ಸೋಮವಾರ, ಮೇ 23, 2022
30 °C

ಮದ್ಯ ನಿಷೇಧ ನಿರ್ಧಾರ ಹಿಂಪಡೆಯುವುದಿಲ್ಲ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ: ರಾಜ್ಯದಲ್ಲಿ ಮದ್ಯ ನಿಷೇಧ ಮುಂದುವರಿಯಲಿದ್ದು, ನಿರ್ಧಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಪುನರುಚ್ಚರಿಸಿದ್ದಾರೆ.

ಇಲ್ಲಿನ ಜ್ಞಾನ ಭವನದಲ್ಲಿ ನಡೆದ 'ನಶೆ ಮುಕ್ತ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್, 'ಮಹಿಳೆಯರ ಒತ್ತಾಯದಂತೆ ಬಿಹಾರದಲ್ಲಿ 2016ರಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಪ್ರಾರಂಭಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರವೇ ನಿಷೇಧ ಹೇರಿದ್ದೆವು. ಆದರೆ, ನಗರ ಪ್ರದೇಶದ ಮಹಿಳೆಯರೂ ಇದೇ ಬೇಡಿಕೆ ಇಟ್ಟ ಕಾರಣ ಸಂಪೂರ್ಣ ನಿಷೇಧ ಹೇರಿದೆವು' ಎಂದು ಹೇಳಿದ್ದಾರೆ.

ಸರ್ವಪಕ್ಷ ಸಭೆ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಯಿತು ಎಂಬುದನ್ನು ಒತ್ತಿ ಹೇಳಿದ ನಿತೀಶ್, ನಿರ್ಧಾರದತ್ತ ಬೊಟ್ಟು ಮಾಡುತ್ತಿರುವವರೂ ಸಭೆಯಲ್ಲಿದ್ದರು ಎಂಬುದನ್ನು ಮರೆಯಬಾರದು ಎಂದು ಕುಟುಕಿದ್ದಾರೆ.

ಇದೇ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ 3.5 ಲಕ್ಷ ನೌಕರರು ತಮ್ಮ ಜೀವನದಲ್ಲಿ ಇನ್ನುಮುಂದೆ ಮದ್ಯಪಾನ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದರು.

ಮದುವೆಗಳ ಸಂದರ್ಭದಲ್ಲಿ ಕಲ್ಯಾಣ ಮಂಟಪಗಳಲ್ಲಿನ ವದುವಿನ ಕೊಠಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ದಾಸ್ತಾನು ಮತ್ತು ಸಾಗಣೆ ಬಗ್ಗೆ ತಪಾಸಣೆ ನಡೆಸುವ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ, 'ರಾಜ್ಯದಲ್ಲಿ ಮದ್ಯ ಬಳಕೆ ಸಾಧ್ಯವಿರುವ ಯಾವುದೇ ಸ್ಥಳದಲ್ಲಿಯೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ' ಎಂದಿದ್ದಾರೆ.

'ನಾನು ಶಾಲೆಗೆ ಹೋಗುತ್ತಿದ್ದಾಗ, ಕುಡುಕರ ಬಗ್ಗೆ ಅಸಹನೆಯಿತ್ತು. ನನ್ನ ಜೀವಿತಾವಧಿಯಲ್ಲಿ ಯಾವಾಗಲಾದರೂ ಮದ್ಯ ನಿಷೇಧಿಸುವ ಅವಕಾಶ ಸಿಕ್ಕರೆ ಅದನ್ನು ಮಾಡಲೇಬೇಕೆಂದು ಆಗಲೇ ನಿರ್ಧರಿಸಿದ್ದೆ. ಕೊನೆಗೂ ಮಾಡಿದೆ. ಕುಡಿತದಿಂದ ಪ್ರಾಣ ಹಾನಿಯಾಗುತ್ತದೆ. ಜನರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, 'ಮದ್ಯವು ಹೇಗೆ ಪ್ರಾಣ ತೆಗೆಯುತ್ತದೆ ಎಂಬುದನ್ನು ಬಿಹಾರದಲ್ಲಿ ಕಾಣಬಹುದಾಗಿತ್ತು. ಮದ್ಯದಂತಹ ಕೆಟ್ಟ ಪಾನಿಯಾಗಳನ್ನು ಸೇವಿಸುವವರು ನಿಧನ ಹೊಂದುತ್ತಾರೆ. ರಸ್ತೆ ಅಪಘಾತಕ್ಕೊಳಗಾಗುವ ಶೇ 27 ರಷ್ಟು ಜನರ ಸಾವಿಗೆ ಮದ್ಯ ಸೇವನೆಯೇ ಕಾರಣ. ಶೇ 18 ರಷ್ಟು ಜನರು ಗಲಾಟೆ ಮಾಡಿಕೊಳ್ಳುವುದಕ್ಕೆ ಮದ್ಯಪಾನ ಕಾರಣ. ವಿಶ್ವದಾದ್ಯಂತ ಶೇ 17 ರಷ್ಟು ಜನರು ಮದ್ಯ ಸೇವಿಸಿದ್ದಾಗಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ' ಎಂದು ಅಂಕಿ–ಅಂಶ ಸಹಿತ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು