ಸ್ಟ್ಯಾನ್ ಸ್ವಾಮಿ, ದೆಹಲಿ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹನಿಬಾಬು ತರಾಯಿಲ್, ಗೋವಾದ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆನಂದ್ ತೇಲ್ತುಂಬ್ಡೆ, ಪತ್ರಕರ್ತ ಗೌತಮ್ ನವಲಖಾ ಅವರನ್ನು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಹೆಸರಿಸಿತು.

ನಿಷೇಧಿತ ಮಾವೋವಾದಿ ಗುಂಪಿನೊಂದಿಗೆ ಸೇರಿ ಭಾರತ ಸರ್ಕಾರದ ವಿರುದ್ಧ ಸಂಚು ಹೂಡಿದ ಆರೋಪ ಇವರ ಮೇಲಿದೆ. ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) 1967ರ ಅಡಿಯಲ್ಲಿ ಈ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಹ್ಯಾಕರ್‌ನ ಕೈಚಳಕ

ರೋನಾ ವಿಲ್ಸನ್ ಅವರ ಲ್ಯಾಪ್‌ಟಾಪ್‌ನಲ್ಲಿ ಹ್ಯಾಕರ್ ಹಲವು ಬಾರಿ ಕಡತಗಳ ಹೆಸರನ್ನು (ಫೈಲ್‌ನೇಮ್) ಬದಲಿಸಿರುವ ನಿದರ್ಶನಗಳನ್ನು ಮತ್ತು ಒಮ್ಮೆ ತಪ್ಪು ಎಸಗಿರುವುದನ್ನು ಆರ್ಸೆನಲ್‌ ಗುರುತಿಸಿದೆ.

‘mohila meeting jan.pdf’ ಎಂಬ ಕಡತವನ್ನು ಸೇರಿಸಿದ ಸಂಪೂರ್ಣ ಪ್ರಕ್ರಿಯೆಯನ್ನು ಪತ್ತೆ ಮಾಡಲಾಗಿದೆ. ಹ್ಯಾಕರ್‌ನ ಎಲ್ಲಾ ಕ್ರಿಯೆಗಳ ಬಗ್ಗೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿವೆ. ಆದರೆ ಮೊಹಿಲಾ ಮೀಟಿಂಗ್‌ಗೆ ಸಂಬಂಧಿಸಿದಂತೆ ಕಲೆಹಾಕಲಾಗಿರುವ ಪ್ರಕ್ರಿಯೆಯ ವಿವಿಧ ಹಂತಗಳು, ಈ ವರದಿಯಲ್ಲಿ ಅತ್ಯಂತ ಮಹತ್ವದ ಭಾಗವಾಗಿವೆ’ ಎಂದು ಆರ್ಸೆನಲ್ ಕನ್ಸಲ್ಟಿಂಗ್‌ನ ಅಧ್ಯಕ್ಷ ಮಾರ್ಕ್‌ ಸ್ಪೆನ್ಸರ್ ಹೇಳಿದ್ದಾರೆ.

2018ರ ಜನವರಿ 2ರಂದು ನಡೆಸಲು ಉದ್ದೇಶಿಸಲಾಗಿದ್ದ ಮಹಿಳಾ ಸಭೆಗೆ (ಮೊಹಿಲಾ ಮೀಟಿಂಗ್‌) ಸಂಬಂಧಿಸಿದ ಕಡತದ ಬಗ್ಗೆ ಸ್ಪೆನ್ಸರ್ ಹೇಳುತ್ತಿದ್ದಾರೆ. ಈ ಕಡತದಲ್ಲಿ ಸಂಘಟಕರಾದ ಸುಧಾ ಭಾರದ್ವಾಜ್, ಶೋಮಾ ಸೆನ್‌ ಮತ್ತಿತರರ ಹೆಸರನ್ನು ಪಟ್ಟಿ ಮಾಡಲಾಗಿದೆ. ಸ್ಪೆನ್ಸರ್‌ ಅವರು ಹೇಳುತ್ತಿರುವ ಹ್ಯಾಕರ್‌ನ ಪ್ರಕ್ರಿಯಾ ಹಂತವು, ವಿಲ್ಸನ್ ಅವರ ಲ್ಯಾಪ್‌ಟಾಪ್‌ ಅನ್ನು ಹೇಗೆ ಮತ್ತು ಯಾವಾಗ ಹ್ಯಾಕ್‌ ಮಾಡಲಾಯಿತು ಹಾಗೂ ಕಡತಗಳನ್ನು ಹೇಗೆ ಸೇರಿಸಲಾಯಿತು ಎಂಬುದನ್ನು ವಿವರಿಸುತ್ತದೆ. ಇಂತಹ ಸಾಧನಗಳನ್ನು ಹ್ಯಾಕ್‌ ಮಾಡಲು ಅನುಕೂಲ ಮಾಡಿಕೊಡುವ ‘NetWire’ ಎಂಬ ಕುತಂತ್ರಾಂಶವನ್ನು ಬಳಸಿಕೊಂಡು 22 ಕಡತಗಳನ್ನು ವಿಲ್ಸನ್ ಅವರ ಲ್ಯಾಪ್‌ಟಾಪ್‌ಗೆ ಸೇರಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಹ್ಯಾಕಿಂಗ್‌ನ ಪ್ರೊಸೆಸ್ ಟ್ರೀ ಸ್ಕ್ರೀನ್‌ಶಾಟ್
ಹ್ಯಾಕಿಂಗ್‌ನ ಪ್ರೊಸೆಸ್ ಟ್ರೀ ಸ್ಕ್ರೀನ್‌ಶಾಟ್

ಹ್ಯಾಕರ್‌ ದೂರದಲ್ಲಿ ಕೂತುಕೊಂಡೇ ಈ ಲ್ಯಾಪ್‌ಟಾಪ್‌ನಲ್ಲಿನ ಚಟುವಟಿಕೆಗಳನ್ನು ನೋಡಿದ್ದಾನೆ. ಕಡತಗಳನ್ನು ಬದಲಿಸಿದ್ದಾನೆ, ಸೇರಿಸಿದ್ದಾನೆ ಮತ್ತು ಅಳಿಸಿಹಾಕಿದ್ದಾನೆ. ಟ್ರೋಜನ್ ಹಾರ್ಸ್‌ (Trojan horse) ಸ್ವರೂಪದ ವೈರಸ್ (ಕುತಂತ್ರಾಂಶ) ಬಳಸಿಕೊಂಡು ವಿಲ್ಸನ್ ಅವರ ಲ್ಯಾಪ್‌ಟಾಪ್‌ಗೆ ಹಲವು ಕಡತಗಳನ್ನು ಕಳುಹಿಸಲಾಗಿದೆ ಎಂಬುದನ್ನು ಎರಡನೇ ವರದಿಯಲ್ಲಿ ವಿವರಿಸಲಾಗಿದೆ. ಈ ಪ್ರಕರಣದಲ್ಲಿ ಈಗ ಬಂಧನದಲ್ಲಿ ಇರುವವರ ಮೇಲೆ ತನಿಖಾಧಿಕಾರಿಗಳು ಈ ಕಡತಗಳ ಆಧಾರದ ಮೇಲೆಯೇ ದೋಷಾರೋಪಣೆ ಮಾಡಿದ್ದಾರೆ.

ಭೀಮಾ-ಕೋರೆಗಾಂವ್ ಹಿಂಸಾಚಾರ ನಡೆದ 11 ದಿನದ ನಂತರ, 2018ರ ಜನವರಿ 11ರ ಸಂಜೆ 5.04ಕ್ಕೆ ವಿಲ್ಸನ್ ಅವರ ಲ್ಯಾಪ್‌ಟಾಪ್‌ನಲ್ಲಿ ‘ನೆಟ್‌ವೈರ್‌’ ಚಾಲೂ ಆಗಿದೆ ಎಂಬುದು ‘mohila meeting jan.pdf’ ಕಡತ ಸೇರ್ಪಡೆಯ ಪ್ರಕ್ರಿಯಾ ಹಂತದಲ್ಲಿ ದಾಖಲಾಗಿದೆ. ಸಂಜೆ 5.10ರಿಂದ 5.12ರ ಮಧ್ಯೆ ಹ್ಯಾಕರ್‌ ಮೂರು ಕಡತಗಳನ್ನು ಲ್ಯಾಪ್‌ಟಾಪ್‌ಗೆ ಸೇರಿಸಿದ್ದಾನೆ. ಲ್ಯಾಪ್‌ಟಾಪ್‌ಗೆ ತಾತ್ಕಾಲಿಕವಾಗಿ ಸೇರಿಸಲಾಗಿದ್ದ UnRAR ಕಡತದ ಮೂಲಕ ಈ ಮೂರು ಕಡತಗಳನ್ನು, ಅಗೋಚರ ಫೋಲ್ಡರ್‌ಗೆ ಕಳುಹಿಸಿದ್ದಾನೆ. UnRAR ಕಡತದ ಹೆಸರನ್ನು ‘Adobe.exe’ ಎಂದು ಬದಲಿಸಿದ್ದಾನೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕಡತಗಳನ್ನು ಸೇರಿಸುವ ಕಮಾಂಡ್‌ಗಳನ್ನು ಕೊಡುವಾಗ ಹ್ಯಾಕರ್ ಹೇಗೆ ತಪ್ಪೆಸಗಿದ್ದಾನೆ ಮತ್ತು ಅದನ್ನು ಹೇಗೆ ಸರಿಪಡಿಸಿದ್ದಾನೆ ಎಂಬುದನ್ನೂ ವರದಿಯಲ್ಲಿ ಕೂಲಂಕಷವಾಗಿ ವಿವರಿಸಲಾಗಿದೆ. ‘ಹ್ಯಾಕರ್‌ಗಳು, ಹ್ಯಾಕ್‌ ಮಾಡುವಾಗ ಹೀಗೆ ತಪ್ಪೆಸಗುವುದು ಅತಿಅಪರೂಪ. ಹೀಗಾಗಿ ಇಂತಹ ತಪ್ಪು ಸಹ ಅತ್ಯಂತ ಆಸಕ್ತಿದಾಯಕ’ ಎಂದು ಮಾರ್ಕ್ ಸ್ಪೆನ್ಸರ್‌ ಹೇಳಿದ್ದಾರೆ. ರೋನಾ ವಿಲ್ಸನ್ ಅವರ ಲ್ಯಾಪ್‌ಟಾಪ್‌ನಲ್ಲಿ ನೆಟ್‌ವೈರ್ ಚಾಲೂ ಆಗಿರುವ ಮತ್ತು ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ ಅನ್ನು ಆರ್ಸೆನಲ್ ಹಂಚಿಕೊಂಡಿದೆ.

‘ರೋನಾ ವಿಲ್ಸನ್ ಅವರ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ ಹೈಬರ್‌ನೇಟ್ ಅನ್ನು ಚಾಲೂ ಮಾಡಲು ಹ್ಯಾಕರ್, ನೆಟ್‌ವೈರ್‌ ಮೂಲಕ ನೀಡಿದ ಕಮಾಂಡ್‌ ದಾಖಲಾಗಿದೆ. 2018ರ ಜನವರಿ 14ರಂದು ವಿಂಡೋಸ್ ಹೈಬರ್‌ನೇಟ್ ಚಾಲೂ ಮಾಡಲಾಗಿದೆ. ಇದನ್ನು ಚಾಲೂ ಮಾಡಿದ ಕಂಪ್ಯೂಟರ್‌ನ ಐಪಿ ವಿಳಾಸವನ್ನು ನಾವು ಮೊದಲ ವರದಿಯಲ್ಲೇ ನೀಡಿದ್ದೇವೆ’ ಎಂದು ಮಾರ್ಕ್‌ ಸ್ಪೆನ್ಸರ್ ತಿಳಿಸಿದ್ದಾರೆ.

‘ವಿಲ್ಸನ್ ಮತ್ತು ಇತರರನ್ನು ಸಿಲುಕಿಸುವ ಉದ್ದೇಶದಿಂದ ಈ ಕಡತಗಳನ್ನು ಲ್ಯಾಪ್‌ಟಾಪ್ ಅಲ್ಲದೇ, ಎಕ್ಸ್‌ಟರ್ನಲ್‌ ಹಾರ್ಡ್‌ಡಿಸ್ಕ್ ಮತ್ತು ಪೆನ್‌ಡ್ರೈವ್‌ಗಳಿಗೂ ಸೇರಿಸಲಾಗಿತ್ತು. ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿದಾಗ ಹಾರ್ಡ್‌ಡಿಸ್ಕ್ ಮತ್ತು ಪೆನ್‌ಡ್ರೈವ್‌ಗೆ ಸ್ವಯಂಚಾಲಿತವಾಗಿ ಈ ಕಡತಗಳು ರವಾನೆ ಆಗುವ ರೀತಿ ಹ್ಯಾಕರ್ ವ್ಯವಸ್ಥೆ ಮಾಡಿದ್ದ. ನಮ್ಮ ಮೊದಲ ಮತ್ತು ಎರಡನೇ ವರದಿಯಲ್ಲಿ ನಾವು ಹೇಳಿರುವುದನ್ನು ಯಾರೂ ಪರಿಗಣಿಸಬೇಕಿಲ್ಲ. ಆದರೆ ಇದೇ ಎಲೆಕ್ಟ್ರಾನಿಕ್‌ ಪ್ರತಿಯನ್ನು ಇರಿಸಿಕೊಂಡು ಯಾವುದೇ ವಿಧಿ ವಿಜ್ಞಾನ ಪ್ರಯೋಗಾಲಯ ಸಹ ಇದನ್ನು ಪರಿಶೀಲಿಸಿದರೆ, ಇದೇ ಅಂಶಗಳು ಹೊರಬೀಳುತ್ತವೆ’ ಎಂದು ಸ್ಪೆನ್ಸರ್‌ ಹೇಳಿದ್ದಾರೆ.

‘ರೋನಾ ವಿಲ್ಸನ್ ಅವರ ಲ್ಯಾಪ್‌ಟಾಪ್‌ ಅನ್ನು ಹ್ಯಾಕರ್ ಹೇಗೆ ಹ್ಯಾಕ್ ಮಾಡಿದ ಮತ್ತು ಕಡತಗಳನ್ನು ಹೇಗೆ ಸೇರಿಸಿದ ಎಂಬುದನ್ನು ಈ ವರದಿಯಲ್ಲಿ ವಿವರವಾಗಿ ತೋರಿಸಲಾಗಿದೆ. ಈ ಪ್ರಕ್ರಿಯಾ ಹಂತದಲ್ಲಿ ಹ್ಯಾಕರ್ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ದಾನೆ. ಡಿಜಿಟಲ್ ತನಿಖಾ ಪರಿಣತರು ‘ವ್ಹಾ’ ಎನ್ನುವಂತಹ ಪತ್ತೆಕಾರ್ಯ ಇದು’ ಸ್ಪೆನ್ಸರ್ ಹೇಳಿದ್ದಾರೆ.

ಬೇರೆ ಸಾಕ್ಷ್ಯಗಳೂ ಇವೆ: ಎನ್‌ಐಎ

ಆರ್ಸೆನಲ್‌ ವರದಿಯ ಆಧಾರದಲ್ಲಿ, ಆನಂದ ತೇಲ್ತುಂಬ್ಡೆ ಪರ ವಕೀಲರು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಎನ್‌ಐಎ, ‘ಅದು ‘ಪ್ರಮಾಣೀಕೃತವಲ್ಲದ’ ತನಿಖೆಯಾಗಿರುವುದರಿಂದ ಅದರ ವರದಿಗಳನ್ನು ಅವಲಂಬಿಸಲು ಸಾಧ್ಯವಿಲ್ಲ’ ಎಂದಿತ್ತು. ವಿಲ್ಸನ್ ಮತ್ತು ಇತರ ಆರೋಪಿಗಳ ಎಲೆಕ್ಟ್ರಾನಿಕ್ ಸಾಧನಗಳಿಂದ ವಶಪಡಿಸಿಕೊಂಡಿರುವ ಸಾಕ್ಷ್ಯಗಳ ಆಧಾರದಲ್ಲಿ, ರಾಜ್ಯ ಪೊಲೀಸರು ಮತ್ತು ಎನ್‌ಐಎ ಅಧಿಕಾರಿಗಳು, ನೂರಾರು ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಖಾಸಗಿ ವಿಧಿವಿಜ್ಞಾನ ತಜ್ಞರು ಈ ಆರೋಪಪಟ್ಟಿಯ ವಿಶ್ವಾಸಾರ್ಹತೆಯನ್ನೇ ಈಗ ಪ್ರಶ್ನಿಸಿದ್ದಾರೆ. ಫೆ.10ರಂದು ನೀಡಿದ್ದ ಹೇಳಿಕೆಯೊಂದರಲ್ಲಿ ಆರ್ಸೆನಲ್‌ನ ಮೊದಲ ವರದಿಯನ್ನು ಎನ್‌ಐಎ ತಿರಸ್ಕರಿಸಿತ್ತು.

ಹ್ಯಾಕಿಂಗ್‌ನ ಪ್ರೊಸೆಸ್ ಟ್ರೀ ಸ್ಕ್ರೀನ್‌ಶಾಟ್
ಹ್ಯಾಕಿಂಗ್‌ನ ಪ್ರೊಸೆಸ್ ಟ್ರೀ ಸ್ಕ್ರೀನ್‌ಶಾಟ್

‘ಆರೋಪಪಟ್ಟಿಯ ಜತೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ವಿಧಿವಿಜ್ಞಾನ ವರದಿಗಳು ಭಾರತೀಯ ನ್ಯಾಯಾಲಯಗಳು ಅಂಗೀಕರಿಸಿರುವ, ಅಧಿಕೃತವಾಗಿ ಮಾನ್ಯತೆ ಪಡೆದ ಪ್ರಯೋಗಾಲಯದಿಂದ ಪಡೆದವುಗಳು. ಈ ಪ್ರಕರಣದಲ್ಲಿ, ಪುಣೆಯ ಪ‍್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದಿಂದ (ಆರ್‌ಎಫ್‌ಎಸ್‌ಎಲ್‌) ವರದಿಗಳನ್ನು ಪಡೆಯಲಾಗಿದೆ. ಅವರ ವರದಿಯ ಪ್ರಕಾರ ಅಂಥ ಯಾವುದೇ ಕುತಂತ್ರಾಂಶ ಕಂಡುಬಂದಿಲ್ಲ. ಉಳಿದೆಲ್ಲ ವಿಚಾರಗಳು ಸತ್ಯಕ್ಕೆ ದೂರವಾದವು’ ಎಂದು ಎನ್‌ಐಎ ವಕ್ತಾರ ರಾಯ್‌ ಹೇಳಿದ್ದಾರೆ.

ವಾದಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ನಾವು ಪರಿಶೀಲಿಸಿದ್ದೇವೆ. ‘ಆರೋಪಿಯ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಹಾಳುಮಾಡಿಲ್ಲ’ ಎಂದು ಹೇಳಿಕೆ ನೀಡುವಂತೆ 2018ರ ಕ್ಟೋಬರ್ 18ರಂದು ತನಿಖಾಧಿಕಾರಿಯು ಸರ್ಕಾರಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ಸರ್ಕಾರಿ ಪ್ರಯೋಗಾಲಯವು ಈ ವಿಚಾರದಲ್ಲಿ ಮೌನವಾಗಿತ್ತು ಎಂಬುದನ್ನು ದಾಖಲೆಗಳು ತೋರಿಸುತ್ತವೆ. ಇದಾದನಂತರ, ಆರೋಪಪಟ್ಟಿಯ ಒಂದು ಭಾಗವನ್ನು ಉಲ್ಲೇಖಿಸಿ, ‘ಕೆಲವು ಎಫ್‌ಎಸ್‌ಎಲ್‌ (ವಿಧಿವಿಜ್ಞಾನ ಪ್ರಯೋಗಾಲಯ) ವರದಿಗಳು ಇನ್ನಷ್ಟೇ ಲಭಿಸಬೇಕಾಗಿವೆ’ ಎಂದಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವಂತೆ ವಕ್ತಾರ ರಾಯ್‌ ಅವರನ್ನು ‘ಆರ್ಟಿಕಲ್‌ 14’ ಕೇಳಿದಾಗ, ‘ಎನ್‌ಐಎ ಈಗಾಗಲೇ ಆರೋಪಪಟ್ಟಿ ಸಲ್ಲಿಸಿಯಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಬಗ್ಗೆ ಯಾವುದೇ ವಿಚಾರದಲ್ಲಿ ನಾನು ಹೇಳಿಕೆ ನೀಡುವುದಿಲ್ಲ’ ಎಂದರು. ‘ದಾಖಲೆಗಳನ್ನು ಹಾಳುಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಎಫ್‌ಎಸ್‌ಎಲ್ ಏಕೆ ಪ್ರತಿಕ್ರಿಯೆ ನೀಡಲಿಲ್ಲ’ ಎಂಬ ನಿರ್ದಿಷ್ಟ ಪ್ರಶ್ನೆಯನ್ನು ಆರ್ಟಿಕಲ್‌ 14 ಕೇಳಿತ್ತು. ಅದಕ್ಕೂ ರಾಯ್‌ ಪ್ರತಿಕ್ರಿಯೆ ನೀಡಲಿಲ್ಲ.

ಆರೋಪಿಯ ವಿರುದ್ಧ ಎಲೆಕ್ಟ್ರಾನಿಕ್‌ ಅಲ್ಲದೆ ಇತರ ಸಾಕ್ಷ್ಯಗಳೂ ತಮ್ಮ ಬಳಿ ಇವೆ ಎಂದು ಆರಂಭದಲ್ಲಿ ಪೊಲೀಸರು ಮತ್ತು ಆ ನಂತರ ಎನ್‌ಐಎ ಹೇಳಿತ್ತು. ಆದರೆ, ‘ತನ್ನ ಸಿದ್ಧಾಂತಕ್ಕೆ ವಿರೋಧವಾಗಿದ್ದಾರೆ ಎಂದು ಭಾವಿಸಲಾಗಿರುವ ಹೋರಾಟಗಾರರನ್ನು ಗುರಿಯಾಗಿಸಲು ಸರ್ಕಾರವು ಸಾಕ್ಷ್ಯಗಳನ್ನು ಸೃಷ್ಟಿಸಿದೆ’ ಎಂದು ಮಾನವಹಕ್ಕು ಹೋರಾಟಗಾರರು ಮತ್ತು ವಕೀಲರು ಆರೋಪಿಸಿದ್ದಾರೆ.

ಮಾನವಹಕ್ಕುಗಳ ಪ್ರತಿಪಾದಕರನ್ನು ಬಲೆಗೆ ಬೀಳಿಸಿ, ಅವರು ದೀರ್ಘಕಾಲ ಜೈಲಿನಲ್ಲಿ ಉಳಿಯುವಂತೆ ಮಾಡಬೇಕು ಎಂಬ ಉದ್ದೇಶದಿಂದ, 2014ರ ನಂತರ ಈ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ವಿಲ್ಸನ್‌ ಅವರ ವಕೀಲ ಮಿಹಿರ್‌ ದೇಸಾಯಿ ಹೇಳಿದ್ದಾರೆ.

‘ಸ್ಟ್ರ್ಯಾಟಜಿ ಅಂಡ್‌ ಟ್ಯಾಕ್ಟಿಕ್ಸ್‌ ಆಫ್‌ ಇಂಡಿಯನ್‌ ರೆವಲ್ಯೂಷನ್‌’ ಎಂಬುದು ಸಾಕ್ಷ್ಯದ ರೂಪದಲ್ಲಿ ಅಧಿಕಾರಿಗಳು ಸಲ್ಲಿಸಿದ ದಾಖಲೆಗಳಲ್ಲಿ ಒಂದು. ಇದು ಗುಪ್ತ ದಾಖಲೆಯೇನಲ್ಲ, ಗೂಗಲ್‌ನಲ್ಲಿ ಹುಡುಕಿದರೆ ಎಲ್ಲರಿಗೂ ಸಿಗುತ್ತದೆ’ ಎಂದು ಅವರು ಹೇಳಿದರು. ಗೂಗಲ್‌ನಲ್ಲಿ ಹುಡುಕಿದಾಗ ಅದು ಲಭ್ಯವಾಯಿತು.

‘ಕಿರಿಕಿರಿಯ ಹಾಡು, ಹಾದಿತಪ್ಪಿಸುವ ಇತಿಹಾಸ’

16 ಮಂದಿಯ ವಿರುದ್ಧದ ತನ್ನ ಆರೋಪಗಳಿಗೆ ಪುಷ್ಟಿ ನೀಡಲು ಪುಣೆಯ ಪೊಲೀಸರು, ಎಲೆಕ್ಟ್ರಾನಿಕ್‌ ದಾಖಲೆಗಳಲ್ಲದೆ, ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿದ್ದಾರೆ; ಹಿಂದುಳಿದ ಸಮುದಾಯದವರಲ್ಲಿ ಮಾವೊವಾದಿ ಸಿದ್ಧಾಂತವನ್ನು ಬಿತ್ತಲು ಎಲ್ಗಾರ್‌ ಪರಿಷತ್‌, ಕಿರಿಕಿರಿ ಉಂಟು ಮಾಡುವ ಹಾಡುಗಳನ್ನೂ, ಹಾದಿತಪ್ಪಿಸುವ ಇತಿಹಾಸವನ್ನೂ ಪ್ರಸಾರ ಮಾಡಿದೆ. ಈ ಚಟುವಟಿಕೆಗಳು ದೇಶದ್ರೋಹ ಮತ್ತು ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಸಮನಾಗಿರುತ್ತವೆಎಂದು ‍ಪೊಲೀಸರು ಆರೋಪಿಸಿದ್ದಾರೆ.

ಇದನ್ನು ಉಲ್ಲೇಖಿಸಿ, ಪ್ರತಿಭಟನಾ ಸ್ಥಳದಲ್ಲಿ ಹಾಡಿದ್ದ ಹಾಡುಗಳಿಂದ ‘ಕಿರಿಕಿರಿ ಆದದ್ದು ಯಾರಿಗೆ’ ಎಂದು ದೇಸಾಯಿ ಪ್ರಶ್ನಿಸಿದ್ದಾರೆ. ‘ಪ್ರತಿಭಟನೆ ಮತ್ತು ಜಾತಿ ವಿರೋಧಿ ಹಾಡುಗಳು ಮಹಾರಾಷ್ಟ್ರದ ಸಂಪ್ರದಾಯ. ಅಣ್ಣಾಭಾವು ಸಾಠೆ, ಶಹೀರ್‌ ಅಮರ್‌ ಶೇಖ್‌, ಡಿ.ಎನ್‌. ಗಾಂವ್ಕರ್‌, ಗಾಯಕ ಮತ್ತು ಸಂಗೀತ ನಿರ್ದೇಶಕರಾದ ವಿಲಾಸ್‌ ಘೋರೆ ಮತ್ತು ಸಂಭಾಜಿ ಭಗತ್‌ ಮುಂತಾದವರು ಈ ಸಂಸ್ಕೃತಿಯ ಭಾಗವಾಗಿದ್ದರು ಎಂದು ಅವರು ಸಮಾಜ ಸುಧಾರಕರು ಮತ್ತು ಕ್ರಾಂತಿಕಾರಿಗಳನ್ನು ಉಲ್ಲೇಖಿಸಿದರು.

ಎಲ್ಗಾರ್‌ ಪರಿಷತ್‌ನ ಭಾಗವಾಗಿರುವ ಕಬೀರ್‌ ಕಲಾ ಮಂಚ್‌ನಲ್ಲಿ ನೀಡಲಾಗಿದ್ದ ಪ್ರದರ್ಶನಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿ, ‘ಜನರ ಮನಸ್ಸಿನಲ್ಲಿ ಸರ್ಕಾರದ ವಿರುದ್ಧ ದ್ವೇಷ ಹುಟ್ಟಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಆರೋಪಿಸಲಾಗಿದೆ. ಅಲ್ಲದೆ ಒಂದು ಉದಾಹರಣೆಯಾಗಿ ಅಲ್ಲಿ ಹಾಡಲಾಗಿದ್ದ, ‘ಜಬ್‌ ಝುಲ್ಮ್‌ ಹೊ ತೊ ಬಗಾವತ್‌ ಹೋನಿ ಚಾಹಿಯೆ ಶಹರ್‌ ಮೆ, ಅಗರ್‌ ಬಗಾವತ್‌ ನಾ ಹೊ ತೊ, ಬೆಹತರ್‌ ಹೊ ಕೆ, ಯಹ ರಾತ್‌ ಢಲ್ನೆಸೆ ಪೆಹಲೆ ಶಹರ್‌ ಜಲ್‌ಕರ್‌ ರಾಖ್‌ ಹೋಜಾಯೆ’ (ದಬ್ಬಾಳಿಕೆ ಆದಾಗ ನಗರದಲ್ಲಿ ದಂಗೆ ಆಗಬೇಕು. ದಂಗೆ ಆಗದಿದ್ದಲ್ಲಿ ರಾತ್ರಿಯಾಗುವುದರೊಳಗೆ ನಗರವೇ ಉರಿದು ಬೂದಿಯಾಗುವುದೇ ಒಳ್ಳೆಯದು) ಎಂಬ ಹಾಡನ್ನು ಉಲ್ಲೇಖಿಸಲಾಗಿದೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಬ್ರಾಹ್ಮಣ ಕೇಂದ್ರಿತವಾಗಿವೆ ಎಂಬ ಕಾರಣಕ್ಕೆ ದಲಿತರು ಈ ಸಂಘಟನೆಗಳನ್ನು ವಿರೋಧಿಸುತ್ತಾರೆ ಎಂದು ವಿಲ್ಸನ್‌ ಸೇರಿದಂತೆ 16 ಆರೋಪಿಗಳು ತೀರ್ಮಾನಿಸಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ಈ ಧೋರಣೆಯನ್ನೇ ಬಳಸಿಕೊಂಡು ಆರೋಪಿಗಳು ಅವ್ಯವಸ್ಥೆ ಸೃಷ್ಟಿಸಲು ಮುಂದಾದರು ಎಂಬ ನಿಲುವನ್ನೂ ವ್ಯಕ್ತಪಡಿಸಿದೆ.

ಈ ಊಹಾತ್ಮಕ ಅಂಶಗಳನ್ನೇ ಮುಂದಿಟ್ಟುಕೊಂಡು, ಆರೋಪಿಗಳು ದೇಶದ ಸಮಗ್ರತೆ ಹಾಗೂ ಸಾರ್ವಭೌಮತ್ವದ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳು ವಾದಿಸಿದ್ದಾರೆ.

ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯ ಒಂದು ಭಾಗ ಹೀಗಿದೆ: ‘ಹಿಂದುಳಿದ ವರ್ಗಗಳ ಚಿಂತನೆಗಳು ಈಗ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಬ್ರಾಹ್ಮಣಕೇಂದ್ರಿತ ಕಾರ್ಯಸೂಚಿಗೆ ವಿರುದ್ಧವಾಗಿದೆ ಎಂದು ಉಲ್ಲೇಖಿಸಿರುವುದು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಪತ್ರಗಳಲ್ಲಿ ಇದೆ. ಅವರ ಮನಸ್ಸಿನಲ್ಲಿರುವ ಇಂಥ ಅಸಹನೆಯನ್ನು ಬಂಡವಾಳ ಮಾಡಿಕೊಂಡು, ದೊಡ್ಡಪ್ರಮಾಣದಲ್ಲಿ ಅವರನ್ನು ಸಂಘಟಿಸಿ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ಆರೋಪಿಗಳು ಮಾಡಿದ್ದಾರೆ’.

(ಶ್ರೀಗಿರೀಶ್‌ ಜಾಲಿಹಾಲ್‌ ಅವರು ದಿ ರಿಪೋರ್ಟ್ಸ್‌ ಕಲೆಕ್ಟಿವ್‌ನ (www.reporters-collective.in) ಸದಸ್ಯ. ಈ ವರದಿಯ ಇಂಗ್ಲಿಷ್‌ ಅವತರಣಿಕೆಯು Article 14, www.article-14.comನಲ್ಲಿ ಮೊದಲು ಪ್ರಕಟ ಆಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT